ಕುಮಾರಣ್ಣನಿಗೆ ಚೆಲುವಣ್ಣ ತರಾಟೆ!

ಡಿಜಿಟಲ್ ಕನ್ನಡ ಟೀಮ್:

ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ ಅನ್ನೋ ಬಗ್ಗೆ ವಿಡಿಯೋ ಬಹಿರಂಗ ಆದ ಬಳಿಕ ನಾಗಮಂಗಲ ಮಾಜಿ ಶಾಸಕ ಚಲುವರಾಯಸ್ವಾಮಿ ಇಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಜೆಡಿಎಸ್​ ವಿರುದ್ಧ ವಾಗ್ದಾಳಿ ನಡೆಸಿರುವ ಚಲುವರಾಯಸ್ವಾಮಿ, ಮಂಡ್ಯದಲ್ಲಿ ನಮ್ಮನ್ನ ಕರೆದು ಅಭ್ಯರ್ಥಿ ಘೋಷಣೆ ಮಾಡಬೇಕಿತ್ತು. ಅದನ್ನು ಬಿಟ್ಟು, ಬೆನ್ನಿಗೆ ಚೂರಿ ಹಾಕಿದವರು ಎಂದು ಹೇಳ್ತಾರೆ. ಮಂಡ್ಯದಲ್ಲಿ ನಾವು ಸಮರ್ಥರಿದ್ದೇವೆ ಅಂತಾನೂ ಸಿಎಂ ಹೇಳ್ತಾರೆ. ಇಷ್ಟೆಲ್ಲ ಹೇಳಿದ್ಮೇಲೆ ಪ್ರಚಾರಕ್ಕೆ ಹೋಗಕ್ಕಾಗುತ್ತಾ..? ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ನಾವು ಯಾರ ಪರವೂ ಪ್ರಚಾರ ಮಾಡದೆ ದೂರ ಉಳಿದಿದ್ವಿ. ಹಾಗೆ ಅಂದ ಮಾತ್ರಕ್ಕೆ ಚುನಾವಣೆ ಮುಗಿದ ನಂತರವೂ ಅಂತರ ಕಾಯ್ದುಕೊಳ್ಳೋದು ಕಷ್ಟ. ನಮ್ಮ ಖಾಸಗಿ ವಿಚಾರದ ಬಗ್ಗೆ ಯಾರೂ ಮಾತಾಡೋದು ಬೇಡ ಎಂದಿದ್ದಾರೆ.

ಇನ್ನೂ ನಮ್ಮ ವಿರುದ್ಧ ಹೈಕಮಾಂಡ್​ಗೆ ದೂರು ಕೊಡಲು ಜೆಡಿಎಸ್​ ನಾಯಕರು ಸಾಕ್ಷ್ಯ ಸಂಗ್ರಹಿಸ್ತಿದ್ದಾರೆ. HDK ಎಷ್ಟು ದಿನ ಕಾಂಗ್ರೆಸ್ ಪಕ್ಷ ಕಟ್ತಾರೆ ನೋಡೋಣ ಎಂದು ವ್ಯಂಗ್ಯವಾಡಿದ್ದಾರೆ. ನಾವು ಹೋದಲ್ಲೆಲ್ಲ ಇಂಟೆಲಿಜೆನ್ಸ್ ಅಧಿಕಾರಿಗಳು ಫಾಲೋ ಮಾಡ್ತಾರೆ. ಮಾಡ್ಲಿ ಬಿಡಿ, ನಾವೇನು ಟೆರರಿಸ್ಟಾ..? ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಗರಂ ಆಗಿದ್ದಾರೆ.

ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡಬೇಡಿ, ಅಂತರ ಕಾಯ್ದುಕೊಳ್ಳಿ ಎಂದು ಹಿರಿಯ ಕಾಂಗ್ರೆಸ್​ ನಾಯಕರು ಸೂಚನೆ ಕೊಟ್ಟಿದ್ದರು. ಹಾಗಾಗಿ ನಾವು ಪ್ರಚಾರಕ್ಕೆ ತೆರಳಿರಲಿಲ್ಲ. ಆದ್ರೆ ಮಂಡ್ಯದ ನಾಗಮಂಗಲದಲ್ಲಿ ಮುಸ್ಲಿಂ ಮುಖಂಡರೊಬ್ಬರ ಮನೆಗೆ ಹೋಗಿದ್ದೆ. ಅಲ್ಲಿ 50 ಜನ ಸೇರಿದ್ರು ಅಷ್ಟೆ. ನಾನು ಯಾವ ಮಸೀದಿಗೂ ಹೋಗಿ ಪ್ರಚಾರ ಮಾಡಿಲ್ಲ. ಸಭೆ ಸಮಾರಂಭ ನಡೆಸಿ ನಾವ್ಯಾರು ಕ್ಯಾಂಪೇನ್ ಮಾಡಿಲ್ಲ. ಆಪ್ತರು ಸಿಕ್ಕಾಗ ನಿನಗೆ ಇಷ್ಟಬಂದ ಹಾಗೆ ಮಾಡಿ ಅಂದಿದ್ದೇವೆ. ಅದೆಲ್ಲ ಕ್ಯಾಂಪೇನ್ ಅಲ್ಲ ಎಂದು ಚುನಾವಣಾ ಪ್ರಚಾರ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ಈ ಚುನಾವಣೆಯನ್ನು ಮಂಡ್ಯ ಜನತೆಗೆ ಬಿಟ್ಟುಬಿಡೋಣ, ತೀರ್ಪು ಬರುವ ತನಕ ಸ್ವಲ್ಪ ಸುಮ್ಮನಿರೋಣ. ಸಿಎಂ ಕುಮಾರಸ್ವಾಮಿ ಕೂಡ ಹಾಗೆ ಮಾಡಬಹುದು ಅಂದುಕೊಂಡಿದ್ದೇನೆ. ಖಾಸಗಿಯಾಗಿ ನಾವು ಸೇರಿದ್ದ ವಿಡಿಯೋ ತೆಗೆದುಕೊಂಡಿದ್ದೇ ಅಪರಾಧ ಎಂದು ಕಿಡಿಕಾರಿದ್ದಾರೆ. ಇನ್ನು ಮಂಡ್ಯದಲ್ಲಿ ಆಫೀಸರ್ಸ್ ಪತ್ನಿಯರೆಲ್ಲಾ ಚುನಾವಣಾ ಕ್ಯಾಂಪೇನ್ ಮಾಡಿದ್ದಾರೆ. ಹಣ ಹಂಚಿದ್ದಾರೆ ಎಂದು ಚೆಲುವರಾಯಸ್ವಾಮಿ ಜೆಡಿಎಸ್​ ವಿರುದ್ಧ ನೇರ ಆರೋಪ ಮಾಡಿದ್ದಾರೆ.

ಪೊಲೀಸ್ ಅಧಿಕಾರಿಗಳ ಮೂಲಕವೇ ನಿನ್ನೆ ಮೀಟಿಂಗ್ ವಿಡಿಯೊ ಬಹಿರಂಗ ಆಗಿದೆ. ನಾವು ಒಂದೆಡೆ ಸೇರಿರೋದು ದೊಡ್ಡ ಅಪರಾಧವೇನು ಅಲ್ಲ ಎಂದಿದ್ದಾರೆ.

ಅತ್ತ ಚಲುವರಾಸ್ವಾಮಿ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್​ ನಾಯಕರು, ಪಂಚತಾರ ಹೋಟೆಲ್​ನಲ್ಲಿ ಪಾರ್ಟಿ ಮಾಡಿದ ವಿಡಿಯೋ ಬಿಡುಗಡೆ ಬಗ್ಗೆ ಮಾತನಾಡಿದ್ದಾರೆ. ಮಂಡ್ಯ ಜಿಲ್ಲಾ ಕಾಂಗ್ರೆಸ್​ ನಾಯಕರ ವಿರುದ್ಧ ಕ್ರಮಕ್ಕೆ ಜೆಡಿಎಸ್​ ಒತ್ತಡ ಹಾಕುತ್ತಿದ್ದು, ಜೆಡಿಎಸ್​ ಒತ್ತಡಕ್ಕೆ ಮಣಿಯದಿರಲು ಕಾಂಗ್ರೆಸ್​ ನಾಯಕರು ತೀರ್ಮಾನ ಮಾಡಿದ್ದಾರೆ ಎನ್ನಲಾಗ್ತಿದೆ. ಈ ಆರೋಪಕ್ಕೆ ಪುರಕವಾಗಿ ಸುಮಲತಾ ಔತಣಕೂಟದ ಬಗ್ಗೆ ಹಾರಿಕೆ ಉತ್ತರ ನೀಡಿದ್ದು, ಮಂಡ್ಯ ನಾಯಕರದ್ದು ತಪ್ಪಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಮಂಡ್ಯ ನಾಯಕರು ಪಾರ್ಟಿಗೆ ಹೋಗಿದ್ದು ತಪ್ಪಲ್ಲ, ವರದಿ ಕೇಳುವ ಅಗತ್ಯವಿಲ್ಲ, ಕ್ರಮದ ಅಗತ್ಯವೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಬೆಂಗಳೂರಿನಲ್ಲಿ ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಸುಮಲತಾ ರಹಸ್ಯ ಸಭೆ ಬಗ್ಗೆ ನನಗೇನು ಗೊತ್ತೇ ಇಲ್ಲ. ಔತಣಕೂಟಕ್ಕೆ ಹೋದಾಕ್ಷಣ ಸುಮಲತಾ ಅವರನ್ನು ಬೆಂಬಲಿಸಿದ್ದಾರೆ ಎಂದು ಹೇಳುವುದಕ್ಕೆ ಆಗುವುದಿಲ್ಲ ಎಂದಿದ್ದು, ಟೀಂ ಲೀಡರ್​ ಚಲುವರಾಯಸ್ವಾಮಿ ಅವರನ್ನು ಕರೆಸಿ ಸಭೆ ನಡೆಸಿರುವ ಬಗ್ಗೆ ಮಾತಾಡ್ತೇನೆ ಎಂದು ನುಸುಳಿಕೊಂಡಿದ್ದಾರೆ. ಡಿಸಿಎಂ ಪರಮೇಶ್ವರ್​ ಕೂಡ ಊಟಕ್ಕೆ ಹೋದರೆ ತಪ್ಪೇನು ಎನ್ನುವ ಮೂಲಕ ಮಂಡ್ಯ ರೆಬಲ್ಸ್​ ರಕ್ಷಣೆ ಕಾಂಗ್ರೆಸ್​ ಪಾರ್ಟಿ ನಿಂತಿದೆ ಅನ್ನೋದು ಸಾಬೀತಾಗಿದೆ.

Leave a Reply