ಮಸೂದ್ ಅಜರ್ ಈಗ ಜಾಗತಿಕ ಭಯೋತ್ಪಾದಕ! ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ರಾಜತಾಂತ್ರಿಕ ಜಯ!

ಡಿಜಿಟಲ್ ಕನ್ನಡ ಟೀಮ್:

ಮುಂಬೈ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್ ನನ್ನು ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಬೇಕು ಎಂಬ ಭಾರತದ ಮೂರ್ನಾಲ್ಕು ವರ್ಷಗಳ ಹೋರಾಟಕ್ಕೆ ಇಂದು ಯಶಸ್ಸು ಸಿಕ್ಕಿದೆ.

ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದ ಮಸೂದ್ ಅಜರ್ ನನ್ನು ಜಾಗತಿಕ ಮಟ್ಟದಲ್ಲಿ ದಿಗ್ಬಂಧನ ಹಾಕಲು ಭಾರತ ಕಳೆದ ಹಲವು ವರ್ಷಗಳಿಂದ ನಿರಂತರ ಪ್ರಯತ್ನ ಮಾಡುತ್ತಲೇ ಬಂದಿತ್ತು. ಆದರೆ ವಿಶ್ವಸಂಸ್ಥೆ ಭದ್ರತಾ ಸಮಿತಿಯ 14 ಸದಸ್ಯ ರಾಷ್ಟ್ರಗಳ ಪೈಕಿ ಚೀನಾ ಹೊರತು ಪಡಿಸಿ ಉಳಿದೆಲ್ಲಾ ರಾಷ್ಟ್ರಗಳು ಬೆಂಬಲ ಸೂಚಿಸಿದ್ದವು.

ಭಾರತದ ಪರವಾಗಿ ಅಮೆರಿಕ, ರಷ್ಯಾ, ಫ್ರಾನ್ಸ್, ಬ್ರಿಟನ್ ರಾಷ್ಟ್ರಗಳು ಮಸೂದ್ ಅಜರ್ ನಿಷೇಧಿಸಲು ಪ್ರಸ್ತಾವನೆ ಸಲ್ಲಿಸಿದ್ದವು. ಪ್ರತಿ ಬಾರಿ ಪ್ರಸ್ತಾವನೆ ಸಲ್ಲಿಕೆಯಾದಾಗಲು ಚೀನಾ ತನ್ನ ವಿಟೋ ಅಧಿಕಾರ ಚಲಾಯಿಸಿ ಅಡ್ಡಿ ಪಡಿಸುತ್ತಿತ್ತು.

ಪುಲ್ವಾಮ, ಬಾಲಕೋಟ್ ನಲ್ಲಿ ಉಗ್ರ ದಾಳಿ ನಂತರ ಜಾಗತಿಕ ಪ್ರಭಾವಿ ರಾಷ್ಟ್ರಗಳು ಭಾರತದ ಬೆನ್ನಿಗೆ ನಿಂತು ಚೀನಾ ಮೇಲೆ ಒತ್ತಡ ಹೇರಿದ್ದವು. ಈ ಎಲ್ಲದರ ಪರಿಣಾಮ ಇಂದು ಉಗ್ರ ಮಸೂದ್ ಅಜರ್ ಜಾಗತಿಕ ಉಗ್ರ ಎಂದು ಘೋಷಣೆ ಮಾಡಲಾಗಿದೆ.

ಅಂದಹಾಗೆ ಈ ಜಾಗತಿಕ ಉಗ್ರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಿಂದ ಆಗುವ ಪರಿಣಾಮ ಏನು ಎಂದು ನೋಡುವುದಾದರೆ, ವಿಶ್ವಸಂಸ್ಥೆಯ ಲ್ಲಿ ಜಾಗತಿಕ ಉಗ್ರ ಪಟ್ಟಿಗೆ ಸೇರ್ಪಡೆಯಾದ ನಂತರ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಆ ಉಗ್ರನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ವಿಶ್ವಸಂಸ್ಥೆಯ ಯಾವುದೇ ಸದಸ್ಯ ರಾಷ್ಟ್ರ ಆತನೊಂದಿಗೆ ಆರ್ಥಿಕ ವ್ಯವಹಾರ ಇಟ್ಟುಕೊಳ್ಳುವಂತಿಲ್ಲ. ಇನ್ನು ಉಗ್ರ ಸಂಘಟನೆ ಹಾಗೂ ಉಗ್ರನಿಗೆ ಜಾಗತಿಕವಾಗಿ ನಿಷೇಧ ಹೇರಿದಂತಾಗುತ್ತದೆ.

ಪಾಕಿಸ್ತಾನದ ಬೀದಿ ಬೀದಿಗಳಲ್ಲಿ ರಾಜಾರೋಷವಾಗಿ ತಿರುಗಾಡುತ್ತಾ ರಾಜಕೀಯ ಪಕ್ಷ ಕಟ್ಟಿ ಜನನಾಯಕನಾಗಲು ಹೊರಟಿದ್ದ ಮಸೂದ್ ಅಜರ್ ಕನಸು ಭಗ್ನಗೊಂಡಿದೆ.

Leave a Reply