ಫೋನಿ ರೌದ್ರಾವತಾರಕ್ಕೆ ಐವರು ಬಲಿ! 1000 ಕೋಟಿ ತುರ್ತು ಪರಿಹಾರ ಘೋಷಣೆ

ಡಿಜಿಟಲ್ ಕನ್ನಡ ಟೀಮ್:

ಪ್ರತಿ ಗಂಟೆಗೆ 200 ಕಿ.ಮೀ ವೇಗದಲ್ಲಿ ಒಡಿಶಾ ಕರಾವಳಿ ಜಿಲ್ಲೆಗಳನ್ನು ಅಪ್ಪಳಿಸಿರುವ ಫೋನಿ ಚಂಡಮಾರುತ ತನ್ನ ರೌದ್ರಾವತಾರ ಪ್ರದರ್ಶಿಸಿದೆ. 2 ದಶಕಗಳಲ್ಲೇ ಅತಿ ಭಯಾನಕ ಚಂಡಮಾರುತವಾಗಿರುವ ಫೋನಿ ಅಬ್ಬರಕ್ಕೆ ಪುರಿ ಜಿಲ್ಲೆಯ ಕಡಲ ತೀರ ಪ್ರದೇಶಗಳು ತತ್ತರಿಸಿವೆ.

ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಈ ಭಾಗದಲ್ಲಿನ ಜನರನ್ನು ಸ್ಥಳಾಂತರ ಮಾಡಲಾಗಿದೆ. ಶುಕ್ರವಾರ ಕರಾವಳಿ ಪ್ರದೇಶವನ್ನು ಪ್ರದೇಶಿಸಿದ ಫೋನಿ, ವಿದ್ಯುತ್ ಕಂಬ, ಮರಗಳನ್ನು ನೆಲಕ್ಕುರುಳಿಸಿ ತನ್ನ ಆರ್ಭಟ ಮೆರೆದಿದೆ. ಪರಿಣಾಮ ವಿದ್ಯುತ್ ಸೇವೆ ಸಂಪೂರ್ಣ ಸ್ಥಗಿತವಾಗಿದೆ. ಕೇವಲ ಒಡಿಶಾ ಮಾತ್ರವಲ್ಲದೇ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಕರಾವಳಿ ಭಾಗಗಳನ್ನು ಪ್ರವೇಶಿಸಿದ್ದು, ಹಲವೆಡೆಗಳಲ್ಲಿ ಭೂ ಕುಸಿತವಾಗಿದ್ದು, ಈವರೆಗೂ ಐವರು ಸತ್ತಿರುವ ವರದಿಯಾಗಿವೆ.

ಪ್ರಧಾನಿ ನೇತೃತ್ವದಲ್ಲಿ ಮಹತ್ವದ ಸಭೆ

ಪಂಚ ರಾಜ್ಯಗಳ ಕರಾವಳಿಗೆ ಅಪ್ಪಳಿಸಿರುವ ಫೊನಿ ಚಂಡಮಾರುತವನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಮೋದಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಈ ಸಭೆಯಲ್ಲಿ ಸಂಪುಟ ಕಾರ್ಯದರ್ಶಿ, ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ, ಗೃಹ ಸಚಿವಾಲಯದ ಕಾರ್ಯದರ್ಶಿ, ಭಾರತೀಯ ಹವಾಮಾನ ಇಲಾಖೆ, ಎನ್ ಡಿಆರ್ ಎಫ್‌, ಎನ್ ಡಿಎಂಎ ಅಧಿಕಾರಿಗಳು ಭಾಗವಹಿಸಿದ್ದರು. ಇನ್ನು ತಕ್ಷಣ ರಕ್ಷಣ ಕಾರ್ಯ ಹಾಗೂ ಪರಿಸ್ಥಿತಿ ನಿರ್ವಹಣೆಗಾಗಿ 1000 ಕೋಟಿ ತುರ್ತು ಪರಿಹಾರವನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಫೋನಿ ಕುರಿತ ಮಾಹಿತಿ
  • ಆಗ್ನೇಯ ಏಷ್ಯಾದಲ್ಲಿ ಚಂಡಮಾರುತಗಳಿಗೆ ಹೆಸರಿಡುವುದು ಒಂದು ಸಾಮಾನ್ಯ ಪ್ರಕ್ರಿಯೆ. ವಿಶ್ವ ಹವಾಮಾನ ಸಂಸ್ಥೆಯು ಚಂಡಮಾರುತಗಳಿಗೆ ಹೆಸರು ಸೂಚಿಸುವಂತೆ ರಾಷ್ಟ್ರಗಳಿಗೆ ಸೂಚಿಸುವ ಪದ್ಧತಿ ಇದೆ. ಆಗ್ನೇಯ ಏಷ್ಯಾದಲ್ಲಿ ದೇಶಗಳು ಸೂಚಿಸುವ ಹೆಸರುಗಳಿಂದ ಅವುಗಳನ್ನು ಕರೆಯಲಾಗುತ್ತದೆ. ಈ ಸಲ ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್‌, ಮ್ಯಾನ್ಮಾರ್‌, ಒಮನ್‌, ಪಾಕಿಸ್ತಾನ, ಶ್ರೀಲಂಕಾ ಮತ್ತು ಥಾಯ್ಲೆಂಡ್ ಗಳು ತಲಾ ಎಂಟರಂತೆ 64 ಹೆಸರುಗಳನ್ನು ಕಳುಹಿಸಿದ್ದವು. ಅದರಲ್ಲಿ ಬಾಂಗ್ಲಾದೇಶ ಸೂಚಿಸಿದ ‘ಫೋನಿ'(ಎಫ್‌ಎಎನ್‌ಐ) ಆಯ್ಕೆ ಮಾಡಲಾಗಿದೆ. ಪೋನಿ ಎಂದರೆ ಹಾವಿನ ಹೆಡೆ ಎಂದರ್ಥ.
  • ಇಂದು ಭಾರತದ ಒಡಿಶಾ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಲಿರುವ ‘ಫೋನಿ’ ಯ ಇವತ್ತಿನ ವೇಗ ಗಂಟೆಗೆ 200 ಕಿ.ಮೀ.
  • ‘ಫೋನಿ’ಯನ್ನು ಸಮರ್ಥವಾಗಿ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿರುವ ಒಡಿಶಾ ಅದಕ್ಕಾಗಿಯೇ 880ಕ್ಕೂ ಹೆಚ್ಚು ಆಶ್ರಯ ಕೇಂದ್ರಗಳನ್ನು ತೆರೆದಿದೆ. ಇವುಗಳಲ್ಲಿ ಏಕ ಕಾಲಕ್ಕೆ 10 ಲಕ್ಷ ಜನರಿಗೆ ವಸತಿ ಮತ್ತು ಆಹಾರ ಕಲ್ಪಿಸುವ ಅವಕಾಶವಿದೆ.
  • ಇನ್ನು ಫೋನಿ ಚಂಡಮಾರುತ ಭೂ ಭಾಗಕ್ಕೆ ಅಪ್ಪಳಿಸುವಾಗ ಅದರ ವೇಗ ಗಂಟೆಗೆ 170–180 ಕಿ.ಮೀ ಇರುವ ಸಾಧ್ಯತೆಗಳಿವೆ.
  • ಮುನ್ನೆಚ್ಚರಿಕಾ ಕ್ರಮವಾಗಿ ಬಂಗಾಳ ಕೊಲ್ಲಿಯ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸದಂತೆ ಈಗಾಗಲೇ ಮೀನುಗಾರರಿಗೆ ಸೂಚನೆ ನೀಡಲಾಗಿದೆ.
  • ಒಡಿಶಾದ 14 ಜಿಲ್ಲೆಗಳು ಹಾನಿ ಎದುರಿಸಲಿದ್ದು, ಅಪಾಯದ ಪ್ರದೇಶದ ನಿವಾಸಿಗಳ ತೆರವು ಕಾರ್ಯಾಚರಣೆ ಶರವೇಗದಲ್ಲಿ ನಡೆಯುತ್ತಿದೆ.

Leave a Reply