ಚೌಕಿದಾರ್ ವರ್ಸಸ್ ರಿಯಲ್ ಚೌಕಿದಾರ್..!

ಡಿಜಿಟಲ್ ಕನ್ನಡ ಟೀಮ್:

ಹಿಂದೂಗಳ ಐತಿಹಾಸಿಕ ಕ್ಷೇತ್ರವಾದ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದ ಕಳೆದ ಬಾರಿ ಲೋಕಸಭೆಗೆ ಸ್ಪರ್ಧೆ ಮಾಡಿದ್ದ ನರೇಂದ್ರ ಮೋದಿ ಅಭೂತಪೂರ್ವ ಫಲಿತಾಂಶ ಪಡೆದಿದ್ದರು. ಆಮ್ ಆದ್ಮಿ ಪಾರ್ಟಿ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಸ್ಪರ್ಧೆ ಮಾಡಿದ್ದರೂ ಪ್ರಧಾನಿ ಅಭ್ಯರ್ಥಿ ಆಗಿದ್ರಿಂದ ಭಾರೀ ದೊಡ್ಡ ಮಟ್ಟದಲ್ಲಿ ಗೆಲುವು ದೊರೆತಿತ್ತು. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ನಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡಲು ಆಸಕ್ತಿ ತೋರಿದ್ದರು.‌ ಅಖಾಡ ರಂಗು ಪಡೆದುಕೊಳ್ಳಲಿದೆ ಎನ್ನುವಷ್ಟರಲ್ಲಿ ಕಾಂಗ್ರೆಸ್ ಅಜಯ್ ರಾವ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿ ಅಚ್ಚರಿ ಮೂಡಿಸಿತ್ತು. ಇದೀಗ ಎಸ್ ಪಿ ಮತ್ತು ಬಿಎಸ್ ಪಿ ಮೈತ್ರಿ ಚೌಕಿದಾರ್ ನರೇಂದ್ರ ಮೋದಿ ತಲೆಕೆಡಿಸಿಕೊಳ್ಳುವಂತೆ ಮಾಡಿದೆ.

ಮೈ ಬಿ ಚೌಕಿದಾರ್ ಎಂದು ಅಬ್ಬರದ ಪ್ರಚಾರ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಿಯಲ್ ಚೌಕಿದಾರ್‌ನನ್ನು ಎದುರಾಳಿಯಾಗಿ ಮಾಡುವ ಮೂಲಕ ರಾಜಕೀಯ ತಂತ್ರಗಾರಿಕೆ ಪ್ರದರ್ಶನ ಮಾಡಿದೆ. ಉತ್ತರ ಪ್ರದೇಶದಲ್ಲಿ ಎಸ್‌ಪಿ ಬಿಎಸ್‌ಪಿ ಮಹಾಘಟಬಂಧನ್ ಮಾಡಿಕೊಂಡು ಕ್ಷೇತ್ರ ಹೊಂದಾಣಿಕೆ ಮಾಡಿಕೊಂಡು ಸ್ಪರ್ಧೆ ಮಾಡುತ್ತಿವೆ. ಹೀಗಾಗಿ ವಾರಾಣಸಿ ಲೋಕಸಭಾ ಕ್ಷೇತ್ರ ಎಸ್‌ಪಿ ಪಾಲಾಗಿದೆ. ಸಮಾಜವಾದಿ ಪಕ್ಷ ಶಾಲಿನಿ ಯಾದವ್ ಅವರಿಗೆ ಟಿಕೆಟ್ ಘೋಷಣೆ ಮಾಡಿತ್ತು. ಆದ್ರೆ ಏಕಾಏಕಿ ಇಂದು ತನ್ನ ನಿಲುವು ಬದಲಿಸಿದ್ದು, ಈಗಾಗಲೇ ಪಕ್ಷೇತರ ಅಭ್ಯರ್ಥಿ ಕಣದಲ್ಲಿರುವ ಮಾಜಿ ಸೈನಿಕನನ್ನೇ ಬೆಂಬಲಿಸಲು ನಿರ್ಧಾರ ಮಾಡಿದ್ದು, ಸಮಾಜವಾದಿ ಪಕ್ಷದ ವಕ್ತಾರ ಮನೋಜ್ ರಾಯ್ ಧೂಪ್‌ಚಂದಿ ಈ ಘೋಷಣೆ ಮಾಡಿದ್ದಾರೆ. ಶಾಲಿನಿ ಯಾದವ್ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದರು. ಇದೀಗ ನಿವೃತ್ತ ಸೈನಿಕನನ್ನೇ ಅಭ್ಯರ್ಥಿಯಾಗಿ ಮಾಡಲು ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.

ಕಳೆದ ಬಾರಿ ಬರೋಬ್ಬರಿ ಶೇಕಡ 56 ರಷ್ಟು ಮತ ಪಡೆದು ಜಯಭೇರಿ ಬಾರಿಸಿದ್ದ ನರೇಂದ್ರ ಮೋದಿ, ತನ್ನ ಎದುರಾಳಿ ಅರವಿಂದ್ ಕೇಜ್ರಿವಾಲ್ ಶೇಕಡ 20 ರಷ್ಟು ಮತಗಳನ್ನು ಪಡೆದಿದ್ರು.‌ ಅಜಯ್ ರಾಯ್ ಕೇವಲ 7% ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದು. ಹೀಗಾಗಿ ಮೋದಿಗೆ ದೊಡ್ಡ ಸವಾಲು ಒಡ್ಡುವ ಸಲುವಾಗಿ ಎಸ್‌ಪಿ ಈ ಬಾರಿ ನಿವೃತ್ತ ಸೈನಿಕ ತೇಜ್ ಬಹದ್ದೂರ್ ಅವರನ್ನು ಅಭ್ಯರ್ಥಿಯಾಗಿ ಮಾಡಲು ಮುಂದಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ತೇಜ್ ಬಹದ್ದೂರ್, ನಾನು ಕಳೆದ ತಿಂಗಳು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಇಳಿಯುವ ನಿರ್ಧಾರ ಪ್ರಕಟಿಸಿದ ಬಳಿಕ ಸಾಕಷ್ಟು ಪಕ್ಷಗಳಿಂದ ಆಹ್ವಾನ ಬಂದಿದೆ ಎಂದಿದ್ದಾರೆ. ಜೊತೆಗೆ ನಾನು ಚುನಾವಣೆಯಲ್ಲಿ ಸೋಲುವ ಅಥವಾ ಗೆಲ್ಲುವ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿಲ್ಲ. ಆದ್ರೆ ಪ್ರಧಾನಿ ಮೋದಿ ಅವರಿಗೆ ತನ್ನ ಪ್ರತಿಬಿಂಬ ಕಾಣುವಂತೆ ಮಾಡಲು ರಾಜಕೀಯಕ್ಕೆ ಧುಮುಕಿದ್ದೇನೆ ಎಂದಿದ್ದಾರೆ. ಇನ್ನೂ ಪ್ರಧಾನಿ ನರೇಂದ್ರ ಮೋದಿ ನಾನೊಬ್ಬ ಸೇನಾ ಪ್ರೇಮಿ, ಸೇನೆಗೆ ಒಳ್ಳೆಯದನ್ನೇ ಬಯಸುತ್ತೇನೆ ಎನ್ನುತ್ತಾರೆ. ಸೈನಿಕರ ಯಾವುದೇ ಬೇಡಿಕೆಯನ್ನು ಅವರು ಈಡೇರಿಸಿಲ್ಲ. 21 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ ನನ್ನನ್ನು ಸೇನೆಯಿಂದ ವಜಾ ಮಾಡಲಾಯಿತು. ಅದಕ್ಕೆ ಕಾರಣ, ನಾನು ಕಳಪೆ ಮಟ್ಟದ ಆಹಾರ ಹಾಗೂ ಅಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ಬಗ್ಗೆ ದನಿ ಎತ್ತಿದ ಕಾರಣಕ್ಕೆ ಎಂದು ಟೀಕಿಸಿದ್ದಾರೆ. 21 ವರ್ಷಗಳ ಕಾಲ ದೇಶ ರಕ್ಷಣೆ ಮಾಡಿದ ನಾನು ನಿಜವಾದ ಚೌಕಿದಾರ. ಪ್ರಧಾನಿ ನರೇಂದ್ರ ಮೋದಿ ಅಲ್ಲ ಎಂದು ಗುಡುಗಿದ್ದಾರೆ. ಇದೀಗ ಸೇನೆ ಬಗ್ಗೆ ಮಾತನಾಡುತ್ತಾ ಲೊಕಸಭಾ ಚುನಾವಣೆ ನಡೆಸುತ್ತಿರುವ ಬಿಜೆಪಿ ನಾಯಕರು, 21 ವರ್ಷ ದೇಶ ಸೇವೆ ಮಾಡಿ ಸೇನೆಯಿಂದ ವಜಾ ಆಗಿರುವ ನಿಜವಾದ ಚೌಕಿದಾರ್ ಬಗ್ಗೆ ಏನ್ ಹೇಳುತ್ತೆ ಅನ್ನೋ ಕುತೂಹಲ ಹುಟ್ಟಿಸಿದೆ.‌ ವಾರಾಣಸಿಯಲ್ಲಿ ನಿಜವಾದ ಚೌಕಿದಾರ್ ಜೊತೆ ಬಾಯಿ ಮಾತಿನ ಚೌಕಿದಾರ್ ಅಖಾಡಕ್ಕೆ ಇಳಿದಿದ್ದಾರೆ.

ತೇಜ್ ಬಹದ್ದೂರ್ ಗೆ ವಿಘ್ನ!

ಈ ಮಧ್ಯೆ ತೇಜ್ ಬಹದ್ದೂರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಬಿಎಸ್ಎಫ್ ನಿಂದ ನಿರಾಪೇಕ್ಷಣ ಪತ್ರ ಪಡೆದು ಚುನಾವಣಾ ಆಯೋಗಕ್ಕೆ ಒದಗಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಸೇನೆಯಲ್ಲಿ ಯೋಧರಿಗೆ ಕಳಪೆ ಆಹಾರವನ್ನು ನೀಡಲಾಗುತ್ತಿದೆ ಎಂದು ಆರೋಪಿಸಿ ತೇಜ್ ಬಹದ್ದೂರ್ 2017ರಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರು. ಹೀಗಾಗಿ 2018ರಲ್ಲಿ ಭಾರತೀಯ ಸೇನೆ ಅಶಿಸ್ತಿನ ವರ್ತನೆ ಎಂಬ ಕಾರಣಕ್ಕೆ 2018ರಲ್ಲಿ ತೇಜ್ ಬಹದ್ದೂರ್ ಅವರನ್ನು ಸೇವೆಯಿಂದ ವಜಾಗೊಳಿಸಿತ್ತು.

ಅಶಿಸ್ತಿನ ಕಾರಣಕ್ಕೆ ವಜಾಗೊಂಡಿರುವ ತೇಜ್ ಬಹದ್ದೂರ್ ಗೆ ಬಿಎಸ್ ಎಫ್ ನಿರಾಪೇಕ್ಷಣ ಪತ್ರ ನೀಡುತ್ತದೆಯೇ? ಇದರ ಹಿಂದೆ ರಾಜಕೀಯ ಷಡ್ಯಂತ್ರ ಇದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

Leave a Reply