ಮೋದಿ ಮೋಡಿಗೆ ದೀದಿ ಬೆಚ್ಚಿಬಿದ್ರಾ..?

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ‌ ನರೇಂದ್ರ ಮೋದಿ ಇತ್ತೀಚಿಗೆ ಒಂದು‌ ಸಂದರ್ಶನ ಕೊಟ್ಟಿದ್ರು. ನಟ ಅಕ್ಷಯ್ ಕುಮಾರ್ ಅವರ ಜೊತೆ ವಿಶೇಷ ಸಂದರ್ಶನದಲ್ಲಿ ನರೇಂದ್ರ ಮೋದಿ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಕಟ್ಟಾ ಎದುರಾಳಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಬಗ್ಗೆ ಹೇಳಿದ ಸ್ಫೋಟಕ ವಿಚಾರ, ದೀದಿ ಖ್ಯಾತಿಯ ಮಮತಾ ದಿಗಿಲುಗೊಳ್ಳುವಂತೆ ಮಾಡಿದೆ.

ಪಶ್ಚಿಮ ಬಂಗಾಳದಲ್ಲಿ ಸ್ವತಃ ನರೇಂದ್ರ ಮೋದಿ ಕಮಲ ಅರಳಿಸಲು ಬೆವರು ಹರಿಸುತ್ತಿದ್ದಾರೆ. ಒಂದೆರಡು ಸ್ಥಾನಗಳನ್ನಾದರು ಗೆಲ್ಲಬೇಕು ಎಂದು ಹರಸಾಹಸ ಪಡ್ತಿದ್ದಾರೆ. ಈ ನಡುವೆ ಮಮತಾ ಬ್ಯಾನರ್ಜಿ ಹಾಗೂ ನಾನು ರಾಜಕೀಯವಾಗಿ ಎಷ್ಟೇ ವೈರತ್ವ ಹೊಂದಿದ್ದರೂ ನಾನೂ ಹಾಗೂ ಮಮತಾ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಪ್ರತಿವರ್ಷ ಕನಿಷ್ಠ ಎರಡು ಜೊತೆ ಖುರ್ತಾವನ್ನಾದರೂ ಉಡುಗೊರೆಯಾಗಿ ಕಳಿಸುತ್ತಾರೆ ಎಂದಿದ್ದರು. ಇದರಿಂದ ಕಂಗಾಲಾದ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕಮಲ ಪ್ರತಿಷ್ಠಾಪಿಸಲು ನರೇಂದ್ರ ಮೋದಿ ಮಮತಾ ಉಡುಗೊರೆ ಅಸ್ತ್ರ ಬಳಸಿದ್ದಾರೆ ಎನ್ನಲಾಗ್ತಿದೆ. ಮಮತಾ ಬ್ಯಾನರ್ಜಿ ಕೋಮುವಾದಿ ಪಕ್ಷ ಎಂದು ಬಿಜೆಪಿಯನ್ನು ಟೀಕಿಸುತ್ತಾ ರಾಜಕಾರಣ ಮಾಡಿದವರು. ಆದ್ರೆ ಅದೇ ಮಮತಾ ಬ್ಯಾನರ್ಜಿ, ನರೇಂದ್ರ ಮೋದಿಯವರಿಗೆ ಉಡುಗೊರೆ ಕಳಿಸುತ್ತಾರೆ ಎಂದರೆ ಏನರ್ಥ ಎನ್ನುವ ಪ್ರಶ್ನೆ ಜನರ ಮನಸಲ್ಲಿ ಮೂಡಿಸುವ ಉದ್ದೇಶದಿಂದಲೇ ಈ ರೀತಿ ಗೋಗ್ಲಿ ಹಾಕಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ. ಆದ್ರೆ ಉಡುಗೊರೆಯಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಿರುವ ಮಮತಾ ಬ್ಯಾನರ್ಜಿ, ನರೇಂದ್ರ ಮೋದಿ ರೀತಿ ಹಲವು ಗಣ್ಯರಿಗೆ ಉಡುಗೊರೆ ಕಳುಹಿಸುತ್ತೇನೆ. ಆದ್ರೆ ಅದನ್ನ ಮೋದಿ ರೀತಿ ರಾಜಕಾರಣಕ್ಕೆ ಬಳಸಿಕೊಳ್ಳುವುದಿಲ್ಲ. ಉಡುಗೊರೆ ಕೊಡುವುದು ನಮ್ಮ ಸಂಸ್ಕೃತಿ, ಇದೊಂದು ಸೌಜನ್ಯಯುತವಾದ ಕೆಲಸ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುವ ತಂತ್ರಗಾರಿಕೆ ಮಾಡಿದ್ದಾರೆ. ಕುರ್ತಾ ಕೊಡುವುದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ. ಸಿಬಿಐ ಮೂಲಕ ಎದುರಿಸಲು ನೋಡಿದ್ರು. ಆದರೂ ನಾನು ಅವರೊಂದಿಗೆ ಸೌಜನ್ಯವಾಗಿಯೇ ನಡೆದು ಕೊಳ್ಳುತ್ರಿದ್ದೇನೆ ಎನ್ನುವ ಮೂಲಕ ನಾನು ನರೇಂದ್ರ ಮೋದಿ ಅವರ ಬದ್ಧ ಎದುರಾಳಿ ಎಂದು ತೋರಿಸಲು ಯತ್ನಿಸಿದ್ದಾರೆ. ಒಟ್ಟಾರೆ ನರೇಂದ್ರ ಮೋದಿ ಅವರು ಬಿಟ್ಟ ಬಾಣ ನೇರವಾಗಿ ಪಶ್ಚಿಮ ಬಂಗಾಳ ಮತದಾರನ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದ್ದು, ಯಾವ ಮಟ್ಟದಲ್ಲಿ ಪರಿಣಾಮ ಬೀರುತ್ತೆ ಕಾದು ನೋಡಬೇಕು. ಮೋದಿ ಬಾಣಕ್ಕೆ ಮಮತಾ ಪ್ರತಿದಾಳಿ ಯಾವ ರೀತಿ ತನ್ನ ರಕ್ಷಣಾ ಕೋಟೆಯನ್ನು ಕಾಪಾಡುತ್ತೆ ಅನ್ನೋ ಕುತೂಹಲವೂ ಜನರನ್ನು ಕಾಡ್ತಿದೆ. ಫಲಿತಾಂಶ ಅದೇನೇ ಆಗಿರಲಿ, ನರೇಂದ್ರ ಮೋದಿ ಕುರ್ತಾ ಉಡುಗೊರೆ ವಿಚಾರ ಮಮತಾ ಬ್ಯಾನರ್ಜಿಯನ್ನು ಚಿಂತೆಗೀಡು ಮಾಡಿರೋದು ಮಾತ್ರ ಸುಳ್ಳಲ್ಲ.

Leave a Reply