ದೇಶಾದ್ಯಂತ ಆಪರೇಷನ್​ ಕಮಲ..!?

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಆಪರೇಷನ್​ ಕಮಲ ನಡೆಯುತ್ತೆ ಅನ್ನೋ ಮಾತು ಚಾಲ್ತಿಯಲ್ಲಿದೆ. ಆದ್ರೆ ಕಾಂಗ್ರೆಸ್​ ಹಾಗೂ ಜೆಡಿಎಸ್​ ನಾಯಕರು ಮಾತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಹಗಲು ಕನಸು ಕಾಣ್ತಿದ್ದಾರೆ ಎನ್ನುವ ಮೂಲಕ ಅಧಿಕಾರ ನಡೆಸುತ್ತಲೇ ಇದ್ದಾರೆ. ದೆಹಲಿ ನಾಯಕರ ಸಪೋರ್ಟ್​ ಸೂಕ್ತ ಮಟ್ಟದಲ್ಲಿ ಸಿಗದ ಕಾರಣಕ್ಕೆ ರಾಜ್ಯ ಬಿಜೆಪಿ ಆಪರೇಷನ್​ ಕಮಲಕ್ಕೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗುತ್ತಿಲ್ಲ ಅನ್ನೋ ವಾದಗಳೂ ಇವೆ.

ಆದ್ರೆ ಇದೀಗ ಸ್ವತಃ ಬಿಜೆಪಿ ಕೇಂದ್ರ ನಾಯಕರೇ ಅಖಾಡಕ್ಕೆ ಇಳಿದಿದ್ದು ದೇಶಾದ್ಯಂತ ಆಪರೇಷನ್​ ಕಮಲ ಆರಂಭವಾಗುವ ಸೂಚನೆ ಸಿಕ್ಕಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯೇ ಈ ಬಗ್ಗೆ ಹೇಳಿಕೆ ನೀಡಿರೋದು ದೇಶದ ಪ್ರಾದೇಶಿಕ ಪಕ್ಷಗಳಲ್ಲಿ ತಲ್ಲಣ ಮೂಡಿಸಿದೆ.

ಹೌದು, ಏಪ್ರಿಲ್​ 29ರಂದು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಅಬ್ಬರಿಸಿ ವಾಗ್ದಾಳಿ ಮಾಡಿದ್ರು. ಆ ಬಳಿಕ ದೀದಿ ಕೋಟೆಗೆ ಲಗ್ಗೆ ಹಾಕುವ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, 40 ಶಾಸಕರು ಈಗಾಗಲೇ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನುವ ಮೂಲಕ ಆಪರೇಷನ್​ ಕಮಲ ಫಿಕ್ಸ್​ ಅನ್ನೋದನ್ನು ಸೂಚ್ಯವಾಗಿ ಹೇಳಿದ್ರು. ಮೇ 23ರ ಬಳಿಕ ಸಾಕಷ್ಟು ಬದಲಾವಣೆ ಆಗಲಿದೆ ಎಂದೂ ಹೇಳಿದ್ರು. ಇದೀಗ ದೆಹಲಿಯಲ್ಲಿ ಮೋದಿ ಮಾತು ಅಸ್ತಿತ್ವಕ್ಕೆ ಬಂದಿದೆ.

ನಿನ್ನೆಯಷ್ಟೇ ಆಪರೇಷನ್​ ಕಮಲದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಆಮ್​ ಆದ್ಮಿ ಪಾರ್ಟಿಯ 7 ಮಂದಿ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ. ತಲಾ 10 ಕೋಟಿ ರೂಪಾಯಿ ನೀಡುವುದಾಗಿ ಆಹ್ವಾನ ನೀಡಿದ್ದಾರೆ ಎಂದು ಆರೋಪಿಸಿದ್ರು. ಆರೋಪ ಮಾಡಿ ಒಂದು ದಿನ ಕಳೆಯುವ ಒಳಗಾಗಿ ಆಪ್​ ಶಾಸಕ ಅನಿಲ್​ ಬಾಜ್​ಪಾಯಿ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ದೆಹಲಿಯ ಗಾಂಧಿ ನಗರ ಶಾಸಕ ಅನಿಲ್​ ಬಾಜ್​ಪಾಯಿ ದೆಹಲಿ ಕಚೇರಿಯಲ್ಲಿ ರಾಜ್ಯಾದ್ಯಕ್ಷ ಶ್ಯಾಮ್​ ಜಾಜು ಬರಮಾಡಿಕೊಂಡ್ರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿಜಯ್​ ಗೋಯೆಲ್​ ಕೂಡ ಹಾಜರಿದ್ರು. ಈ ವೇಳೆ ಶಾಸಕ ಅನಿಲ್​ ಬಾಜ್​ಪಾಯಿ 10 ಕೋಟಿ ಹಣ ಪಡೆದಿರುವ ಆರೋಪ ನಿರಾಕರಿಸಿದ್ದು, ಕಳೆದ 15 ವರ್ಷದಿಂದ ನಾನು ಆಪ್​ನಲ್ಲಿದ್ದು, ಪಕ್ಷ ಕಟ್ಟಿದ್ದೇನೆ. ಆದ್ರೆ ಪಕ್ಷದಲ್ಲಿ ಸಿಗಬೇಕಾದ ಗೌರವ ಸಿಗದ ಕಾರಣಕ್ಕೆ ನಾನು ಹೊರಬಂದು ಬಿಜೆಪಿ ಸೇರಿದ್ದೇನೆ ಎಂದಿದ್ದಾರೆ.

ಆದ್ರೆ ಬಿಜೆಪಿ ಗುರುವಾರ ಮಾತನಾಡಿದ್ದ ಕೇಂದ್ರ ಸಚಿವ ವಿಜಯ್​ ಗೋಯೆಲ್​ ಮಾತ್ರ ಆಪ್​ನ 7 ಶಾಸಕರು ಬಿಜೆಪಿ ಸಂಪರ್ಕದಲ್ಲಿ ಇಲ್ಲ. ಒಟ್ಟು 15 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದಿದ್ದರು. ಜೊತೆಗೆ ಮೂವರು ಪಾಲಿಕೆ ಸದಸ್ಯರೂ ಕೂಡ ಬಿಜೆಪಿ ಸೇರ್ಪಡೆಯಾಗಿರೋದು ಆತಂಕ ಹುಟ್ಟುವಂತೆ ಮಾಡಿದೆ.

ಮೇ 23ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಆ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಲಿದೆ ಎಂದು ಬಿಜೆಪಿ ನಾಯಕರು ಲೋಕಸಭಾ ಚುನಾವಣಾ ಪ್ರಚಾರದ ವೇಳೆಯೇ ಹೇಳಿಕೊಂಡಿದ್ರು. ಈಗಲೂ ಬಿಜೆಪಿ ಪಕ್ಷದ ಕಡೆಯಿಂದ ಅದೇ ಮಾತು ಪುನರುಚ್ಛಾರ ಆಗ್ತಿದೆ. ಆದ್ರೆ ಮೈತ್ರಿ ಸರ್ಕಾರ ಮಾತ್ರ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಎದೆಯುಬ್ಬಿಸಿ ಹೇಳಿಕೊಳ್ಳುತ್ತಿದ್ದಾರೆ.

ಒಂದು ವೇಳೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬಂದರೆ ದೇಶಾದ್ಯಂತ ಪ್ರಾದೇಶಿಕ ಪಕ್ಷಗಳನ್ನು ಟಾರ್ಗೆಟ್​ ಮಾಡಲಿದ್ದು, ಬಿಜೆಪಿಗೆ ಸೆಳೆಯುವ ಕೆಲಸ ನಡೆಯುತ್ತೆ ಅನ್ನೋ ಮಾತುಗಳೂ ಚಾಲ್ತಿಯಲ್ಲಿವೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಕಾಂಗ್ರೆಸ್​ ಹೆಚ್ಚು ಕಡಿಮೆ ಸಮಬಲ ಸಾಧಿಸಿದ್ದು, ಸದ್ಯಕ್ಕೆ ಕಾಂಗ್ರೆಸ್​ ಅಧಿಕಾರದಲ್ಲಿದೆ. ಅದೇ ರೀತಿ ಆಂಧ್ರ ಪ್ರದೇಶದಲ್ಲೂ ಆಪರೇಷನ್​ ನಡೆಯುವ ಭೀತಿಯಿದ್ದು, ಸಿಎಂ ಚಂದ್ರಬಾಬು ನಾಯ್ಡು ಶಾಸಕರನ್ನು ಒಟ್ಟು ಮಾಡುವ ಕೆಲಸ ಮಾಡ್ತಿದ್ದಾರೆ. ಇನ್ನೂ ಕರ್ನಾಟಕದಲ್ಲಿ ಕಾಂಗ್ರೆಸ್​ ಶಾಸಕರನ್ನು ಸೆಳೆಯೋದು ಬಿಜೆಪಿ ತಂತ್ರವಾಗಿದೆ.

ಈಗಾಗಲೇ ಲೋಕಸಭಾ ಚುನಾವಣಾ ವಿಚಾರದಲ್ಲಿ ಮೈತ್ರಿ ನಡುವೆ ಭಾರೀ ಬಿರುಕು ಮೂಡಿದ್ದು, ಬಿಜೆಪಿ ಆಪರೇಷನ್​ ಕಮಲಕ್ಕೆ ಅನುಕೂಲ ಆಗಲಿದ್ಯಾ ಅನ್ನೋ ಅನುಮಾನವೂ ಕಾಡ್ತಿದೆ. ಸರ್ಕಾರ ಬಿದ್ದು ಹೋದರೂ ಅಚ್ಚರಿಯಿಲ್ಲ ಎನ್ನುತ್ತಿವೆ ರಾಜಕೀಯ ಮೂಲಗಳು.

Leave a Reply