ರಾಜೀವ್ ಗಾಂಧಿ ಬಗ್ಗೆ ಮೋದಿ ಆಡಿದ ಮಾತಿಗೆ ಬಿಜೆಪಿ ನಾಯಕನ ಬಹಿರಂಗ ಟೀಕೆ!

ಡಿಜಿಟಲ್ ಕನ್ನಡ ಟೀಮ್:

ಮಾಜಿ ಪ್ರಧಾನಿ ರಾಜೀವ್ ಗಾಂಧಿ, ನಂಬರ್ ಒನ್ ಭ್ರಷ್ಟಾಚಾರಿ, ಭ್ರಷ್ಟಾಚಾರದ ಕರಿ ನೆರಳಲ್ಲೇ ಸಾವನ್ನಪ್ಪಿದ್ರು ಎಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ‌್ಯಾಲಿ ವೇಳೆ ವಾಗ್ದಾಳಿ ಮಾಡಿದ್ರು. ಈ ಹೇಳಿಕೆ ಕಾಂಗ್ರೆಸ್ ನಾಯಕರನ್ನು ಅಷ್ಟೇ ಅಲ್ಲದೆ ಕೆಲವು ಬಿಜೆಪಿ ನಾಯಕರನ್ನೂ ಚಕಿತಗೊಳಿಸಿತ್ತು. ಆದರೆ ಯಾರೂ ಕೂಡ ಆ ಬಗ್ಗೆ ಬಹಿರಂಗವಾಗಿ ಮಾತನಾಡಿರಲಿಲ್ಲ. ಆದ್ರೀಗ ಕರ್ನಾಟಕದ ಬಿಜೆಪಿ ನಾಯಕ ನರೇಂದ್ರ ಮೋದಿ ಹೇಳಿಕೆ ತಪ್ಪು ಎಂದು ಹೇಳುವ ಮೂಲಕ ನರೇಂದ್ರ ಮೋದಿ ಚುನಾವಣಾ ರಾಜಕೀಯದ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದಾರೆ.

ರಾಜೀವ್ ಗಾಂಧಿ ಭ್ರಷ್ಟಾಚಾರಿ ಎಂಬ ಮೋದಿ ಹೇಳಿಕೆ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಹಿರಿಯ ನಾಯಕ ಶ್ರೀನಿವಾಸ ಪ್ರಸಾದ್, ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ನನ್ನ ವಿರೋಧ ಇದೆ ಎಂದಿದ್ದಾರೆ.

ರಾಜೀವ್‌ಗಾಂಧಿ ಎಂದೂ ಸಹ ಭ್ರಷ್ಟಾಚಾರ ಮಾಡಿದವರಲ್ಲ. ಭ್ರಷ್ಟಾಚಾರ ಆರೋಪ ಬಂದಾಗ ರಾಜಕೀಯ ಬಿಟ್ಟು ಎಲ್ಲಾದ್ರೂ ಹೋಗ್ತಿನಿ ಎಂದಿದ್ರು. ಅಂಥವರ ಬಗ್ಗೆ ದೆಹಲಿ ಹೈಕೋರ್ಟ್ ಸಹ ಆರೋಪ ಮುಕ್ತ ಮಾಡಿದೆ. ಅಂತವರ ಬಗ್ಗೆ ಮೋದಿ ಲಖ್ನೋದಲ್ಲಿ ಮಾತನಾಡಿರೋದು ಸರಿಯಲ್ಲ. ಆ ರೀತಿಯ ಮಾತು ಮೋದಿ ಬಾಯಿಂದ ಬರಬಾರದಿತ್ತು. ರಾಜೀವ್ ಗಾಂಧಿ ರಾಜಕೀಯಕ್ಕೆ ಬಂದಾಗಲೇ ಶುದ್ದ ಹಸ್ತರು ಅಂತ ಸಾಬೀತು ಮಾಡಿದ್ದಾರೆ. ನಾನು ಹಣ ಮಾಡಲು ಅಧಿಕಾರಕ್ಕೆ ಬಂದಿಲ್ಲ ಅಂತ ನೇರವಾಗಿ ಹೇಳಿದ್ದರು.

ಜನರು ನಮ್ಮ ಕುಟುಂಬದ ಬಗ್ಗೆ ಇಟ್ಟ ಗೌರವಕ್ಕಾಗಿ ಬಂದಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದ್ದರು.ಅಂತಹ ರಾಜೀವ್ ಗಾಂಧಿ ಬಗ್ಗೆ ಅಟಲ್ ಬಿಹಾರಿ ವಾಜಪೇಯಿಯವರೇ ಒಳ್ಳೆ ಮಾತು ಆಡಿದ್ದಾರೆ. ಈಗ ಮೋದಿ ಆ ರೀತಿಯ ಮಾತನಾಡಿದ್ದು ನನಗೂ ಬೇಸರವಾಯಿತು ಎಂದಿದ್ದಾರೆ.

ದೇಶಕ್ಕಾಗಿ ರಾಜೀವ್ ಗಾಂಧಿ ತನ್ನ ಪ್ರಾಣವನ್ನೇ ಅರ್ಪಿಸಿದರು.‌ ಅಂತವರ ತ್ಯಾಗದ ಬಗ್ಗೆ ಮೋದಿ ಮಾತನಾಡಬೇಕಿತ್ತು.‌ ಆದ್ರೆ ಭ್ರಷ್ಟಾಚಾರದ ಬಗ್ಗೆ ಮಾತನಾಡಿದೋ ಸರಿಯಲ್ಲ. ರಾಜೀವ್ ಗಾಂಧಿ ಬಗ್ಗೆ ಮೋದಿಯವರು ಈ ರೀತಿ ಮಾತನಾಡಿದ್ದು ನನಗೆ ಸರಿ ಅನ್ನಿಸಿಲ್ಲ ಎಂದು ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಬಹಿರಂಗವಾಗಿ ಖಂಡಿಸಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮೀಸ್ಟರ್ ಕ್ಲೀನ್ ಅಂತ ಹೆಸರು ಪಡೆದಿದ್ದವರು. ಅವರನ್ನ ನಾನು ತುಂಬಾ ಹತ್ತಿರದಿಂದ ಬಲ್ಲೆ. ಅವರ ರಾಜಕೀಯ ಒಂದು ಉದಾಹರಣೆಯಾಗಿದೆ. ಅಂಥವರ ಬಗ್ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡೋದು ಸರಿಯಲ್ಲ‌ ಎಂದು ಆಕ್ರೋಶ ಹೊರಹಾಕಿದ್ದಾರೆ. ಪ್ರಧಾನಿ ಮೋದಿ ಅವರನ್ನು ಮಾತಿನಲ್ಲೇ
ಮೋದಿ ಮಾತಿಗೆ ವಿರೋಧ ವ್ಯಕ್ತಪಡಿಸಿದ ಯಾರನ್ನೂ ಪಕ್ಷದಲ್ಲಿ ಉಳಿಸಿಕೊಳ್ಳುವ ಸಂಪ್ರದಾಯ ಬಿಜೆಪಿಯಲ್ಲಿ ಇಲ್ಲ. ಇದೀಗ ವಿ.ಶ್ರೀನಿವಾಸ್ ಪ್ರಸಾದ್ ಮೋದಿ ಮಾತು ಸರಿಯಲ್ಲ ಎಂದು ನೇರವಾಗಿ ಹೇಳಿದ್ದಾರೆ. ಇದೀಗ ಶ್ರೀನಿವಾಸ ಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳುತ್ತಾ ಅನ್ನೋ ಮಾತುಗಳು ಕೇಳಿಬಂದಿವೆ.

Leave a Reply