ಸರ್ಕಾರ ಉಳಿಸಿಕೊಳ್ಳಲು ಹೆಲ್ಪ್​ ಆಗುತ್ತಾ ಸಿಎಂ ಪ್ಲ್ಯಾನ್​!?

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಹಾಗೂ ವಿಧಾನಸಭಾ ಚುನಾವಣಾ ಫಲಿತಾಂಶ ಇದೇ ತಿಂಗಳ 23ರಂದು ಪ್ರಕಟವಾಗಲಿದೆ. ಅಷ್ಟರೊಳಗೇ ಸರ್ಕಾರ ಬಿದ್ದು ಹೋಗಲಿದೆ ಅನ್ನೋದು ಬಿಜೆಪಿ ನಾಯಕರ ನಂಬಿಕೆ. ಈ ನಡುವೆ ಕಾಂಗ್ರೆಸ್​ನಲ್ಲಿ ಬಂಡಾಯ ಸಭೆಗೆ ಸ್ಕೆಚ್​ ಹಾಕಿದ್ದ ಶಾಸಕ ಎಸ್​.ಟಿ ಸೋಮಶೇಖರ್​ ಅವರನ್ನು ಸಿದ್ದರಾಮಯ್ಯ ತಾತ್ಕಾಲಿಕವಾಗಿ ಸಮಾಧಾನ ಮಾಡಿದ್ದು, ವಿಧಾನಸಭಾ ಉಪ ಚುನಾವಣೆ ಮುಗಿಯುವ ತನಕ ಯಾವುದೇ ಬಂಡಾಯ ಬೇಡ ಎಂದಿದ್ದಾರೆ. ಅತ್ತ ಬೆಳಗಾವಿ ಸಾಹುಕಾರ ರಮೇಶ್​ ಜಾರಕಿಹೊಳಿ ಕೂಡ ಮೇ 23ರ ಬಳಿಕ ರಾಜ್ಯ ಸರ್ಕಾರ ಇರೋದಿಲ್ಲ, ಸಚಿವರೆಲ್ಲಾ ಮಾಜಿ ಆಗ್ತಾರೆ ಎಂದು ಗುಡುಗಿದ್ರು. ಇದೀಗ ಕುಂದಗೋಳದಲ್ಲಿ ಕೆಎಸ್​ ಈಶ್ವರಪ್ಪ, ಶ್ರೀರಾಮುಲು ಸೇರಿದಂತೆ ಸಾಕಷ್ಟು ನಾಯಕರು ಜೂನ್​ ಮೊದಲ ವಾರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದಿದ್ದಾರೆ. ಇದಿಗ ಸರ್ಕಾರ ರಕ್ಷಣೆಗೆ ಸಿಎಂ ಪಣ ತೊಟ್ಟಿದ್ದು, ಸಖತ್​ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರದ ಮೇಲೆ ಕಾಂಗ್ರೆಸ್​ ಶಾಸಕರೇ ತೂಗುಗತ್ತಿ ಬೀಸುತ್ತಿದ್ದು. ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್​ ಶಾಸಕರೇ ಬಂಡಾಯ ಏಳುತ್ತಾರೆ ಅನ್ನೋದು ಕಮಲ ನಾಯಕರ ನಂಬಿಕೆ. ಬಿಜೆಪಿ ನಾಯಕರ ನಂಬಿಕೆ ಹುಸಿಯಾಗುವಂತೆ ಮಾಡಲು ಸಿಎಂ ಕುಮಾರಸ್ವಾಮಿ ಸ್ಕೆಚ್​ ಹಾಕಿದ್ದಾರೆ. ಸರ್ಕಾರದ ರಕ್ಷಣೆಗೆ ಮುಂದಾಗಿರುವ ಸಿಎಂ ಕುಮಾರಸ್ವಾಮಿ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯೋಜನೆ ರೂಪಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನ‌ ಮೂವರು ಪ್ರಮುಖ ಶಾಸಕರು ಸಿಎಂಗೆ ಸಲಹೆ ನೀಡಿದ್ದು, ಮೇ 8ರ ಬಳಿಕ ಎಲ್ಲಾ ಕಾಂಗ್ರೆಸ್​, ಜೆಡಿಎಸ್​ ಶಾಸಕರನ್ನೂ ಕರೆದು ಮುಖಾಮುಖಿ ಚರ್ಚಿಸಲು ವೇದಿಕೆ ಸಜ್ಜಾಗಿದೆ.

ಶಾಸಕರ ಸಮಸ್ಯೆ, ಯೋಜನೆಗಳ ಜಾರಿ, ಅನುದಾನ ಬೇಡಿಕೆ ಬಗ್ಗೆ ಮಾತುಕತೆ ನಡೆಸಿ ಬಂಡಾಯ ಬಿಸಿ ಕಡಿಮೆ ಮಾಡಲು ಮುಂದಾಗಿದ್ದಾರಂತೆ. ಪ್ರತಿನಿತ್ಯ 10 ರಿಂದ 12 ಶಾಸಕರ ಜೊತೆ ಚರ್ಚೆ ನಡೆಸಲು ನಿರ್ಧಾರ ಮಾಡಲಾಗಿದ್ದು, ಫಲಿತಾಂಶ ಪ್ರಕಟವಾಗುವ ಮೊದಲೇ ಸರ್ಕಾರ ಗಟ್ಟಿಮಾಡಿಕೊಳ್ಳಲು ಸರ್ಕಸ್​ ನಡೆಸಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ಶಾಸಕರಾದ ಶ್ರೀಮಂತ್ ಪಾಟೀಲ್, ನಾಗೇಂದ್ರ ಜೊತೆ ಸಿಎಂ ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ. ಸೋಮಶೇಖರ್​ ಅವರನ್ನು ಸಮಾಧಾನ ಮಾಡಲು ಬಿಡಿಎ ಆಯುಕ್ತ ರಾಕೇಶ್ ಸಿಂಗ್​ರನ್ನು ಮನೆಗೆ ಕರೆಸಿಕೊಂಡು ಚರ್ಚೆ ಮಾಡಿದ್ದು, ಬಿಡಿಎ ಅಧ್ಯಕ್ಷ ಶಾಸಕ ಸೋಮಶೇಖರ್ ಅಸಮಾಧಾನ ಆಗಿರೋದು ಯಾಕೆ ಅನ್ನೋ ಬಗ್ಗೆ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಆದ್ರೆ ಸ್ವತಃ ಸಿದ್ದರಾಮಯ್ಯ ಅವರೇ ಬಂಡಾಯದ ಹಿಂದಿದ್ದಾರೆ ಅನ್ನೋದು ಮೂಲಗಳ ಮಾಹಿತಿ. ಬಂಡಾಯಗಾರರಿಗೆ  ಚುನಾವಣೆ ಮುಗಿಯುವ ತನಕ ಯಾವುದೇ ನಿರ್ಧಾರಕ್ಕೆ ಬರಬೇಡಿ ಎಂದು ಸಿದ್ದರಾಮಯ್ಯ ಹೇಳಿರುವುದು ಸತ್ಯ.

ಅದೇ ರೀತಿ ಈ ಹಿಂದೆ ಬಂಡಾಯವೆದ್ದಿದ್ದ ರಮೇಶ್​ ಜಾರಕಿಹೊಳಿ ಟೀಂಗೂ ಲೋಕಸಭಾ ಚುನಾವಣೆ ಮುಗಿಯುವ ತನಕ ಸುಮ್ಮನಿರಿ ಎಂದಿದ್ದರು. ಬಿಜೆಪಿ ನಾಯಕರೂ ಕೂಡ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ಸರ್ಕಾರ ಅಸ್ತಿತ್ವದಲ್ಲಿ ಇರಲ್ಲ ಎನ್ನುತ್ತಿದ್ದಾರೆ. ಒಂದು ವೇಳೆ ಮೈತ್ರಿ ಪಕ್ಷಕ್ಕೆ ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಬಾರದೇ ಹೋದರೆ ಸ್ವತಃ ಸಿದ್ದರಾಮಯ್ಯ ಅವರೇ ಸರ್ಕಾರ ಬೀಳಿಸಲು ಮುನ್ನುಡಿ ಬರೆಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದ್ರೆ ಇದೀಗ ಸಿಎಂ ಕುಮಾರಸ್ವಾಮಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಯೋಜನೆ ರೂಪಿಸಿದ್ದು, ಈ ಯೋಜನೆ ಸಕ್ಸಸ್​ ಆಗುತ್ತಾ ಅನ್ನೋದು ಈಗಿರುವ ಪ್ರಶ್ನೆಯಾಗಿದೆ.

Leave a Reply