ಕಾಶಿಯ ಕೇಸರಿ ಸರೋವರದಲ್ಲಿ ಮೋದಿ ಗಂಗಾರತಿ!

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಇಂದು ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ. 2ನೇ ಬಾರಿಗೆ ಸಂಸದನಾಗಿ ಆಯ್ಕೆ ಬಯಸಿರುವ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆಗೂ ಮುನ್ನ ಗುರುವಾರ ಬೃಹತ್​ ರೋಡ್​ ಶೋ ನಡೆಸಿದ್ರು. 5 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ರೋಡ್​ ಶೋನಲ್ಲಿ ಭಾಗಿಯಾಗಿದ್ರು. ಬಿಹಾರದ ದರ್ಬಾಂಗ್​ನಲ್ಲಿ ಬಹಿರಂಗ ಪ್ರಚಾರ ನಡೆಸಿದ ಪ್ರಧಾನಿ ಮೋದಿ ಸಂಜೆ 4.30ರ ವೇಳೆಗೆ ವಾರಾಣಸಿಗೆ ಆಗಮಿಸಿದ್ರು. ಬಳಿಕ ಸಂಜೆ 5.20ಕ್ಕೆ ಪಂಡಿತ್ ಮದನ್​ ಮೋಹನ್​ ಮಾಳವೀಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪ್ರಧಾನಿ ಮೋದಿ, ನೇರವಾಗಿ ರೋಡ್​ ಶೋಗೆ ಆಗಮಿಸಿದ್ರು.

ಬನಾರಸ್ ಹಿಂದೂ ವಿಶ್ವ ವಿದ್ಯಾಲಯದಿಂದ ರೋಡ್ ಶೋ ಆರಂಭವಾಗಿ, ಲಂಕಾ ಘಾಟ್ ಮೂಲಕ ಆನಂದಮಯೀ ಆಸ್ಪತ್ರೆ, ಶಿವಾಲಾ, ಸೋನಾರ್​​ಪುರ, ದೌಲಿಯಾವರೆಗೂ ರೋಡ್​ ಶೋ ನಡೀತು. ಸಂಜೆ 5.20ಕ್ಕೆ ಆರಂಭವಾದ ರೋಡ್​ ಶೋನಲ್ಲಿ ಜನಸಾಗರವೇ ಸೇರಿತ್ತು. ಹೆಜ್ಜೆ ಮೇಲೆ ಹೆಜ್ಜೆ ಎನ್ನುವಂತೆ 7 ಕಿಲೋ ಮೀಟರ್​ ಸಾಗಿದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್​ ಶೋ, ದಶಾಶ್ವಮೇಧ ಘಾಟ್‌ನಲ್ಲಿ ಮುಕ್ತಾಯವಾಯ್ತು. ರಾತ್ರಿ 7.30ಕ್ಕೆ ದಶಾಶ್ವಮೇಧ ಘಾಟ್​ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಗಂಗಾರತಿ ಪೂಜೆಯಲ್ಲಿ ಭಾಗಿಯಾದ್ರು. ಸುಮಾರು 45 ನಿಮಿಷ 12 ಮಂದಿ ಅರ್ಚಕರು ವಿಶೇಷ ಮಂತ್ರಘೋಷಗಳ ಮೂಲಕ ಪೂಜೆ ನೆರವೇರಿಸಿದ್ರು. ಬಳಿಕ ಪ್ರಧಾನಿ ಮೋದಿ ಗಂಗಾ ನದಿಗೆ ಇಳಿದು ವಿಶೇಷ ಪೂಜೆ ಸಲ್ಲಿಸಿದ್ರು.

ಗಂಗಾರತಿ ಪೂಜೆ ವಿಶೇಷ ಏನು..?

1991ರಲ್ಲಿ ವಾರಾಣಸಿಯಲ್ಲಿ ಗಂಗಾರತಿ ಆರಂಭವಾಗಿದ್ದು. ಪ್ರತಿದಿನ ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆಯೇ ಗಂಗಾರತಿ ನಡೆಯುತ್ತೆ. ಕಾಶಿ ವಿಶ್ವನಾಥನ ಸನ್ನಿಧಿಯ ಸಮೀಪದಲ್ಲಿರೋ ದಶಾಶ್ವಮೇಧ ಘಾಟ್​ನಲ್ಲಿ ಹಬ್ಬಗಳು ಹಾಗೂ ಮಂಗಳವಾರದಂದು ವಿಶೇಷ ಪೂಜೆ ನಡೆಯುತ್ತೆ. ಗಂಗಾರತಿ ನೋಡಲೆಂದೇ ಕಾಶಿಗೆ ಶಿವಭಕ್ತರು ಭಕ್ತರು ಬರುತ್ತಾರೆ. ಗಂಗಾರತಿ ವಿಶೇಷ ಪೂಜೆ ವೇಳೆ ಅರ್ಚಕ ಸಮೂಹ ಬೃಹತ್ ದೀಪಗಳನ್ನು ಬೆಳಗುವ ಮಹಾಶಿವ, ಗಂಗಾಮಾತೆ, ಸೂರ್ಯ, ಅಗ್ನಿಗೆ ಸಲ್ಲಿಸ್ತಾರೆ. ಈ ವೇಳೆ ಭಕ್ತರು ದೋಣಿಗಳಲ್ಲಿ ಕುಳಿತು ಗಂಗಾರತಿ ವೀಕ್ಷಣೆ ಮಾಡ್ತಾರೆ. ಶಿವನ ಆದೇಶದಂತೆ ಪ್ರತಿದಿನ ಅಗ್ನಿ ಪೂಜೆ ನಡೆಯುತ್ತೆ ಅನ್ನೋದು ಪ್ರತೀತಿ. ಒಟ್ಟು 5 ಬಗೆಯ ಆರತಿ ನೆರವೇರುತ್ತೆ. ದಶಾಶ್ವಮೇಧ ಘಾಟ್​ನಲ್ಲಿ ಗಂಗಾರತಿ ಶುರು ಮಾಡಿದ್ದು ಬ್ರಹ್ಮ ಎನ್ನುವ ನಂಬಿಕೆಯು ಇದೆ. ಗಂಗಾ ಮೂರ್ತಿ ಇರೋ ಎಣ್ಣೆ ದೀಪದಿಂದ ಆರಂಭವಾಗಿ ಸರ್ಪದಾಕಾರದ ಬಹುದೀಪಾರತಿಯಿಂದ ಮುಕ್ತಾಯವಾಗುತ್ತೆ. ಈ ಪೂಜೆಯನ್ನು ಸ್ವತಃ ದೇವಾನುದೇವತೆಗಳೇ ಕಣ್ತುಂಬಿಕೊಂಡು ಆಶೀರ್ವಾದ ಮಾಡ್ತಾರೆ ಅನ್ನೋ ನಂಬಿಕೆಯಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಚುನಾವಣೆಯಲ್ಲಿ ಒಳ್ಳೇದಾಗಲಿ ಅನ್ನೋ ಕಾರಣಕ್ಕೆ ಪೂಜೆ ನೆರವೇರಿಸಿದ್ದಾರೆ.

Leave a Reply