ವಾರಣಾಸಿಯಲ್ಲಿ ನನ್ನ ಜಯ ಇತಿಹಾಸ ಪುಸ್ತಕ ಸೇರುವಂತಿರಬೇಕು: ಪ್ರಧಾನಿ ನರೇಂದ್ರ ಮೋದಿ

ಡಿಜಿಟಲ್ ಕನ್ನಡ ಟೀಮ್:

‘ದೇಶದಲ್ಲಿ ಆಡಳಿತ ಪರ ಅಲೆ ಇದೆ. ನಿನ್ನೆಯೇ ನಾನು ವಾರಣಾಸಿಯನ್ನು ಗೆದ್ದಾಗಿದೆ.ವಾರಣಾಸಿಯಲ್ಲಿ ನನ್ನ ಜಯ ಹೇಗಿರಬೇಕು ಎಂದರೆ ರಾಜಕೀಯ ಪಂಡಿತರು ಈ ಫಲಿತಾಂಶವನ್ನು ಇತಿಹಾಸ ಪುಸ್ತಕದಲ್ಲಿ ಸೇರಿಸಬೇಕು…’ ಇದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಾರಣಾಸಿ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ಕಾರ್ಯಕರ್ತರ ಸಮಾವೇಶದಲ್ಲಿ ಕೊಟ್ಟ ಕರೆ.

ನಾಮಪತ್ರ ಸಲ್ಲಿಕೆಗೆ ಮುನ್ನ ಪ್ರಧಾನಿ ಮೋದಿ ‘ಕಾಶಿಯ ಕೋತ್ವಾಲ’ ಎಂದೇ ಪರಿಗಣಿಸಲಾದ ಕಾಲಭೈರವ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ನಾಮಪತ್ರ ಸಲ್ಲಿಕೆ ವೇಳೆ ಓರ್ವ ಚೌಕಿದಾರ, ಓರ್ವ ಮಹಿಳಾ ಪ್ರಾಂಶುಪಾಲರು, ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಪುತ್ರ, ಕಾಶಿ ನಿವಾಸಿ ದೋಮ್ ರಾಜಾ ಮತ್ತು ಓರ್ವ ಸ್ಥಳೀಯ ಅಂಬಿಗ (ದೋಣಿ ಮಾಲೀಕ) ಮೋದಿ ಅವರಿಗೆ ಸಾಥ್ ನೀಡಿದರು.

ಗುರುವಾರ ಬೃಹತ್ ರೋಡ್ ಶೋ ನಡೆಸಿ ಕಾಶಿಯಲ್ಲಿ ಗಂಗಾರತಿ ಮಾಡಿದ ಮೋದಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಮೋದಿ… ಮೋದಿ… ಎಂಬ ಕಾರ್ಯಕರ್ತರ ಮಂತ್ರ ಜಪದ ನಡುವೆ ಭಾಷಣ ಮಾಡಿದ ಮೋದಿ ಅವರು ಹೇಳಿದ್ದಿಷ್ಟು…

‘ನನಗೆ ಬೂತ್ ಮಟ್ಟದ ಕಾರ್ಯಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಆರಂಭಿಕ ದಿನಗಳಲ್ಲಿ ಗೋಡೆಗಳಿಗೆ ಪಕ್ಷದ ಪೋಸ್ಟರ್‌ಗಳನ್ನು ಅಂಟಿಸುವ ಕೆಲಸ ಮಾಡುತ್ತಿದ್ದೆ. ದೇಶದಲ್ಲೀಗ ಆಡಳಿತ ಪರ ಅಲೆ ಇದೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ, ಕಾಶಿ ಘಾಟ್‌ನಿಂದ ಪೋರ್‌ಬಂದರ್‌ ವರೆಗೂ ದೇಶಾದ್ಯಂತ ಎಲ್ಲೆಡೆ ಜನರ ಬಾಯಲ್ಲಿ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಘೋಷಣೆ ಕೇಳಿ ಬರುತ್ತಿದೆ.

ವಾರಾಣಸಿಯನ್ನು ನಿನ್ನೆಯೇ ನಾನು ಗೆದ್ದಿದ್ದೇನೆ. ಆದರೆ ಚುನಾವಣೆ ಫಲಿತಾಂಶ ಹೇಗಿರಬೇಕು ಎಂದರೆ, ರಾಜಕೀಯ ಪಂಡಿತರು ನನ್ನ ಗೆಲುವನ್ನು ಇತಿಹಾಸ ಪುಸ್ತಕದಲ್ಲಿ ದಾಖಲಿಸಿಡುವಂತೆ ಇರಬೇಕು. ನೀವು ಜನರ ಹೃದಯವನ್ನು ಗೆದ್ದುಬಿಟ್ಟರೆ ಪಕ್ಷದ ಗೆಲುವು ತಾನಾಗಿಯೇ ಬರುತ್ತದೆ. ಒಂದು ಬೂತ್‌ನಲ್ಲಿಯೂ ಮತ ಕಡಿಮೆಯಾಗಬಾರದು. ಕಡಿಮೆಯಾದರೆ ವಾರಾಣಸಿಯ ಗೆಲುವನ್ನು ಖುಷಿಪಡಲು ಸಾಧ್ಯವಾಗದು. ಆ ಮೂಲಕ ಈ ಬಾರಿ ಗೆಲುವು ಎಲ್ಲ ಹಳೆಯ ದಾಖಲೆಗಳನ್ನು ಮುರಿದು ಇತಿಹಾಸ ಸೃಷ್ಟಿಸುವಂತಿರಬೇಕು. ಉತ್ತಮ ಆಡಳಿತಕ್ಕಾಗಿ ನಾವು ಪ್ರಾಮಾಣಿಕ ಕೆಲಸ ಮಾಡಿದ್ದೇವೆ.

Leave a Reply