ಕುಕ್ಕೆ ಸುಬ್ರಹ್ಮಣ್ಯಕ್ಕೆ ಚಿನ್ನದ ರಥ ಕೊಡಬೇಕಾ..? ಬೇಡ್ವಾ..?

ಡಿಜಿಟಲ್ ಕನ್ನಡ ಟೀಮ್:

ಹಿಂದೂಗಳ ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯ ಸರ್ಕಾರ ಚಿನ್ನದ ರಥ ನಿರ್ಮಾಣ ಮಾಡಿಕೊಡಲು ಒಪ್ಪಿಗೆ ನೀಡಿದೆ. ಈಗಾಗಲೇ ರಥ ನಿರ್ಮಾಣ ಕೆಲಸ ಆರಂಭವಾಗಿದ್ದು, ಶೀಘ್ರದಲ್ಲಿ ಸುಬ್ರಹ್ಮಣ್ಯನ ರಥಕ್ಕೆ ಚಿನ್ನದ ಲೇಪನ ಕೆಲಸ ಆರಂಭವಾಗಲಿದೆ.

ಮರದ ರಥಕ್ಕೆ ಚಿನ್ನದ ಶೀಟ್ ಬಳಸಿ ಅದರ ಮೇಲೆ ಕುಸುರಿ ಕೆಲಸ ಮಾಡಲಾಗುತ್ತದೆ. 12 ವರ್ಷಗಳ ಹಿಂದೆಯೇ ಮರದ ರಥ ನಿರ್ಮಾಣ ಕೆಲಸ ನಡೆಯುತ್ತಿದೆ. ಸಾಗುವಾನಿ ಮರದಿಂದಲೇ ರಥ ನಿರ್ಮಾಣ ಮಾಡಲಾಗ್ತಿದೆ.  2006ರಲ್ಲಿ ಲಕ್ಷ್ಮೀ ನಾರಾಯಣ ಆಚಾರ್ಯರಿಗೆ ಚಿನ್ನದ ರಥ ನಿರ್ಮಾಣದ ಟೆಂಡರ್ ದೊರಕಿತ್ತು. ಅವರ ಪುತ್ರ ರಾಜ್‌ ಗೋಪಾಲ್ ಆಚಾರ್ಯ ಅವರ ನೇತೃತ್ವದಲ್ಲಿ ಚಿನ್ನದ ರಥ ನಿರ್ಮಾಣ ಕೆಲಸ ನಡೆಯುತ್ತಿದೆ. ಚಿನ್ನದ ಬೆಲೆ‌ ಏರಿಕೆ ಹಾಗೂ ಇತರ ಕಾರಣಗಳಿಂದ ಕೆಲಸ ಸ್ಥಗಿತವಾಗಿತ್ತು. ಇದೀಗ ಮತ್ತೆ ಸಿಎಂ‌ ಕುಮಾರಸ್ವಾಮಿ ನಿರ್ದೇಶನದ ಮೇರೆಗೆ ಚಿನ್ನದ ರಥದ ಕೆಲಸ ಪ್ರಾರಂಭವಾಗಿದೆ. ರಥಕ್ಕೆ ಬರೋಬ್ಬರಿ 240 ಕೆಜಿ ಚಿನ್ನವನ್ನು ಬಳಸಲಾಗುತ್ತದೆ. ಹಾಗಾಗಿ ಇಂದಿನ ಲೆಕ್ಕಾಚಾರದಲ್ಲಿ ಚಿನ್ನದ ರಥ ನಿರ್ಮಾಣಕ್ಕೆ 80 ರಿಂದ 85 ಕೋಟಿ ರೂಪಾಯಿ ವೆಚ್ಚವಾಗಲಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರಿಂದ ಬಂದಿರುವ ದೇಣಿಗೆ ರೂಪದಲ್ಲಿ ಹಣ ಹಾಗೂ ಚಿನ್ನ ಬಂದಿರುವುದನ್ನು ರಥಕ್ಕೆ ಬಳಕೆ ಮಾಡಿಕೊಂಡು, ಶೀಘ್ರದಲ್ಲಿ ಚಿನ್ನದ ರಥದ ಕೆಲಸ ಪ್ರಾರಂಭವಾಗಲಿದೆ. ಮರದ ರಥದ ಮೇಲೆ ಚಿನ್ನದ ಕುಸುರಿ ಕೆಲಸ ರಥದ ಚಕ್ರ ಹಾಗೂ ಮೆಟ್ಟಿಲು ಮೇಲೆ ಬೆಳ್ಳಿಯಿಂದ ನಿರ್ಮಾಣ ಮಾಡಲಾಗುತ್ತದೆ. ಚಕ್ರ ಹಾಗೂ ಮೆಟ್ಟಿಲು ಹೊರತುಪಡಿಸಿ ಉಳಿದೆಲ್ಲಕ್ಕೂ ಚಿನ್ನದ ತಗಡಿನ‌‌ ಹೊದಿಕೆ ಹಾಕಲಾಗುತ್ತದೆ. ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಚಿನ್ನದ ರಥ ತಯಾರಾಗಲಿದೆ ಎನ್ನಲಾಗ್ತಿದೆ.

ರಥ ಕೊಡ್ತಿರೋದಕ್ಕೆ ರಾಜಕೀಯ ಟೀಕೆ ಎಷ್ಟು ಸರಿ..?

2007ರಲ್ಲಿ ರಥ ನಿರ್ಮಾಣಕ್ಕೆ ಅಂದಿನ ಜೆಡಿಎಸ್ – ಬಿಜೆಪಿ ಸರ್ಕಾರ ಅನುಮೋದನೆ ನೀಡಿದೆ. ಆದ್ರೆ ಆ ಬಳಿಕ ಅಸ್ತಿತ್ವಕ್ಕೆ ಬಂದಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರ ಚಿನ್ನದ ರಥ ನಿರ್ಮಾಣ ಕಾರ್ಯಕ್ಕೆ ಕೊಕ್ಕೆ ಹಾಕಿದ್ದವು. ಇದೀಗ ಮತ್ತೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಚನೆಯಾಗಿದ್ದು, ನಿಂತು ಹೋಗಿದ್ದ ಕೆಲಸಕ್ಕೆ ಚಾಲನೆ ಸಿಕ್ಕಿದೆ. ಈಗ ಕುಮಾರಸ್ವಾಮಿ ಅವರ ಈ ನಿರ್ಧಾರವನ್ನು ರಾಜಕೀಯವಾಗಿ ನೋಡಲಾಗುತ್ತಿದೆ.

ಕುಮಾರಸ್ವಾಮಿ ಅವರಿಗೆ 2019 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಗನನ್ನು ಲೋಕಸಭಾ ಚುನಾವಣಾ ಅಖಾಡಕ್ಕೆ ಕರೆತರುತ್ತೇನೆ ಎಂದು ಕನಸು ಬಿದ್ದಿತ್ತೇ..? ಅದಕ್ಕಾಗಿ ಅಂದೇ ಹರಕೆ ಕಟ್ಟಿಕೊಂಡಿದ್ದರೆ..? ಅಥವಾ ಈಗ ಗೆಲುವಿಗಾಗಿ ಹಳೇ ಯೋಜನೆಯನ್ನು ಹರಕೆ ಕಟ್ಟಿಕೊಂಡು ಬಿಟ್ಟರೇ..? ಎಂಬ ಪ್ರಶ್ನೆಗಳು, ಚರ್ಚೆಗಳು ನಡೆಯುತ್ತಿವೆ

ಒಂದು ವೇಳೆ ಇದೇ ಕುಮಾರಸ್ವಾಮಿ ಸರ್ಕಾರ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಚಿನ್ನದ ರಥ ಕೊಡಲು ನಿರಾಕರಣೆ ಮಾಡಿದ್ದರೇ‌, ಅಲ್ಪಸಂಖ್ಯಾತರನ್ನು ಓಲೈಸುವ ಸರ್ಕಾರ, ಹಿಂದೂ ಧರ್ಮದ ದೇವಸ್ಥಾನಕ್ಕೆ ಚಿನ್ನದ ರಥ ಕೊಡಲು ಹಿಂದೇಟು ಹಾಕಿದೆ ಎಂಬ ಟೀಕೆ ಸಹಜವಾಗಿಯೇ ಮೂಡುತ್ತಿತ್ತು. ಮುಜರಾಯಿ ಇಲಾಖೆಯಿಂದ ಮುಸ್ಲಿಂ, ಕ್ರೈಸ್ತರಿಗೆ ಬೇಕಾಬಿಟ್ಟಿ ಹಣಕೊಡುವ ರಾಜ್ಯ ಸರ್ಕಾರ ಹಿಂದೂ ಧರ್ಮದಿಂದ ಬರುವ ಆದಾಯದಲ್ಲಿ ಚಿನ್ನದ ರಥ ಮಾಡಿಸಿಕೊಡಲು ಒಲ್ಲೆ ಎನ್ನುತ್ತಿದೆ ಎಂಬ ಆರೋಪ ಕೂಡ ಬರುತ್ತಿತ್ತು. ಈ ಬಗ್ಗೆ ಕುಮಾರಸ್ವಾಮಿ ಕೂಡ ಆಪ್ತರ ಬಳಿ ಮಾತನಾಡಿದ್ದು, ಹರಕೆ ಮಾಡಿಕೊಂಡ ಯಾರೊಬ್ಬರು ಬೇರೆಯವರ ಹಣದಲ್ಲಿ ಹರಕೆ ತೀರಿಸುವುದಿಲ್ಲ. ಆಗಿದ್ದ ಮೇಲೆ ಮಹಾನ್ ದೈವಭಕ್ತ ಕುಟುಂಬವಾದ ನಮ್ಮ ಕುಟುಂಬದಲ್ಲಿ ಸರ್ಕಾರದ ಹಣದಲ್ಲಿ ಹರಕೆ ತೀರಿಸುತ್ತೀವಾ ಎಂದು ಹೇಳಿಕೊಂಡಿದ್ದಾರೆ.

Leave a Reply