ಪಾಲನೆಯಾಗದ ಮೈತ್ರಿ ಧರ್ಮ! ಕಮಲಕ್ಕೆ ಅರಳುವ ಆಸೆ..!

ಡಿಜಿಟಲ್ ಕನ್ನಡ ಟೀಮ್:

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೆಳಗಿಳಿಸಲು ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿಕೊಂಡಿತ್ತಾದರೂ ಸದ್ಯ ರಾಜಕೀಯ ನಾಯಕರ ಹೇಳಿಕೆಗಳು ಲೋಕಸಭೆ ಚುನಾವಣೆ ವೇಳೆ ಮೈತ್ರಿ ಧರ್ಮ ಪಾಲನೆ ಆಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿವೆ. ದೋಸ್ತಿಗಳ ಗೊಂದಲದ ನಡುವೆ ರಾಜ್ಯದಲ್ಲಿ ತಮ್ಮ ನಿರೀಕ್ಷಿತ ಗೆಲುವು ಸಾಧಿಸುವ ಲೆಕ್ಕಾಚಾರ ಕಮಲ ಪಾಳಯದಲ್ಲಿ ಜೋರಾಗಿ ನಡೆಯುತ್ತಿದೆ.

ಮತದಾನ ಮುಗಿದ ಬಳಿಕ ದೋಸ್ತಿ ನಾಯಕರ ಮಾತುಗಳನ್ನು ಕೇಳುತ್ತಿದ್ದರೆ ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳಲು ಇನ್ನೂ 22 ದಿನಗಳಿದ್ದು, ಮೈತ್ರಿ ನಾಯಕರು ತಮಗಾಗಬಹುದಾದ ಹಿನ್ನಡೆ ಒಪ್ಪಿಕೊಳ್ಳಲು ಸಜ್ಜಾಗುತ್ತಿದ್ದಾರೆಯೇ? ಅನ್ನೋ ಅನುಮಾನ ಮೂಡಿಸುತ್ತಿವೆ. ನಿನ್ನ ಮೈಸೂರಿನಲ್ಲಿ ಮಾತನಾಡಿರುವ ಸಚಿವ ಜಿ.ಟಿ ದೇವೇಗೌಡ, ‘ ಮೈಸೂರು – ಕೊಡಗು ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ’ ಎಂದು ಹೇಳುವ ಮೂಲಕ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಈ ಅಚ್ಚರಿಯ ಹೇಳಿಕೆ ಈಗ ವ್ಯಾಪಕ ಚರ್ಚೆಗೆ ಹಾಗೂ ಟೀಕೆಗೆ ವೇದಿಕೆ ಸಜ್ಜು ಮಾಡಿದೆ. ಮೈಸೂರು – ಕೊಡಗು ಲೋಕಸಭಾ ಚುನಾವಣೆಯಲ್ಲಿ ನಾವು ಒಟ್ಟಿಗೆ ಕೆಲಸ ಮಾಡಬೇಕಿತ್ತು. ಆದ್ರೆ ಮೈತ್ರಿಯಲ್ಲಿ ತಪ್ಪಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಜಿದ್ದಾಜಿದ್ದಿನ ಚುನಾವಣೆ ನಡೆಸಿದ್ದೆವು. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಕಾಂಗ್ರೆಸ್‌ಗೇ ಮತ ಹಾಕಿದ್ರೆ, ಜೆಡಿಎಸ್‌ನವರು ಬಿಜೆಪಿಗೆ ವೋಟ್ ಹಾಕಿದ್ದಾರೆ. ಉದ್ಬೂರು ಗ್ರಾಮ ಪಂಚಾಯಿತಿ ಸೇರಿದಂತೆ ಕೆಲವು ಕಡೆ ಹೀಗಾಗಿದೆ.’

‘ಮೈತ್ರಿ ವಿಚಾರದಲ್ಲಿ ಎರಡು ಕಡೆ ಪಕ್ಷಗಳಿಂದಲೂ ತಪ್ಪಾಗಿದೆ. ಆಯಾ ಪಕ್ಷಗಳಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕಿತ್ತು. ಮೈತ್ರಿ ಮಾಡಿಕೊಳ್ಳವ ತೀರ್ಮಾನದಲ್ಲಿ ಬಹಳ ತಡವಾಯಿತು. ತಡವಾಗಿ ಮೈತ್ರಿ ಮಾಡಿಕೊಂಡ ಕಾರಣ ಪಕ್ಷದ ಕಾರ್ಯಕರ್ತರ ನಡುವಿನ ಜಿದ್ದಾಜಿದ್ದಿ ಸರಿ ಮಾಡಲು ಆಗಲಿಲ್ಲ. ಆದರೂ ಕೆಲವು ಕಡೆ ಚೆನ್ನಾಗಿ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ಆದ್ರೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಉದ್ಭೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿಸಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆ ರೀತಿಯಲ್ಲೆ ಹಳೆಯ ಜಿದ್ದಿನಂತೆ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಎರಡು ಪಕ್ಷದವರು ಎರಡು ತಿಂಗಳ ಮುಂಚೆ ಒಟ್ಟಾಗಿ ಸೇರಿ ಮಾತಾಡಬೇಕಿತ್ತು. ಆಗ ಒಮ್ಮತದ ಅಭ್ಯರ್ಥಿ ಹಾಕಿದ್ದರೆ ಬಿಜೆಪಿ ರಾಜ್ಯದಲ್ಲಿ ಎಲ್ಲೂ ಗೆಲ್ಲುತ್ತಿರಲಿಲ್ಲ.‘ ಎನ್ನುವ ಮೂಲಕ ಸಚಿವ ಜಿ.ಟಿ.ದೇವೇಗೌಡ ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿಗೆ ಹಿನ್ನಡೆ ಆಗುತ್ತೆ ಅನ್ನೋದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಚರ್ಚೆಗೆ ದಾರಿ…

ಸಚಿವ ಜಿ.ಟಿ ದೇವೇಗೌಡ ಹೇಳಿಕೆಗೆ ಬೆಂಗಳೂರಲ್ಲಿ ಪ್ರತಿಕ್ರಿಯೆ ಕೊಟ್ಟಿರೋ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮೈತ್ರಿ ಮಾಡಿಕೊಂಡಿರೋದು ಏನು ತಡವಾಗಿಲ್ಲ. ಜಿಟಿಡಿ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದ್ರೆ ಅವರ ಹೇಳಿಕೆ ಗೊಂದಲ ಹಾಗೂ ದ್ವಂದ್ವದಿಂದ ಕೂಡಿದೆ ಎಂದಿದ್ದಾರೆ. ಮೈತ್ರಿ ಸರ್ಕಾರದ ಪಾಲುದಾರರಾದ ಅವರು ಈ ರೀತಿ ಹೇಳಿಕೆ ನೀಡಬಾರದಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟ ಮತ್ತಷ್ಟು ಪರಿಣಾಮಕಾರಿಯಾಗಿ ಇದ್ದರೆ 22 ರಿಂದ 24 ಸೀಟು ಗೆಲ್ಲಬಹುದಿತ್ತು. ಆದರೆ ಕೆಲವು ಕಡೆ ಸಣ್ಣ ಪುಟ್ಟ ವ್ಯತ್ಯಾಸ ಆಗಿದೆ. ಕೋಲಾರ, ಮಂಡ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ ಎಂದು ದಿನೇಶ್ ಕೂಡ ಒಪ್ಪಿಕೊಂಡಿದ್ದಾರೆ.

ಮೈತ್ರಿ ಬಹಳ ದಿನಗಳ ಹಿಂದೆಯೇ ಮಾಡಿಕೊಳ್ಳಲಾಗಿತ್ತು. ಅದರಲ್ಲೂ ಮೈಸೂರು ಕೂಡ ಕಾಂಗ್ರೆಸ್‌ಗೆ ಅಂತಾ ಹಿಂದೆಯೇ ತೀರ್ಮಾನ ಆಗಿತ್ತು. ಅವರು ಯಾವ ರೀತಿ ಚುನಾವಣೆಯಲ್ಲಿ ಕೆಲಸ ಮಾಡಿದ್ರು ಎನ್ನೋದು ಗೊತ್ತಿಲ್ಲ. ಆದ್ರೆ ಮೈತ್ರಿ ಸರ್ಕಾರದಲ್ಲಿ ಸಚಿವರೊಬ್ಬರು ಈ ರೀತಿ ಹೇಳಿಕೆ ಕೊಡೋದು ಸರಿಯಲ್ಲ. ಯಾರೇ ಜವಾಬ್ದಾರಿ ತಗೆದುಕೊಂಡವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ ಈ ರೀತಿ ಆಗ್ತಿರಲಿಲ್ಲ ಎನ್ನುವ ಮೂಲಕ ಜಿಟಿಡಿ ಕೆಲಸ ಮಾಡಿಲ್ಲ ಎಂದಿದ್ದಾರೆ. ಅವರ ಹೇಳಿಕೆಯಿಂದ ಎಲ್ಲೋ ಒಂದು ಕಡೆ ಪ್ರಾಮಾಣಿಕತೆಯಿಂದ ಕೆಲಸ ಆಗಿಲ್ಲ ಅಂತಾ ಕಾಣ್ತಿದೆ. ರಾಜ್ಯದಲ್ಲಿ ಬಹುತೇಕ 80 ಪರ್ಸೆಂಟ್ ಚುನಾವಣೆ ಚೆನ್ನಾಗಿ ನಡೆದಿದೆ. 10 ರಿಂದ 20  ಪರ್ಸೆಂಟ್ ಯಾವ ರೀತಿ ಅದು ಆಗಬೇಕಿತ್ತು ಅದು ಆಗಿಲ್ಲ. ಆದರೂ ಫಲಿತಾಂಶ ಜೆಡಿಎಸ್ ಹಾಗೂ ಕಾಂಗ್ರೆಸ್ ಗೆ ಚೆನ್ನಾಗಿ ಬರಲಿದೆ. ಕೋಲಾರ, ಮೈಸೂರು , ಮಂಡ್ಯದಲ್ಲಿ ಸ್ವಲ್ಪ ಸಮಸ್ಯೆ ಆಯಿತು. ಇನ್ನುಳಿದ ಕಡೆ ಒಬ್ಬರಿಗೆ ಒಬ್ಬರು ಚೆನ್ನಾಗಿ ಕೆಲಸ ಮಾಡಿದ್ದೀವಿ ಎಂದಿದ್ದಾರೆ. ಜೊತೆಗೆ ಈ ಹೇಳಿಕೆಯಿಂದ ಬಿಜೆಪಿ ಬೀಗುವ ಅವಶ್ಯಕತೆ ಇಲ್ಲ. ಬಿಎಸ್‌ವೈ ಕನಸು ನನಸಾಗಲ್ಲ ಎಂದಿದ್ದಾರೆ.

ಸಚಿವರ ಹೇಳಿಕೆ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ಕೊಟ್ಟಿದ್ದು,  ಸಚಿವರು ಹೇಳಿರುವ ಹಾಗೆ ಜೆಡಿಎಸ್ ಕಾರ್ಯಕರ್ತ ಮಾತ್ರವಲ್ಲದೆ ಕಾಂಗ್ರೆಸ್ ಕಾರ್ಯಕರ್ತರ ಮತಗಳೂ ನನಗೇ ಬಂದಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದೂ ಅಲ್ಲದೆ ಮೊದಲಿನಿಂದಲೂ ಮೈಸೂರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನವರೂ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಹಾಗಾಗಿಯೇ ಮೈಸೂರು ಕ್ಷೇತ್ರದಲ್ಲಿ ಬಿಜೆಪಿ ಸತತ ಗೆಲುವು ಸಾಧ್ಯವಾಗುತ್ತಿದೆ. 1990 ರಿಂದಲೂ‌ ಮೈಸೂರಿನಲ್ಲಿ ಈ ಸಂಸ್ಕೃತಿ ಇದ್ದು ಈಗಲೂ  ಮುಂದುವರಿದಿದೆ ಎಂದಿದ್ದಾರೆ.

ಜಿ.ಟಿ.ದೇವೇಗೌಡರ ಹೇಳಿಕೆಗೆ ಮುಗಿಬಿದ್ದು ಪ್ರತಿಕ್ರಿಯೆ ಕೊಟ್ಟಿರೋ ಬಿಜೆಪಿ ನಾಯಕರು. ಸಚಿವ ಜಿ.ಟಿ.ದೇವೇಗೌಡರು ‌ನಿಜ ಒಪ್ಪಿಕೊಂಡಿದ್ದಾರೆ. ಜೆಡಿಎಸ್ ಹಾಗೂ‌ ಕಾಂಗ್ರೆಸ್ ಎರಡೂ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ. ಇದನ್ನು ಬಹಿರಂಗವಾಗಿ ಜಿ.ಟಿ.ದೇವೇಗೌಡ ಒಪ್ಪಿಕೊಂಡಿರೋದರಿಂದ ತಮ್ಮ ಸೋಲನ್ನ ತಾವೇ ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮಗಳಿಗೆ ಆರ್.‌ಅಶೋಕ್ ತಿಳಿಸಿದ್ದಾರೆ.

ಇನ್ನು ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಬೆಂಬಲಿಸಿದ್ದು ನಿಜ. ಇದು ಕೇವಲ ಮೈಸೂರು ಮಾತ್ರವಲ್ಲ. ಮೈಸೂರು, ಬೆಂಗಳೂರು, ಬೆಂಗಳೂರಿನ ಗ್ರಾಮಾಂತರ ಸೇರಿದಂತೆ ಹಲವು ಕಡೆಗಳಲ್ಲಿ ‌ಇದೇ ರೀತಿ‌ ಆಗಿದೆ ಎಂದು ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ್ ಹೇಳಿದ್ದು, ಈ ಬಾರಿಯ ಚುನಾವಣೆ ಜಾತಿ, ಪಕ್ಷ, ಹಣ ಮೀರಿ ನಡೆದಿದೆ ಎಂದು ಶಾಸಕ ಸಿಟಿ ರವಿ ಹೇಳಿದ್ದಾರೆ. ಈ ಚುನಾವಣೆ ವೇಳೆ ಜನರ ಬಾಯಲ್ಲಿ ಮೋದಿ ಮೋದಿ‌ ಎಂದು ಕೇಳಿ ಬರ್ತಾ ಇತ್ತು. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು‌ ಮುಂತಾದ ಕಡೆ ಮೋದಿ ಹೆಸರು ಕೇಳಿ ಬರುತ್ತಿತ್ತು. ಮಂಡ್ಯದಲ್ಲಿ ಕೂಡ ಬಹಿರಂಗವಾಗಿ ಕಾಂಗ್ರೆಸ್ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ. ಹಾಸನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ತುಮಕೂರಿನಲ್ಲೂ ಕೂಡ ಕೆಲವರು ಒಳಗೆ, ಕೆಲವರು ಹೊರಗೆ ಬೆಂಬಲ ನೀಡಿದ್ದಾರೆ. ಮಂತ್ರಿಗಳು ಮಾತ್ರವಲ್ಲ ಮಾಜಿ ಮುಖ್ಯಮಂತ್ರಿಗಳು ಕೂಡ ಕೆಲ ಕ್ಷೇತ್ರದಲ್ಲಿ ಬಿಜೆಪಿಗೆ ಸಹಾಯ ಮಾಡಿದ್ದಾರೆ ಎಂದು ಇನ್ನೊಂದು ಬಾಂಬ್ ಸಿಡಿಸಿದ್ದಾರೆ.

Leave a Reply