ಶಿವಳ್ಳಿ ಪತ್ನಿ ಕುಸುಮಾರನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ, ಸ್ನೇಹಿತನನ್ನು ನೆನೆದು ಕಣ್ಣೀರು ಹಾಕಿದ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

ಶಿವಳ್ಳಿ ನನ್ನ ಸ್ನೇಹಿತ, ಆತ ಎಂದಿಗೂ ಜಾತಿ ಧರ್ಮ ಬೇದಬಾವ ಮಾಡಿದ ನಾಯಕನಿಲ್ಲ. ಅವನ ನಿಧನದಿಂದ ತೀವ್ರ ನೋವಾಗಿದೆ. ಈಗ ಅವರ ಪತ್ನಿ ಕುಸುಮಾರನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ನೀವೇ ಅವರನ್ನು ಕಾಪಾಡಬೇಕು ಎಂದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ಕುಂದಗೋಳ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಕುಂದಗೋಳ ಉಪಚುನಾವಣೆಗಾಗಿ ಇಂಗಳಗಿ ಗ್ರಾಮದಲ್ಲಿ ಗುರುವಾರ ಪ್ರಚಾರ ನಡೆಸಿದ ಡಿಕೆ ಶಿವಕುಮಾರ್, ತಮ್ಮ ಆಪ್ತ ಸ್ನೇಹಿತ ದಿವಂಗತ ಶಿವಳ್ಳಿ ಅವರನ್ನು ನೆನೆದು ಕಣ್ಣೀರು ಸುರಿಸಿದರು. ಈ ವೇಳೆ ಅವರು ಹೇಳಿದ್ದಿಷ್ಟು…

ಶಿವಳ್ಳಿ ಇಂದು ನಮ್ಮ ಜತೆ ಇಲ್ಲ. ಆದರೆ ಅವರ ಆತ್ಮ ನಮ್ಮೊಂದಿಗೆ ಇದೇ. ಆಟ ಯಾವತ್ತಾದರೂ ನಿಮಗೆ ಕಿರುಕುಳ ನೀಡಿದ್ದಾನಾ ಹೇಳಿ? ನಿಮ್ಮಲ್ಲಿ ಜಾತಿ ಆಧಾರವಾಗಿ ಕಂಡಿದ್ದನೆ? ನಾನು ಅಜ್ಜನವರ ಬಳಿ ಮಾತನಾಡನ ಎಂದು ಪೀಠಕ್ಕೆ ಕೈ ಮುಗಿದು ಹೊರ ಬರುತ್ತಿದ್ದಂತೆ ಶಿವಳ್ಳಿ ಇನ್ನಿಲ್ಲ ಅಂತಾನೆ ಸುದ್ದಿ ಬಂತು. ಇಂದು ಅದೇ ಜಾಗದಲ್ಲಿ ನಿಂತು ನಿಮ್ಮ ಬಳಿ ಮತಯಾಚನೆ ಮಾಡುತ್ತಿದ್ದೇನೆ. ನಾನು ಇಂದು ಮತಯಾಚನೆ ಮಾಡುತ್ತಿರೋದು ಶಿವಳ್ಳಿಗೋಸ್ಕರ.

ಈ ಚುನಾವಣೆ ಶಿವಳ್ಳಿಯ ಚುನಾವಣೆಯಲ್ಲ. ನಿಮ್ಮ ಚುನಾವಣೆ. ನೀವೆಲ್ಲಾ ಹಗಲು ರಾತ್ರಿ ಶಿವಳ್ಳಿ ಜತೆ ಇದ್ದೀರಿ. ಇಷ್ಟು ವರ್ಷಗಳ ಕಾಲ ಆತನನ್ನು ಪಂಚಾಯ್ತಿಯಿಂದ ವಿಧಾನಸೌಧದ ಮಂತ್ರಿಯಾಗುವವರೆಗೂ ಬೆಳೆಸಿದ್ದೀರಿ. ಇವತ್ತು ಆ ಹೆಣ್ಣು ಮಗಳು ಚುನಾವಣೆಯಲ್ಲಿ ನಿಂತಿದ್ದಾಳೆ. ಅವಳನ್ನು ನೀವು ಬೆಳೆಸಬೇಕು.

ಆಕೆ ಒಂದು ದಿನ ಕೂಡ ನನ್ನ ಮನೆಗೆ ಅಥವಾ ದಿನೇಶ್ ಗುಂಡೂರಾಯರ ಮನೆಗೆ ಬಂದವಳಲ್ಲ. ನಾವು ಇಲ್ಲಿನ ಕಾರ್ಯಕರ್ತರ ಬಳಿ ಕೇಳಿದೆವು. ಏನಪ್ಪಾ ಮಾಡೋಣ ಅಂತಾ. ಅವರು ಹೇಳಿದ್ದು, ಕುಸುಮಾಕ್ಕಗೆ ಒಂದು ಅವಕಾಶ ಮಾಡಿಕೊಡಬೇಕು ಎಂದರು. ಹೀಗಾಗಿ ಕುಸುಮಾರನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ.

ಶಿವಳ್ಳಿ ಇರುವಷ್ಟು ದಿನ ಬಡವರ ಪರವಾಗಿ ಕೆಲಸ ಮಾಡಿದ್ದ. ಆತ ಯಾವತ್ತಾದರೂ ಜಾತಿ ಮಾಡಿದ್ದನಾ? ಈತ ಲಿಂಗಾಯತ, ಈತ ಕುರುಬ, ಪರಿಶಿಷ್ಟ ಜಾತಿಯವನು ಎಂದು ಭೇದ ಮಾಡಿದ್ದನಾ? ಯಾವುದಾದರು ಅಧಿಕಾರಿಗಳಿಗೆ ಕಿರುಕುಳ ನೀಡಿದ್ದನಾ? ಇಲ್ಲಾ. ನೀವು ಆತನ ಮನೆಗೆ ಹೋದಾಗ ಅವನ ಕೈಯಲ್ಲಾದ ಸಹಾಯ ಮಾಡಿ ನಿಮ್ಮನ್ನು ಗೌರವ ಹಾಗೂ ಅಭಿಮಾನದಿಂದ ನಡೆಸಿಕೊಂಡಿದ್ದಾನೆ.

ಆಸ್ಪತ್ರೆಯಲ್ಲಿರೋರಿಗೆ ಸೇವೆ ಮಾಡಿದ್ದಾನೆ. ಕಳೆದ 30 ವರ್ಷಗಳ ರಾಜಕೀಯದಲ್ಲಿ ಶೆಟ್ಟರ್ ಅವರೂ ಇದ್ದಾರೆ, ಬೊಮ್ಮಾಯಿ ಅವರೂ ಇದ್ದಾರೆ, ಪ್ರಹ್ಲಾದ್ ಜೋಷಿ ಅವರೂ ಇದ್ದಾರೆ, ಚಿಕ್ಕಣ್ಣಗೌಡರೂ ಇದ್ದಾರೆ. ಅವರು ಯಾರಾದರೂ ಶಿವಳ್ಳಿ ರೀತಿಯಲ್ಲಿ ಆಸ್ಪತ್ರೆ ಸೇರಿದವರಿಗೆ ಸೇವೆ ಮಾಡಿದ್ದಾರಾ?

ಈಗ ಚುನಾವಣೆ ಬಂದಿದೆ ಓಟ್ ಕೊಡಿ ಎಂದು ನಾನು ಕಣ್ಣಿರು ಹಾಕಿಲ್ಲಾ. ಬದಲಿಗೆ ನನಗೆ ತುಂಬಾ ಹತ್ತಿರವಾದ ಗೆಳೆಯ ಅವನು. ಅವನನ್ನು ಕಳೆದುಕೊಂಡ ನೋವಿನಿಂದ ಕಣ್ಣೀರು ಹಾಕಿದ್ದೇನೆ. ನಾ ನಾಟಕ ಮಾಡುತಿಲ್ಲಾ. ಕನಕಪುರದ ಜನರಿಗೆ ಮಾಡಿದ ಸೇವೆಯನ್ನು ನಿಮಗೂ ಮಾಡುತ್ತೇನೆ.’

ರಾಮುಲು ಅಣ್ಣಾ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ:

ಕಾಂಗ್ರೆಸ್ ಪಕ್ಷ ಹಾಗೂ ಮೈತ್ರಿ ಸರ್ಕಾರದ ಕಿರುಕುಳವೇ ಸಿ.ಎಸ್ ಶಿವಳ್ಳಿ ಅವರ ಸಾವಿಗೆ ಕಾರಣ ಎಂಬ ಶಾಸಕ ಬಿ.ಶ್ರೀರಾಮುಲು ಅವರ ಹೇಳಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಈ ವಿಚಾರದಲ್ಲಿ ತನಿಖೆಯಾಗಬೇಕು ಸತ್ಯ ಗೊತ್ತಾಗಬೇಕು ಎಂದು ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಈ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು ಹೇಳಿದ್ದಿಷ್ಟು…

‘ರಾಮುಲು ಅವರ ಹೇಳಿಕೆಯಿಂದ ಇಡೀ ಕುಂದಗೋಳ ಕ್ಷೇತ್ರ, ನಮ್ಮ ಎಲ್ಲಾ ಮತದಾರರಿಗೆ ಗಾಬರಿಯಾಗಿದೆ. ನಿನ್ನೆ ಶ್ರೀರಾಮುಲು ಅವರು ಬಂದು ಸರ್ಕಾರ ಹಾಗೂ ಒಂದು ಪಕ್ಷ ಶಿವಳ್ಳಿ ಅವರ ಸಾವಿಗೆ ಕಾರಣ ಎಂದು ಹೇಳಿದ್ದಾರೆ. ನಾವು ಶಿವಳ್ಳಿ ಅವರಿಗೆ ಕಿರುಕುಳ ಕೊಟ್ಟಿದ್ದೇವೆ ಎಂದು ಆರೋಪ ಮಾಡಿದ್ದಾರೆ. ಶಿವಳ್ಳಿ ಸಾವಿನ ಹಿಂದೆ ಯಾರಿದ್ದಾರೆ? ಮುಖ್ಯಮಂತ್ರಿ ಕೊಲೆ ಮಾಡಿಸಿದ್ದಾರಾ? ಡಿಕೆ ಶಿವಕುಮಾರ್ ಕೊಲೆ ಮಾಡಿಸಿದ್ಧಾರಾ? ಜಿಲ್ಲಾ ಸಚಿವರಾದ ದೇಶಪಾಂಡೆ ಒತ್ತಡ ಹಾಕಿದ್ದಾರಾ? ನಮ್ಮ ಎಂಪಿ ಅಭ್ಯರ್ಥಿ ಮಾಡಿದ್ದಾರಾ? ಎಂದು ಎಲ್ಲರಲ್ಲೂ ಅನುಮಾನ ಬಂದಿದೆ. ನಮ್ಮ ಕಾರ್ಯಕರ್ತರು ನಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಈ ಎಲ್ಲ ಅನುಮಾನಗಳಿಂದ ನಾವೂ ಹೊರ ಬರಬೇಕಿದೆ. ಅದಕ್ಕಾಗಿ ಈಗ ಉಗ್ರಪ್ಪನವರು ಜಿಲ್ಲಾ ಚುನಾವಣಾ ಅಧಿಕಾರಿ ಭೇಟಿಯಾಗಲು ಸಮಯ ನಿಗದಿ ಮಾಡಿಕೊಂಡಿದ್ದಾರೆ. ನಂತರ ಸರ್ಕಲ್ ಇನ್ಸ್ಪೆಕ್ಟರ್ ಬಳಿ ದೂರು ನೀಡುತ್ತೇವೆ. ಕೂಡಲೇ ಪ್ರಕರಣ ದಾಖಲಿಸಬೇಕಿದೆ.

ಮಾಜಿ ಸಚಿವರು, ಸಂಸದರು ಹಾಗೂ ಹಾಲಿ ಶಾಸಕರು ಇಂತಹ ಹೇಳಿಕೆ ನೀಡಿದ್ದಾರೆ. ಅದರಲ್ಲಿ ಸತ್ಯಾಂಶ ಇದೆಯೋ ಇಲ್ಲವೋ, ನಾವು ಅದನ್ನು ಖಂಡಿಸುವುದು ಬೇರೆ ವಿಚಾರ. ಆದರೆ ಸತ್ಯಾಂಶ ಗೊತ್ತಾಗಿ ನಮ್ಮಮೇಲಿನ ಅನುಮಾನ ಬಗೆಹರಿಯಬೇಕು.

ಈ ಕ್ಷೇತ್ರದ ಜನ ನಾಳೆ ಅವರು ಇಲ್ಲಿಗೆ ಬಂದಾಗ ಅವರನ್ನು ಅಡ್ಡ ಹಾಕುವುದು, ಗಲಾಟೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಈ ವಿಚಾರ ಕ್ಷೇತ್ರದ ಪ್ರತಿಯೊಬ್ಬ ಮತದಾರನ ಸ್ವಾಭಿಮಾನದ ಪ್ರಶ್ನೆ.

ಅವರು ಈಗ ಏನೇ ಸ್ಪಷ್ಟನೆ ನೀಡುವುದಿದ್ದರೂ ಪೊಲೀಸ್ ಠಾಣೆಯಲ್ಲಿ ನೀಡಲಿ. ಸುಮ್ಮನೆ ಮಾಧ್ಯಮದ ಮುಂದೆ ಬೇಕಾಬಿಟ್ಟಿ ಹೇಳಿಕೆ ನೀಡುವುದಲ್ಲ. ಇದು ಒಂದು ಪಕ್ಷ ಹಾಗೂ ಸರ್ಕಾರದ ಘನತೆ ವಿಷಯ. ಹೀಗಾಗಿ ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ.

ನನ್ನ ರಾಜಕೀಯ ನೆನಪಿನ ಶಕ್ತಿ ಪ್ರಕಾರ ಈ ಹಿಂದೆ ಮುಖ್ಯಮಂತ್ರಿಗಳ ವಿರುದ್ಧವೇ ಕೊಲೆಗೆ ಸಂಚು ಮಾಡಿದ ಆರೋಪವನ್ನು ಮಾಡಿದ್ದರು. ಅವತ್ತು ಕುಮಾರಸ್ವಾಮಿ ಅವರು ಸುಮ್ಮನಿರಬಹುದು. ಆದರೆ ನಾವು ಸುಮ್ಮನಿರಲು ಸಾಧ್ಯವಿಲ್ಲ.

ನಾನು ಸರ್ಕಾರದ ಭಾಗವಾಗಿದ್ದೇನೆ. ಶಿವಳ್ಳಿ ನನ್ನ ಆಪ್ತ ಸ್ನೇಹಿತ. ಈ ಸ್ನೇಹಿತನಿಗೆ ನಾವೇ ಯಾರಾದರೂ ಕೊಲೆ ಮಾಡಲು ಕಿರುಕುಳ ನೀಡಿದ್ದಾರೆ ಎಂದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.

ನಾನು ನಿನ್ನೆಯಿಂದ ಶಿವಳ್ಳಿಯವರಿಗೆ ಕಾರ್ಯಕರ್ತರಾಗಲಿ, ಅಧಿಕಾರಿಗಳಾಗಲಿ, ನಾಯಕರಾಗಲಿ ಯಾರಾದರೂ ಕಿರುಕುಳ ನೀಡಿದ್ದಾರಾ ಎಂದು ಕ್ರಾಸ್ ಚೆಕ್ ಮಾಡುತ್ತಿದ್ದೇನೆ. ಯಾರು ಕೂಡ ಇದನ್ನು ಒಪ್ಪಿಕೊಂಡಿಲ್ಲ. ಯಾವುದೇ ಅಪರಾಧಕ್ಕೆ ಸಂಬಂಧಿಸಿದ ಮಾಹಿತಿಯನ್ನು ಗುಪ್ತವಾಗಿ ಇಡುವುದು ಕೂಡ ದೊಡ್ಡ ಅಪರಾಧ. ಹೀಗಾಗಿ ಇದು ತನಿಖೆಯಾಗಬೇಕು.’

Leave a Reply