ಮಂಡ್ಯದಲ್ಲಿ ದೋಸ್ತಿ ವಿರುದ್ಧವೇ ಕುತಂತ್ರ!

ಡಿಜಿಟಲ್ ಕನ್ನಡ ಟೀಮ್:

ಮಂಡ್ಯ ಲೋಕಸಭಾ ಚುನಾವಣೆ ಘೋಷಣೆ ಆಗುವ ಮೊದಲೇ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾಂಗ್ರೆಸ್​ನಿಂದ ಟಿಕೆಟ್​ ನೀಡುವಂತೆ ಒತ್ತಾಯ ಮಾಡಿದ್ರು. ಆದ್ರೆ ಮೈತ್ರಿ ಪಕ್ಷಕ್ಕೆ ಮಂಡ್ಯ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡಬೇಕಾಯ್ತು. ಆದ್ರೆ ಸುಮಲತಾ ಸ್ಪರ್ಧೆಗೆ ಸಿದ್ದರಾಮಯ್ಯ ಅವರೇ ಬೆನ್ನೆಲುಬಾಗಿ ನಿಂತ್ರು ಅನ್ನೋ ಆರೋಪ ಎದುರಾಗಿತ್ತು. ನಂತರ ಸಿದ್ದರಾಮಯ್ಯ ಮೈತ್ರಿ ಅಭ್ಯರ್ಥಿ ಆಗಿದ್ದ ನಿಖಿಲ್​ ಕುಮಾರಸ್ವಾಮಿ ಪರವಾಗಿ ಪ್ರಚಾರ ಕೂಡ ಮಾಡಿದ್ರು. ಆದ್ರೆ ಸುಮಲತಾ ಮಾತ್ರ ಸಿದ್ದರಾಮಯ್ಯ ಅವರು ಮನಸಾಳದಿಂದ ಈ ರೀತಿ ಹೇಳಿಲ್ಲ. ಜೆಡಿಎಸ್​ ಪಕ್ಷ ಸಿದ್ದರಾಮಯ್ಯ ಅವರನ್ನು ಬ್ಲಾಕ್​ಮೇಲ್​ ಮಾಡಿದೆ ಎಂದು ಆರೋಪಿಸಿದ್ರು.

ಸಿದ್ದರಾಮಯ್ಯ ಆರೋಪಕ್ಕೆ ಪೂರಕ ಎನ್ನುವಂತೆ ಸಿದ್ದರಾಮಯ್ಯ ಅವರನ್ನು ನಂಬಿಕೊಂಡು ಕಾಂಗ್ರೆಸ್​ ಪಕ್ಷ ಸೇರಿದ್ದ ಮಾಜಿ ಸಚಿವ ಚಲುವರಾಯಸ್ವಾಮಿ ಅಂಡ್​ ಟೀಂ ಜೆಡಿಎಸ್​ ಅಭ್ಯರ್ಥಿ ಪರವಾಗಿ ಕೆಲಸ ಮಾಡಲಿಲ್ಲ. ತಟಸ್ಥವಾಗಿ ಇರುತ್ತೇವೆ ಎನ್ನುವ ಮೂಲಕ ಪರೋಕ್ಷವಾಗಿ ಸುಮಲತಾ ಅವರನ್ನು ಬೆಂಬಲಿಸಿದ್ರು. ಎಲ್ಲಾ ರಾಜಕೀಯ ತಂತ್ರಗಾರಿಕೆಯನ್ನೂ ಮಾಡಿದ್ರು ಅನ್ನೋ ಆರೋಪ ಎದುರಾಯ್ತು. ಆ ಬಳಿಕ ಕಾಂಗ್ರೆಸ್​ ಕಾರ್ಯಕರ್ತರು ನೇರವಾಗಿ ಸುಮಲತಾ ಬೆಂಬಲಿಸುವ ಮೂಲಕ ಪಕ್ಷಕ್ಕೆ ಸಡ್ಡು ಹೊಡೆದರು. ಸ್ವತಃ ಕಾಂಗ್ರೆಸ್​ ಪಕ್ಷ ಹೇಳಿದರೂ ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಲಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಬಂದಾಗಲೂ ಮಂಡ್ಯ ಜಿಲ್ಲಾ ಕಾಂಗ್ರೆಸ್​  ನಾಯಕರು ಭಾಗಿಯಾಗದೆ ಬಂಡಾಯ ಸಾರಿದ್ರು. ಆದರೂ ಸಿದ್ದರಾಮಯ್ಯ ಮಾತ್ರ ಮೇಲ್ನೋಟಕ್ಕೆ ಬಂಡಾಯ ಶಮನ ಮಾಡುವ ಪ್ರಯತ್ನ ಮಾಡ್ತಿದ್ದೇನೆ ಎನ್ನುವುದನ್ನು ತೋರಿಸಿಕೊಳ್ಳುವ ಪ್ರಯತ್ನ ಮಾಡಿದ್ರು. ಇದೀಗ ಎಲ್ಲಾ ಆರೋಪಗಳಿಗೂ ಉತ್ತರ ಸಿಕ್ಕಿದೆ.

ಮಂಗಳವಾರ ರಾತ್ರಿ ಸಿದ್ದರಾಮಯ್ಯ ಅವರ ಜೊತೆ ಮಂಡ್ಯ ಜಿಲ್ಲಾ ಕಾಂಗ್ರೆಸ್​ ನಾಯಕರು ಸಭೆ ನಡೆಸಿದ್ದಾರೆ ಅನ್ನೋ ವರದಿಗಳು ಬಂದಿವೆ. ಆ ಬಳಿಕ ಬೆಂಗಳೂರಿನ ಪಂಚತಾರ ಹೋಟೆಲ್​ ಏಟ್ರಿಯಾದಲ್ಲಿ ಭರ್ಜರಿ ಭೋಜನ ಕೂಟ ಆಯೋಜಿಸಿದ್ದು, ಮಾಜಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಮಂಡ್ಯ ಜಿಲ್ಲಾ ಕಾಂಗ್ರೆಸ್​ ನಾಯಕರು ಹಾಜರಾಗಿದ್ದರು. ಸಿದ್ದರಾಮಯ್ಯ ಪರಮಾಪ್ತ ಮಳವಳ್ಳಿ ಶಿವಣ್ಣ ಕೂಡ ಹಾಜರಿದ್ದರು. ಇದು ರಹಸ್ಯ ಸಭೆ ಎನ್ನಲಾಗಿದ್ದು, ಜೆಡಿಎಸ್​ ಮೂಲಗಳು ಸಿಸಿಟಿವಿ ದೃಶ್ಯವನ್ನೇ ರಿಲೀಸ್​ ಮಾಡುವ ಮೂಲಕ ಕಾಂಗ್ರೆಸ್​ ಪಾಳಯ ಕಂಗಾಲಾಗುವಂತೆ ಮಾಡಿದೆ. ಸಿದ್ದರಾಮಯ್ಯ ಭೇಟಿ ಬಳಿಕವೇ ಸಭೆ ನಡೆದಿದ್ದು, ಲೋಕಸಭೆಯಲ್ಲಿ ಸೋಲುಗೆಲುವಿನ ಲೆಕ್ಕಾಚಾರಕ್ಕಾಗಿ ಎಲ್ಲಾ ತಾಲೂಕಿನ ನಾಯಕರು ಸೇರಿದ್ದರು ಎನ್ನಲಾಗಿದೆ. ಜೊತೆಗೆ ಸಿದ್ದರಾಮಯ್ಯ ಅವರ ಸಪೋರ್ಟ್​ನಿಂದಲೇ ಚಲುವರಾಯಸ್ವಾಮಿ ಅಂಡ್​ ಟೀಂ ಇಷ್ಟೊಂದು ಮುಂದುವರಿದಿದ್ದು, ಒಂದು ವೇಳೆ ಪಕ್ಷ ಶಿಸ್ತು ಕ್ರಮ ಕೈಗೊಂಡರೂ ಯಾವುದೇ ಭಯಬೇಡ. ಕಾಂಗ್ರೆಸ್​​ – ಜೆಡಿಎಸ್​ ಮೈತ್ರಿ ಮುರಿದ ಬಳಿಕ ಮತ್ತೆ ಪಕ್ಷಕ್ಕೆ ಕರೆದುಕೊಳ್ತೇವೆ ಅನ್ನೋ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ಮಂಡ್ಯ ರಾಜಕಾರಣದಲ್ಲಿ ದೋಸ್ತಿ ವಿರುದ್ಧವೇ ಕುತಂತ್ರ ನಡೆದಿರುವುದು ಸ್ಪಷ್ಟವಾಗಿದೆ.

Leave a Reply