ಗೌಡರ ಕುಟುಂಬದ ಅಮವಾಸ್ಯೆ ಪೂಜೆ ರಾಜಕಾರಣಕ್ಕಾಗಿ ಅಲ್ಲ! ಮತ್ಯಾಕೆ?

ಡಿಜಿಟಲ್ ಕನ್ನಡ ಟೀಮ್:

ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಪೂಜೆ, ಪುನಸ್ಕಾರ, ದೈವ ಭಕ್ತಿಯನ್ನು ನಾವು ನಿರಂತರವಾಗಿ ನೋಡುತ್ತಲೇ ಬಂದಿದ್ದೇವೆ. ಈಗ ಚಿಕ್ಕಮಗಳೂರಿನ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಅಮವಾಸ್ಯೆ ಪೂಜೆ ಮಾಡಿದ್ದು, ಈ ಪೂಜೆ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರು ಹಾಗೂ ಇಬ್ಬರು ಮೊಮ್ಮಕ್ಕಳಾದ ಪ್ರಜ್ವಲ್ ಹಾಗೂ ನಿಖಿಲ್ ಅವರ ಗೆಲುವಿಗಾಗಿ ಎಂದು ಹೇಳಲಾಗುತ್ತಿತ್ತು. ಆದರೆ ಈ ಪೂಜೆ ನಡೆದಿರೋದು ರಾಜಕೀಯಕ್ಕಾಗಿ ಅಲ್ಲ ಬದಲಿಗೆ ತಮ್ಮ ಹಿರಿಯರ ಸದ್ಗತಿಗಾಗಿ ಎಂಬ ಅಂಶ ತಿಳಿದು ಬಂದಿದೆ.

ಹೌದು, ದೇವೇಗೌಡರ ಕುಟುಂಬ ಪೂಜೆ ಪುನಸ್ಕಾರ ಮಾಡೋದ್ರಲ್ಲಿ ಎತ್ತಿದ ಕೈ. ಅದರಲ್ಲೂ ಕುಮಾರಸ್ವಾಮಿ ಮುಖ್ಯಮಂತ್ರಿ ಪಟ್ಟಕ್ಕೆ ಏರುವ ಮುನ್ನ ಹಾಗೂ ನಂತರ ಕೈ ಮುಗಿಯದ ದೇವಸ್ಥಾನಗಲಿಲ್ಲ. ಕೇರಳ, ತಮಿಳುನಾಡು ಸೇರಿದ ರಾಜ್ಯದ ಪ್ರಮುಖ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಿದ್ರು. ಆ ಬಳಿಕ ಸಿಎಂ ಕುಮಾರಸ್ವಾಮಿ ನೇರವಾಗಿ ನಾನು ದೈವಾನುಗ್ರಹದಿಂದಲೇ ಮುಖ್ಯಮಂತ್ರಿ ಆಗಿದ್ದೇನೆ ಎಂದು ಹೇಳಿಕೊಂಡಿದ್ದು ಕೂಡ ದೊಡ್ಡ ಸುದ್ದಿಯಾಗಿತ್ತು. ಲೋಕಸಭಾ ಚುನಾವಣೆ ಘೋಷಣೆ ಬಳಿಕ ಆದಿಚುಂಚನಗಿರಿ ಕಾಲಭೈರವೇಶ್ವನ ಮೊರೆ ಹೋಗಿದ್ದ ದೇವೇಗೌಡರ ಕುಟುಂಬ ಮೂರು ಅಮವಾಸ್ಯೆಯಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ರು. ಮತ್ತೆ ಅಮವಾಸ್ಯೆ ಪೂಜೆ ಮಾಡಿದ್ದು ಲೋಕಸಭಾ ಚುನಾವಣೆ ಮುಗಿದ ಬಳಿಕ.

ಈ ಪೂಜೆಯ ಕುರಿತು ಸ್ಪಷ್ಟನೆ ನೀಡಿರುವ ಸಚಿವ ರೇವಣ್ಣ, ‘ಕುಡನಲ್ಲಿ‌ ಗ್ರಾಮದ ತುಂಗಾ ನದಿ ತೀರದಲ್ಲಿ ನಡೆದ ಯಾಗ, ಯಾವುದೇ ರಾಜಕಾರಣಕ್ಕಾಗಿ ಅಲ್ಲ. ಬದಲಾಗಿ ನಮ್ಮ ತಂದೆ ಹೆಚ್.ಡಿ ದೇವೇಗೌಡರ ತಂದೆಗೆ ಇಬ್ಬರು ಪತ್ನಿಯರಿದ್ದರು. ಪ್ಲೇಗ್ ಮಹಾಮಾರಿಗೆ ಸಿಲುಕಿದ ನಮ್ಮ ಅಜ್ಜಿಯರು ಅಕಾಲಿಕ ಮರಣಕ್ಕೆ ಈಡಾಗಿದ್ದರು. ಹಿರಿಯ ಹೆಂಡತಿಯ ಮೂವರು ಮಕ್ಕಳೂ ತೀರಿ ಹೋಗಿದ್ದರು. ಅವರ ಸದ್ಗತಿ ಆಗಬೇಕು ಎಂದು ಜ್ಯೋತಿಷಿಗಳು ಸಲಹೆ ಮಾಡಿದ್ರು. ಈ ಹಿನ್ನೆಲೆಯಲ್ಲಿ ನಮ್ಮ ತಂದೆ, ತಾಯಿ ಹಾಗೂ ಸಹೋದರನ ಜೊತೆ ಪೂಜೆ ಸಲ್ಲಿಸಿದ್ದೇವೆ ಅಷ್ಟೇ. ಚಿಕ್ಕಮಗಳೂರಿನ ಕಾಪು ಬಳಿ ದೇವೇಗೌಡರು ಶ್ರಾದ್ಧ ಕರ್ಮ ನೆರವೇರಿಸಿದ್ದಾರೆ. ಇದು ನಿಖಿಲ್ ಅಥವಾ ಪ್ರಜ್ವಲ್ ಗೆಲುವಿಗೆ ಮಾಡಿಸಿದ ಪೂಜೆಯಲ್ಲ. ಆ ಪೂಜೆಯಲ್ಲಿ ನಿಖಿಲ್ ಮತ್ತು ಪ್ರಜ್ವಲ್ ಹಾಗೂ ನನ್ನ ಮತ್ತು ಕುಮಾರಸ್ವಾಮಿಯವರ ಪತ್ನಿ ಭಾಗಿಯಾಗಿರಲಿಲ್ಲ’ ಎಂದಿದ್ದಾರೆ.

ಅಮಾವಾಸ್ಯೆಯಂದು ಕುಮಾರಸ್ವಾಮಿಯಿಂದ ವಿಶೇಷ ಪೂಜೆ ನೆರವೇರಿಸುವ ಸಲುವಾಗಿ ಚಿಕ್ಕಮಗಳೂರಿಗೆ ತೆರಳಿದ್ರು. ಆ ಬಳಿಕ ಕೊಪ್ಪ ತಾಲೂಕಿನ ಕಮ್ಮರಡಿ ಬಳಿಯ ಕುಡನಳ್ಳಿಯಲ್ಲಿರೋ ಉಮಾಮಹೇಶ್ವರಿ ದೇವಾಲಯದಲ್ಲಿ ಖ್ಯಾತ ಜ್ಯೋತಿಷಿ ಸೋಮಯಾಜಿ ನೇತೃತ್ವದಲ್ಲಿ ಶತ್ರು ಸಂಹಾರ ಯಾಗ ಹಾಗೂ ಗಣಹೋಮ ಮಾಡಿದ್ರು. ಈ ಪೂಜೆಯಿಂದ ಯಶಸ್ಸು ಹಾಗೂ ಶ್ರೇಯಸ್ಸು ಲಭ್ಯವಾಗಲಿದೆ ಎನ್ನಲಾಗಿತ್ತು. ಕೊಪ್ಪ ತಾಲೂಕಿನ ಜೆಡಿಎಸ್ ಕಾರ್ಯಕರ್ತ ರಂಗನಾಥ್ ಎಂಬುವರ ಗುಡ್ಡೇತೋಟ ಎಸ್ಟೇಟ್‍ನಲ್ಲಿ ವಾಸ್ತವ್ಯ ಹೂಡಿದ್ದ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರನ್ನು ಬೆಳಗ್ಗೆ ಸಚಿವ ರೇವಣ್ಣ ಹಾಗೂ ದೇವೇಗೌಡರ ಪತ್ನಿ ಚನ್ನಮ್ಮ ಸೇರಿಕೊಂಡಿದ್ದರು.  ರುದ್ರಹೋಮ ಹಾಗೂ ಗಣಪತಿ ಹೋಮ ಆರಂಭವಾದ ಹೋಮಹವನ, ನಾಳೆ ಬೆಳಗ್ಗೆ ಹೋಮದ ಪೂರ್ಣಾಹುತಿಯಲ್ಲಿ ಮುಕ್ತಾಯವಾಗಿತ್ತು. ಯಾಗ, ಪೂಜೆ ಮುಗಿಸಿ ಕುಡನಲ್ಲಿ ಗ್ರಾಮದಿಂದ ದೇವೇಗೌಡ ಕುಟುಂಬ ತೆರಳುವ ತನಕ ಸಾರ್ವಜನಿಕರಿಗೆ ದರ್ಶನ ಲಭ್ಯವಾಗಲಿಲ್ಲ. ಸಿಎಂ ಜೊತೆಗಿದ್ದ ಪೊಲಿಸರಿಗೂ ಅವಕಾಶ ಲಭ್ಯವಾಗಲಿಲ್ಲ. ಬರೋಬ್ಬರಿ 11 ಗಂಟೆಗಳ ಕಾಲ ನಡೆದ ಪೂಜಾ ವಿಧಿ ವಿಧಾನದಲ್ಲಿ ತುಂಬಾ ಗೌಪ್ಯತೆ ಕಾಯ್ದುಕೊಳ್ಳಲಾಯ್ತು.

Leave a Reply