ಸ್ವತಂತ್ರ ಭಾರತದ ಮೊದಲ ಉಗ್ರ ಗೋಡ್ಸೆ: ಮತ್ತೆ ಹಿಂದೂ ಭಯೋತ್ಪಾದನೆ ಕಿಡಿ ಹೊತ್ತಿಸಿದ ಕಮಲ್ ಹಾಸನ್!

ಡಿಜಿಟಲ್ ಕನ್ನಡ ಟೀಮ್:

ಭಯೋತ್ಪಾದನೆ ವಿರುದ್ಧದ ಹೋರಾಟವನ್ನೇ ಚುನಾವಣೆ ಅಸ್ತ್ರವನ್ನಾಗಿ ಬಳಸುತ್ತಿರುವ ಬಿಜೆಪಿಗೆ ಖ್ಯಾತ ನಟ ಕಮಲ್ ಹಾಸನ್ ಹಿಂದೂ ಭಯೋತ್ಪಾದನೆ ವಿಚಾರಕ್ಕೆ ಮತ್ತೇ ಜೀವ ನೀಡುವ ಮೂಲಕ ದೊಡ್ಡ ಶಾಕ್ ನೀಡಿದ್ದಾರೆ. ‘ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಗೋಡ್ಸೆ’ ಎಂದು ಹೇಳಿಕೆ ನೀಡಿರುವ ಕಮಲ್ ಹಾಸನ್ ರಾಜಕೀಯ ಸಿದ್ಧಾಂತದ ಚರ್ಚೆಗೆ ಮುನ್ನುಡಿ ಬರೆದಿದ್ದಾರೆ.

ಹೌದು, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಐದು ವರ್ಷಗಳಲ್ಲಿ ತಮ್ಮ ಸಾಧನೆಯನ್ನು ಮುಂದಿಡುವ ಬದಲು ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪ, ಭಾರತೀಯ ಸೇನೆಯಿಂದ ಭಯೋತ್ಪಾದಕರ ದಾಳಿಯನ್ನೇ ಪ್ರಮುಖ ದಾಳವಾಗಿ ಪ್ರಯೋಗಿಸುತ್ತಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದ ವಿಚಾರದಲ್ಲಿ ತಾವೇ ಶ್ರೇಷ್ಠ ಎಂದು ಬಿಂಬಿಸಿಕೊಳ್ಳುತ್ತಿರುವ ಬಿಜೆಪಿಗೆ ಪ್ರತಿಯಾಗಿ ಹಿಂದೂ ಭಯೋತ್ಪಾದನೆ ವಿಚಾರವನ್ನು ಕಮಲ್ ಹಾಸನ್ ಮತ್ತೆ ಚಾಲ್ತಿಗೆ ತಂದಿದ್ದಾರೆ.

ತಮಿಳುನಾಡಿನ ಅರವಕುರುಚಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರದ ವೇಳೆ ಮಾತನಾಡಿರುವ ಕಮಲ್, ‘ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಓರ್ವ ಹಿಂದೂ. ಆತನ ಹೆಸರು ನಾಥುರಾಮ್ ಗೋಡ್ಸೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರಿದ್ದಾರೆ ಎಂದು ನಾನು ಈ ಮಾತನ್ನು ಹೇಳುತ್ತಿಲ್ಲ. ಬದಲಿಗೆ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಮುಂದೆ ನಿಂತು ಈ ಮಾತನ್ನು ಹೇಳುತ್ತಿದ್ದೇನೆ’ ಎಂದಿದ್ದಾರೆ.

ಕಮಲ್ ಅವರ ಈ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದ್ದು, ಕಮಲ್ ಹಾಸನ್ ಅವರು ಅನಗತ್ಯವಾಗಿ ಅಪಾಯಕಾರಿ ಕಿಚ್ಚು ಹೊತ್ತಿಸುವ ಸಾಹಸಕ್ಕೆ ಕೈಹಾಕಿದ್ದಾರೆ ಎಂದು ಎಚ್ಚರಿಸಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷೆ ತಮಿಳಿಸೈ ಸೌಂದರ್ಯರಾಜನ್, ‘ನಟ ಕಮಲ್ ಹಾಸನ್ ಅವರು ಗಾಂಧಿ ಹತ್ಯೆ ವಿಚಾರವನ್ನು ನೆನಪಿಸುತ್ತಾ ಹಿಂದೂ ಭಯೋತ್ಪಾದನೆ ಎಂಬ ಆರೋಪ ಮಾಡಿರುವುದು ಸರಿಯಲ್ಲ. ತಮಿಳುನಾಡಿನ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮುಂದೆ ನಿಂತು ಅಪಾಯಕಾರಿ ಕಿಡಿಯನ್ನು ಹೊತ್ತಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆ ಮೂಲಕ ಅಲ್ಪಸಂಖ್ಯಾತರನ್ನು ಓಲೈಸುವ ಯತ್ನ ಮಾಡಿದ್ದಾರೆ. ಇದೇ ಕಮಲ್ ಹಾಸನ್ ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ದಾಳಿಯ ವಿಚಾರವಾಗಿ ತುಟಿ ಬಿಚ್ಚಲಿಲ್ಲ ಏಕೆ?’ ಎಂದು ಪ್ರಶ್ನಿಸಿದ್ದಾರೆ.

Leave a Reply