ಬಿಜೆಪಿ ಅಧಿಕಾರಕ್ಕೆ ಬರೋದು ಬೇಡ ಅಂದವರಾರು?: ಡಿಕೆಶಿ ಸವಾಲ್

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ರಾಜ್ಯ ಬಿಜೆಪಿ ನಾಯಕರು ಹೇಳುತ್ತಲೇ ಇದ್ದಾರೆ. ಆದರೆ, ಬಿಜೆಪಿ ಸರ್ಕಾರ ರಚಿಸಲು ಬೇಡ ಅಂದವರು ಯಾರು? ಎಂದು ಪ್ರಶ್ನಿಸುವ ಮೂಲಕ ಸಚಿವ ಡಿ.ಕೆ.ಶಿವಕುಮಾರ ಬಿಎಸ್ ಯಡಿಯೂರಪ್ಪ ನೇತೃತ್ವದ ಭಾರತೀಯ ಜನತಾ ಪಕ್ಷಕ್ಕೆ ಸವಾಲು ಹಾಕಿದ್ದಾರೆ.

ಕುಂದಗೋಳದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಳಿದ್ದಿಷ್ಟು…

‘2018ರ ವಿಧಾನ ಸಭೆ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಸರ್ಕಾರ ರಚಿಸಲು ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಪ್ರಮಾಣ ವಚನವನ್ನು ಸ್ವೀಕರಿಸಿ ಬಳಿಕ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು. ಬಿಜೆಪಿ ಸರ್ಕಾರ ರಚನೆ ಮಾಡದಂತೆ ಯಾರು ತಡೆದಿಲ್ಲ. ಅವರಿಗೆ ಬಹುಮತವೇ ಇಲ್ಲ. ಆದರೂ ಸರ್ಕಾರ ರಚನೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಅವರನ್ನು ಸರ್ಕಾರ ಮಾಡಬೇಡಿ ಎಂದವರಾರು?

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇದೆ. ಹೀಗಾಗಿ ಈ ಸಮಸ್ಯೆ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಸಮಸ್ಯೆ ನಿವಾರಣೆಗಾಗಿ ನನ್ನನ್ನು ಭೇಟಿ ಮಾಡಿದ್ದಾರೆ. ಹೀಗಾಗಿ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಇಂದು ಸಂಜೆ ಬೆಂಗಳೂರಿಗೆ ಹೋಗಿ, ಎಂಒಬಿಗೆ ಸಹಿ ಹಾಕಿ ನಾಳೆ ಮತ್ತೆ ಕುಂದಗೋಳಕ್ಕೆ ಬರುತ್ತೇನೆ. ಶ್ರೀಮಂತ ಪಾಟೀಲ ಇದನ್ನು ಹೊರತುಪಡಿಸಿ ಬೇರೆ ಯಾವ ಬೇಡಿಕೆಯನ್ನು ನಮ್ಮ ಮುಂದೆ ಇಟ್ಟಿಲ್ಲ.

ಕುಂದಗೋಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಮ್ರತೆಯಿಂದ ಮನೆ-ಮನೆಗೆ ತೆರಳಿ ಮನವಿ ಮಾಡುವ ಮೂಲಕ ಮತಯಾಚಿಸುತ್ತದೆ. ಭರಾಟೆಯ ಪ್ರಚಾರ ಕಾಂಗ್ರೆಸ್ ನಡೆಸುವುದಿಲ್ಲ. ಸನ್ನತೆಯ ಪ್ರಚಾರದ ಮೂಲಕ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕುಸುಮಾ ಶಿವಳ್ಳಿ ಅವರನ್ನು ಕ್ಷೇತ್ರದ ಜನ ಗೆಲ್ಲಿಸಿ ಎಂಎಲ್‍ಎ ಮಾಡುತ್ತಾರೆ. ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಎಂಪಿ ಮಾಡುತ್ತಾರೆ. ಹೀಗಾಗಿ ಕುಂದಗೋಳ ಕ್ಷೇತ್ರ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಜನತೆ ಆತಂಕ ಪಡುವ ಅಗತ್ಯವಿಲ್ಲ.

ನಾನು ಹಣ ತಂದಿದ್ದರೆ ಅದನ್ನು ಶೋಕ್ಕನೇ ತೆಗೆದುಕೊಂಡು ಹೋಗಲಿ:

ಡಿಕೆ ಶಿವಕುಮಾರ ಕಾರಿನ ಟೈಯರ್ ನಲ್ಲಿ ಹಣ ಸಾಗಿಸಿ ಚುನಾವಣೆ ನಡೆಸುತ್ತಾರೆ ಎಂಬ ಶೋಭಾ ಕರಂದ್ಲಾಜೆ ಅವರ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ‘ನನ್ನ ಬಳಿ ಹಣ ಇದ್ದರೆ ಅಕ್ಕನ ಬ್ಯಾಗ್ ನಲ್ಲಿ ಇಟ್ಟು ಕಳಿಸುವೆ’ ಎಂದು ತಿರುಗೇಟು ನೀಡಿದರು.

ಇನ್ನು ಬಿಎಸ್ ಯಡಿಯೂರಪ್ಪನವರ 22 ಶಾಸಕರ ಸಂಪರ್ಕದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಿಎಸ್ ಯಡಿಯೂರಪ್ಪ ಅವರೊಂದಿಗೆ 22 ಜನ ಮಾತ್ರ ಅಲ್ಲ. ಎಲ್ಲಾ 222 ಜನ ಶಾಸಕರು ಅವರೊಂದಿಗೆ ಸಂಪರ್ಕದಲ್ಲಿ ಇದ್ದಾರೆ. ಶ್ರೀಮಂತ ಕುಮಾರ್ ಪಾಟೀಲ್ ಕಾಂಗ್ರೆಸ್ ಪಕ್ಷದ ನಿಷ್ಠಾವಂತರು. ರಮೇಶ್ ಜಾರಕಿಹೊಳ್ಳಿಯವರೊಂದಿಗೆ ಗುರುತಿಸಿಕೊಂಡಿಲ್ಲ. ಅವರು ಪಕ್ಷವನ್ನು ಬಿಡುವ ಸುದ್ದಿ ಸುಳ್ಳು. ಶ್ರೀಮಂತ ಕುಮಾರ ಪಾಟೀಲ್ ನೀರಿನ ಸಮಸ್ಯೆ ಅಂತಾ ನನನ್ನು ಭೇಟಿ ಮಾಡಿದ್ರು. ಮಹಾರಾಷ್ಟ್ರ ಸರ್ಕಾರ ನಾಲ್ಕು ಟಿಎಂಸಿ ಬಿಡು ಎಂದ್ರೆ ಬಿಡ್ತಾಯಿಲ್ಲಾ. ಎಂಓಬಿ ಒಪ್ಪದಕ್ಕೆ ಸಹಿ ಆಗುವವರಿಗೆ ನೀರು ಬಿಡಲ್ಲಾ ಅಂತಾ ಹೇಳ್ತಾಯಿದ್ದಾರೆ. ಮೊದಲು ನೀರು ಬಿಡಲಿ ಆ ಮೇಲೆ ಸಹಿ ಮಾಡೋಣ ಎಂದು ಮನವಿ ಮಾಡಿದ್ದೇವೆ’ ಎಂದರು.‌

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ, ಮಾಜಿ ಶಾಸಕರಾದ ನಂಜಯ್ಯನಮಠ, ಕೋನರೆಡ್ಡಿ, ಎಂ.ಎಸ್. ಅಕ್ಕಿ, ಮುಖಂಡರಾದ ಹಜರತ್ ಆಲಿ ಜೊಡಮನಿ, ಜಗದೀಶ್ ಉಪ್ಪಿನ, ಸುರೇಶ್ ಗೌಡ್ರ ಪಾಟೀಲ, ಮಂಜುರೆಡ್ಡಿ, ಅರವಿಂದ ಕಟಗಿ ಮತ್ತಿತರರು ಭಾಗವಹಿಸಿದ್ದರು.

Leave a Reply