ಸಿಎಂ, ಡಿಕೆಶಿ ಸೇರಿ ಹಲವು ನಾಯಕರ ಕೊಠಡಿ ಮೇಲೆ ಐಟಿ ರೇಡ್!

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಡೆದ ರೈಡ್ ಮಾದರಿಯಲ್ಲೇ ಕುಂದಗೋಳ ಉಪಚುನಾವಣೆಯಲ್ಲೂ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ನಾಯಕರು ಉಳಿದುಕೊಂಡಿದ್ದ ಕೊಠಡಿಗಳನ್ನು ಪರಿಶೀಲಿಸಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಮಂಡ್ಯ, ಮೈಸೂರು, ಹಾಸನ, ತುಮಕೂರು, ಶಿವಮೊಗ್ಗ ಸೇರಿದಂತೆ ಸಾಕಷ್ಟು ಜಾಗಗಳಲ್ಲಿ ತಪಾಸಣೆ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನು ಟಾರ್ಗೆಟ್ ಮಾಡಿದ್ದರು. ಕೆಲವು ಕಡೆ ಹಣ, ಆಸ್ತಿ ಸಿಗದಿದ್ದರೂ ಕೆಲವು ಕಡೆ ಒಳ್ಳೆ ಕುಳಗಳೇ ಬಲೆಗೆ ಬಿದ್ದಿದ್ದವು. ಆದರೆ ಈ ಬಾರಿ ತೆರಿಗೆ ಅಧಿಕಾರಿಗಳು ಏನೂ ಸಿಗದೇ ಬರಿಗೈಲಿ ವಾಪಸ್ ಹೋಗಿದ್ದಾರೆ.

ಹುಬ್ಬಳ್ಳಿಯಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಂಗಿರುವ ಗೋಕುಲ ರಸ್ತೆಯ ಡಿನಿಸನ್ಸ್ ಹೊಟೇಲ್ ಹಾಗೂ ಸಚಿವ ಡಿಕೆ ಶಿವಕುಮಾರ್ ಅವರು ತಂಗಿರುವ ಕಾಟನ್ ಕೌಂಟಿ ಕ್ಲಬ್ ಕೊಠಡಿಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇನ್ನು ಸಚಿವ ಜಮೀರ್ ಅಹ್ಮದ್ ಖಾನ್, ಆರ್.ವಿ. ದೇಶಪಾಂಡೆ, ಎಂಎಲ್‌ಸಿ ನಾಸೀರ್ ಅಹ್ಮದ್, ಸಂತೋಷ್ ಲಾಡ್, ಎಮ್.ಟಿ.ಬಿ ನಾಗರಾಜ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ವಾಸ್ತವ್ಯ ಹೂಡಿರುವ ಕೊಠಡಿಗಳನ್ನೂ ತಲಾಶ್ ನಡೆಸಿದ್ದಾರೆ. ಹೊಟೇಲ್ ದಾಖಲೆಗಳನ್ನು ವಶಕ್ಕೆ ಪಡೆದರು. ಗೋವಾ ಮತ್ತು ಬೆಳಗಾವಿ ಭಾಗದ ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ವಾರ್ಡ್‌ರೋಬ್, ಟೇಬಲ್, ಕಾಟ್‌ಗಳನ್ನೂ ಬಿಡದೆ ಪರಿಶೀಲನೆ ಮಾಡಿದ್ದಾರೆ. ಈ ದಾಳಿಯಲ್ಲಿ ಅಧಿಕಾರಿಗಳ ಕೈಗೆ ಏನಾದ್ರು ಸಿಕ್ಕಿದ್ಯಾ ಅನ್ನೋ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಒಟ್ಟಾರೆ, ಲೋಕಸಭೆ ಚುನಾವಣೆ ವೇಳೆ ಶುರುವಾದ ಐಟಿ ದಾಳಿ ಮಿನಿ ಸಮರದಲ್ಲೂ ಮುಂದುವರಿದಿದೆ.

ಕುಸುಮಾ ಶಿವಳ್ಳಿ ಪರ ಸಿಎಂ ಪ್ರಚಾರ:

ಕುಂದಗೋಳದಲ್ಲಿ ಸೋಮವಾರ ಪ್ರಚಾರ ಮಾಡಿದ ಸಿಎಂ ಎಚ್ ಡಿ ಕುಮಾರಸ್ವಾಮಿ, ‘ಉಪಚುನಾವಣೆ ಯಾರು ನಿರೀಕ್ಷೆ ಮಾಡಿ ಬಂದಿರೋದಲ್ಲ. ಮೈತ್ರಿ ಸರ್ಕಾರದಲ್ಲಿ ಸಿ.ಎಸ್ ಶಿವಳ್ಳಿ ನನಗೆ ಆತ್ಮೀರಾಗಿದ್ದರು. ಬಡತರ ಪರ ಕೆಲಸ ಮಾಡೋ ಸಚಿವರಾಗಿದ್ದರು. ಅವರ ನಿಧನದ ಹಿಂದಿನ ದಿನ ನಾನು ಶಿವಳ್ಳಿ ಅವರನ್ನು ಭೇಟಿಯಾಗಿದ್ದೆ’ ಎಂದರು.

ತಂದೆ ಸಾವಿನ ನೋವಿನ ಸಂದರ್ಭದಲ್ಲಿ ಶಿವಳ್ಳಿ ಪುತ್ರಿ ಪರೀಕ್ಷೆ ಬರೆದ ವಿಚಾರದ ಬಗ್ಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ. ‘ಆ ಮಕ್ಕಳು ಶಿವಳ್ಳಿ ನೀಡಿದ ಆಸ್ತಿ ಎಂದು ಕುಸುಮಾ ಶಿವಳ್ಳಿ ಹೇಳಿದ್ದೇನೆ. ಸಿದ್ದರಾಮಯ್ಯ ಆಶೀರ್ವಾದ ಇರೋವರೆಗೆ ಸಮ್ಮಿಶ್ರ ಸರ್ಕಾರಕ್ಕೆ ಏನು ಆಗಲ್ಲ. ಜನರ ಆಶೀರ್ವಾದ ಇರೋವರಗೆ ಸಮ್ಮಿಶ್ರ ಸರ್ಕಾರ ಅಲುಗಾಡಿಸಲು ಸಾಧ್ಯವಿಲ್ಲ’ ಎಂದು ಗುಡುಗಿದರು.

ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಧಾರವಾಡ ಜಿಲ್ಲೆಗೆ 290 ಕೋಟಿ ಸಿಕ್ಕಿದೆ. ಹೀಗಿದ್ದರೂ ಸಮ್ಮಿಶ್ರ ಸರ್ಕಾರ ಯಾಕೆ ಪತನ ಆಗ್ಬೇಕು? ಎಂದು ಪ್ರಶ್ನಿಸಿದ್ರು. ಬಡವರ ಪರವಾಗಿದ್ದ ಸಿ.ಎಸ್ ಶಿವಳ್ಳಿ ಅವರ ಪತ್ನಿ ಕುಸುಮಾ ಅವರನ್ನ ಯಾವುದೇ ಕಾರಣಕ್ಕೂ ಕೈ ಬಿಡಬೇಡಿ, ಅವರನ್ನ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

Leave a Reply