ಮತ್ತೊಮ್ಮೆ ಪ್ರಧಾನಿಯಾಗುವ ಹಾದಿಯಲ್ಲಿರುವ ಮೋದಿ ಮುಂದೆ ಇರೋದು ಒಂದೆರಡು ವಿಘ್ನಗಳಲ್ಲ!

ಡಿಜಿಟಲ್ ಕನ್ನಡ ಟೀಮ್:

ಮತ್ತೊಮ್ಮೆ ಮೋದಿ ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಲೋಕಸಭೆ ಚುನಾವಣೆಯನ್ನು ಎದುರಿಸುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಸಿಗುವ ಸೂಚನೆ ಕಾಣುತ್ತಿಲ್ಲ. ಇನ್ನು ಎರಡನೇ ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಬೇಕು ಎಂಬ ಕನಸು ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿ ಮುಂದೆ ಅನೇಕ ವಿಘ್ನಗಳು ಸಾಲು ಸಾಲಾಗಿ ನಿಂತಿವೆ.

ಒಂದೆಡೆ ವಿರೋಧ ಪಕ್ಷಗಳ ಮೈತ್ರಿ, ಮತ್ತೊಂದೆಡೆ ಪಕ್ಷಕ್ಕೆ ಉತ್ತಮ ಬಹುಮತ ಬರದಿದ್ದರೆ ನಿತೀನ್ ಗಡ್ಕರಿ ಅವರನ್ನು ಬದಲಿ ನಾಯಕನಾಗಿ ಆಯ್ಕೆ ಮಾಡುವ ಪ್ರಯತ್ನ ನಡೆಯುತ್ತಿದೆ. ಈ ಮಧ್ಯೆ ಈಗ ಬಿಹಾರ ಮುಖ್ಯಮಂತ್ರಿಯನ್ನು ಎನ್ ಡಿಎ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವಂತೆ ಒತ್ತಡ ಬರುತ್ತಿದೆ.

ಹೌದು, ಮೋದಿ ಮತ್ತೆ ಪ್ರಧಾನಿ ಹುದ್ದೆ ಅಲಂಕರಿಸಬೇಕಾದರೆ ಕಳೆದ ಬಾರಿಯಂತೆ ಬಿಜೆಪಿಗೆ ಭರ್ಜರಿ ಬಹುಮತ ತಂದುಕೊಡಲೇಬೇಕು. ಜತೆಗೆ ಎನ್ ಡಿಎ ಜತೆಗಿರುವ ಇತರೆ ಪಕ್ಷಗಳ ಬೆಂಬಲವೂ ಅಗತ್ಯವಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಉತ್ತರ ಪ್ರದೇಶದಿಂದಲೇ ಸುಮಾರು 50ಕ್ಕೂ ಹೆಚ್ಚು ಕ್ಷೇತ್ರಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ರಾಜ್ಯದಲ್ಲಿ 22 ಸ್ಥಾನ ಗೆಲ್ಲುತ್ತೇವೆ ಎಂದು ನಾಯಕರು ಹೇಳಿಕೊಂಡು ತಿರುಗುತ್ತಿದ್ದರೂ ತಳಮಟ್ಟದ ಪರಿಸ್ಥಿತಿ ನೋಡಿದರೆ ಕಳೆದ ಚುನಾವಣೆಯಲ್ಲಿ ಪಡೆದಷ್ಟು ಕ್ಷೇತ್ರಗಳನ್ನು ಉಳಿಸಿಕೊಂಡರೆ ಅದೇ ದೊಡ್ಡ ಸಾಧನೆಯಾಗಲಿದೆ.

ಇನ್ನು ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತಾಗಿ ಬಿಜೆಪಿಗೆ ಇತರೆ ಯಾವುದೇ ರಾಜ್ಯಗಳಲ್ಲಿ ಜಾಗ ನೆಲೆ ಸಿಗುವ ಲಕ್ಷಣಗಳು ಗೋಚರಿಸಿಲ್ಲ. ಕಳೆದ ಬಾರಿ ಎನ್ ಡಿಎನಲ್ಲಿ ಗುರುತಿಸಿಕೊಂಡಿದ್ದ ಟಿಡಿಪಿ ಈಗ ದೂರವಾಗಿದೆ. ಇನ್ನು ತಮಿಳುನಾಡಿನಲ್ಲಿ ಎನ್ ಡಿಎ ಮೈತ್ರಿಕೂಟದ ಎಐಎಡಿಎಂಕೆ ಎಷ್ಟು ಸೀಟು ಗೆಲ್ಲುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಜಯಲಲಿತಾ ಸಾವಿನ ನಂತರ ಎಐಎಡಿಎಂಕೆ ಒಡೆದ ಮನೆಯಾಗಿದ್ದು, ಇದು ಡಿಎಂಕೆಗೆ ಲಾಭವಾಗುವ ಸಾಧ್ಯತೆ ಹೆಚ್ಚಾಗಿದೆ.

ಇನ್ನು ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಬಿಜೆಪಿ ಸಂಖ್ಯಾಬಲ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿದ್ದಂತೆ ಜೆಡಿಯು ನಾಯಕ ನಿತೀಶ್ ಕುಮಾರ್ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿ ಎಂಬ ಒತ್ತಡ ಹೆಚ್ಚುತ್ತಿದೆ. 2014ರ ಚುನಾವಣೆ ವೇಳೆ ದೇಶದ ನಾಯಕತ್ವ ವಿಚಾರದಲ್ಲಿ ದೈತ್ಯವಾಗಿ ಕಂಡಿದ್ದ ನರೇಂದ್ರ ಮೋದಿಯನ್ನು ಎದುರಿಸಲು ಸೂಕ್ತ ಪ್ರತಿಸ್ಪರ್ಧಿ ನಿತೀಶ್ ಕುಮಾರ್ ಆಗಿದ್ದರು. ಅದೇ ಕಾರಣಕ್ಕೆ ಬಿಹಾರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್, ಆರ್ ಜೆಡಿ ಹಾಗೂ ಜೆಡಿಯು ಪಕ್ಷಗಳು ಮಹಾಮೈತ್ರಿ ಮಾಡಿಕೊಂಡು ಬಿಹಾರದಲ್ಲಿ ಅಧಿಕಾರ ಸಾಧಿಸಿ ಮೋದಿ ನೇತೃತ್ವದ ಬಿಜೆಪಿಗೆ ಸವಾಲಾಕಿದ್ದರು. ನಂತರದ ರಾಜಕೀಯ ಮೇಲಾಟದಲ್ಲಿ ಜೆಡಿಯು ಕಾಂಗ್ರೆಸ್, ಆರ್ ಜೆಡಿ ಸಹವಾಸವನ್ನು ತ್ಯಜಿಸಿ ಬಿಜೆಪಿ ಬೆಂಬಲದೊಂದಿಗೆ ಅಧಿಕಾರ ನಡೆಸುತ್ತಿದೆ. ಈಗ ಮತ್ತೆ ನಿತೀಶ್ ಕುಮಾರ್ ಅವರೇ ಎನ್ ಡಿಎ ಮೈತ್ರಿಕೂಟದಲ್ಲಿ ಮೋದಿಗೆ ಪ್ರತಿಸ್ಪರ್ಧಿಯಾಗುವ ಸಾಧ್ಯತೆಗಳು ದಟ್ಟವಾಗಿವೆ.

ಇವಿಷ್ಟು… ಬಿಜೆಪಿ ಹಾಗೂ ಎನ್ಡಿಎ ಮೈತ್ರಿಕೂಟದಲ್ಲೇ ಉದ್ಭವಿಸಿರುವ ಸವಾಲುಗಳು. ಇನ್ನು ವಿರೋಧ ಪಕ್ಷಗಳ ಮಹಾಮೈತ್ರಿ ಮತ್ತೆ ಚಿಗುರೊಡೆಯುತ್ತಿರೋದು ಮೋದಿ ಹಾಗೂ ಬಿಜೆಪಿ ನೆಮ್ಮದಿ ಕೆಡಿಸಿದೆ. ಬಿಜೆಪಿ ನೇತೃತ್ವದ ಎನ್ಡಿಎ ಚುನಾವಣೆಯಲ್ಲಿ 230ರಿಂದ 250 ಸ್ಥಾನಗಳಿಗೆ ಬಂದು ನಿಲ್ಲಲಿವೆ ಎಂಬ ಸಮೀಕ್ಷೆಗಳು ಹೊರಬೀಳುತ್ತಿದ್ದಂತೆ ವಿರೋಧ ಪಕ್ಷಗಳಲ್ಲಿನ ಮಹಾಮೈತ್ರಿಗೆ ರೆಕ್ಕೆಪುಕ್ಕ ಬರುತ್ತಿವೆ.

ಉತ್ತರ ಪ್ರದೇಶದಲ್ಲಿ ಎಸ್ ಪಿ ಹಾಗೂ ಬಿಎಸ್ ಪಿ ಪಕ್ಷಗಳ ಕಾಂಗ್ರೆಸ್ ಅನ್ನು ದೂರವಿಟ್ಟು ಮೈತ್ರಿ ಮಾಡಿಕೊಂಡಿದ್ದರೂ ಈ ಮೂರು ಪಕ್ಷಗಳು ಫಲಿತಾಂಶದ ನಂತರ ಒಂದಾಗುವ ಸಾಧ್ಯತೆ ಇದೆ. ಈಗಾಗಲೇ ಕಾಂಗ್ರೆಸ್ ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಎಸ್ ಪಿ- ಬಿಎಸ್ ಪಿ ಮೈತ್ರಿಗೆ ಪರೋಕ್ಷ ಬೆಂಬಲ ನೀಡಿತ್ತು. ಇನ್ನು ಕಳೆದ ವಾರ ಮಾಯಾವತಿ ಅವರು ಅಮೇಥಿ ಹಾಗೂ ರಾಯ್ ಬರೇಲಿಯಲ್ಲಿ ಮತದಾರರು ಕಾಂಗ್ರೆಸ್ ಗೆ ಮತಹಾಕಿ ಎಂದು ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಅತ್ತ ಚಂದ್ರಬಾಬು ನಾಯ್ಡು ಅವರು ಬಿಜೆಪಿಯನ್ನು ಮಣಿಸಬೇಕು ಎಂದು ಪಣತೊಟ್ಟಿದ್ದು, ತಮ್ಮ ರಾಜಕೀಯ ವೈರಿಗಳಾದ ವೈಎಸ್ಆರ್ ಕಾಂಗ್ರೆಸ್ ಹಾಗೂ ಟಿಆರ್ ಎಸ್ ಜತೆ ಮೈತ್ರಿ ಕುದುರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಬಿಹಾರದಲ್ಲಿ ಆರ್ ಜೆಡಿ, ಪಶ್ಚಿಮ ಬಂಗಾಳದ ಟಿಎಂಸಿಯ ನಾಯಕಿ ಮಮತಾ ಬ್ಯಾನರ್ಜಿ, ಟಿಆರ್ ಎಸ್ ನ ಚಂದ್ರಶೇಖರ್ ರಾವ್ ಅವರು ಅನೇಕ ಸುತ್ತಿನ ಮಾತುಕತೆ ನಡೆಸಿದ್ದಾರೆ.

ಈ ಮಧ್ಯೆ ಲೋಕಸಭೆಯಲ್ಲಿ ಕರ್ನಾಟಕ ಮಾದರಿಯಲ್ಲಿ ಮೈತ್ರಿ ಸರ್ಕಾರ ರಚನೆ ಮಾಡಲಾಗುವುದು ಎಂದಿರುವ ಮಾಜಿ ಪ್ರಧಾನಿ ದೇವೇಗೌಡರು, ಮಮತಾ ಬ್ಯಾನರ್ಜಿ, ಮಾಯಾವತಿ, ಶರದ್ ಯಾದವ್, ಚಂದ್ರಬಾಬು ನಾಯ್ಡುರಂತಹ ಪ್ರದಾಶಿಕ ಪಕ್ಷಗಳ ನಾಯಕರು ಹಾಗೂ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುವ ನಿರೀಕ್ಷೆ ಇದೆ. ಮಹಾಘಟಬಂಧನದಲ್ಲಿ ಪ್ರಧಾನಿ ಯಾರಾಗುತ್ತಾರೆ ಎಂಬುದು ಫಲಿತಾಂಶದ ನಂತರ ನಡೆಯಲಿರುವ ರಾಜಕೀಯ ಪ್ರಹಸನವಾದರೂ ಮೋದಿಯನ್ನು ಪ್ರಧಾನಿ ಹುದ್ದೆಯಿಂದ ಇಳಿಸಲೇಬೇಕು ಎಂಬ ಸಂಕಲ್ಪ ಈ ನಾಯಕರನ್ನು ಒಟ್ಟಾಗುವಂತೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.

Leave a Reply