ಮೈತ್ರಿ ಸರ್ಕಾರ ಬಿದ್ದರೆ ನಷ್ಟ ಯಾರಿಗೆ..?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರ ತೂಗುಯ್ಯಾಲೆಯಲ್ಲಿದೆ ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಸಿದ್ದರಾಮಯ್ಯ ಆಪ್ತರೇ ಸರ್ಕಾರದಿಂದ ಹೊರಬರುವ ಮಾತುಗಳನ್ನಾಡುತ್ತಿರುವುದು ಈ ಬಾರಿ ಬಿಜೆಪಿಯ ಆಪರೇಷನ್ ಕಮಲ ಬೇಕಾಗಿಲ್ಲ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೇ ಸೆಲ್ಫ್ ಆಪರೇಷನ್ ನಡೆಸುತ್ತಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

ಸಿದ್ದರಾಮಯ್ಯ ಆಪ್ತರೇ ಸರ್ಕಾರದಿಂದ ಹೊರ ಬರಲಿದ್ದಾರೆ ಅನ್ನೋ ಮಾತುಗಳಿಗೆ ಪುಷ್ಟಿ ನೀಡುವಂತೆ ಸಿದ್ದರಾಮಯ್ಯ ಕೂಡ ಮಾತಿನ ವಾಗ್ದಾಳಿ ನಡೆಸಿದ್ದಾರೆ. ಆದ್ರೆ ರಾಜ್ಯ ಸರ್ಕಾರ ಅಸ್ತಿತ್ವ ಕಳೆದುಕೊಂಡು ಒಂದು ವೇಳೆ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿದರೆ ಯಾರಿಗೆ ಲಾಭ? ಅಥವಾ ರಾಜ್ಯ ಸರ್ಕಾರ ನೇರವಾಗಿ ಚುನಾವಣೆಗೆ ಹೋಗುವ ನಿರ್ಧಾರ ಮಾಡಿದ್ರೆ ಅದರಿಂದ ಯಾರಿಗೆ ಲಾಭ ಅನ್ನೋ ಲೆಕ್ಕಾಚಾರ ಶುರುವಾಗಿದೆ.

ಜೆಡಿಎಸ್ ಹಾಗೂ ಕಾಂಗ್ರೆಸ್ ಜಾತ್ಯತಿತ ಪಕ್ಷಗಳು. ಎರಡೂ ಪಕ್ಷಗಳ ಅಜೆಂಡಾ ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ. ಎರಡೂ ಪಕ್ಷಗಳು ಸರ್ವಧರ್ಮ ಸಮನ್ವಯತೆ ಎಂಬ ಘೋಷವಾಕ್ಯದೊಂದಿಗೆ ರಾಜಕಾರಣ ಮಾಡುತ್ತಿವೆ. ಒಂದು ವೇಳೆ ಸಿದ್ದರಾಮಯ್ಯ ಆಪ್ತರು ಸರ್ಕಾರದಿಂದ ಹೊರಬರಲು ನಿರ್ಧಾರ ಮಾಡಿದರೆ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗುವ ಸಂಭವ ಇದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಜೆಡಿಎಸ್ ಹಾಗೂ ಕಾಂಗ್ರೆಸ್ ಆಡಳಿತ ನಡೆಸಲು ಅತಿ ಮುಖ್ಯ ಪಾತ್ರ ವಹಿಸಿದ್ದು ಇದೇ ಕಾಂಗ್ರೆಸ್ ನಾಯಕರು. ದೇಶದ ರಾಜಕಾರಣ ಹಿತದೃಷ್ಠಿಯಿಂದ ಜೆಡಿಎಸ್ ನಾಯಕರನ್ನು ಸಂಪರ್ಕ ಮಾಡಿ ಅಧಿಕಾರ ನಡೆಸಲು ಬೇಷರತ್ ಬೆಂಬಲ ನೀಡುವುದಾಗಿ ಬಹಿರಂಗವಾಗಿಯೇ ಆಹ್ವಾನ ಕೊಟ್ರು. ತದನಂತರ ಒಂದೊಂದೇ ಷರತ್ತುಗಳನ್ನು ವಿಧಿಸುತ್ತಾ ರಾಜಕೀಯ ಚೌಕಾಸಿ ನಡೆಸಿದ್ರು. ಸಾಲಮನ್ನಾ ವಿಚಾರದಲ್ಲೂ ಮೊದಲಿಗೆ ಹಗ್ಗಾಜಗ್ಗಾಟ ನಡೆಸಿದ್ರು. ಆದ್ರೆ ಪಟ್ಟು ಬಿಡದ ಸಿಎಂ ಕುಮಾರಸ್ವಾಮಿ, ಸಾಲಮನ್ನಾ ಮಾಡಿಯೇ ಸಿದ್ಧ ಎಂದು ನಿರ್ಧಾರ ಪ್ರಕಟ ಮಾಡಿದ್ರು.

ಈಗ ಒಂದು ವೇಳೆ ಕಾಂಗ್ರೆಸ್ ಶಾಸಕರು ಸರ್ಕಾರದಿಂದ ಹೊರಬರುವ ನಿರ್ಧಾರಕ್ಕೆ ಸಿದ್ದರಾಮಯ್ಯ ಬೆನ್ನೆಲುಬಾಗಿ ಸಪೋರ್ಟ್ ಮಾಡಿದ್ರೆ, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯಗೆ ಹಿನ್ನಡೆಯಾಗುವ ಸಾಧ್ಯತೆಯೇ ಹೆಚ್ಚು.

ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗಳಿಸಬೇಕು ಅನ್ನೋ ಕಾರಣಕ್ಕೆ ಜಾತ್ಯತೀತ ಪಕ್ಷವಾದ ಜೆಡಿಎಸ್ ಜೊತೆ ಕೈಜೋಡಿಸಿದ್ರು. ಆ ಬಳಿಕ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಹೆಚ್ಚು ಸ್ಥಾನ ಗಳಿಸಲು ಶಕ್ತವಾಗದ ಹಿನ್ನೆಲೆಯಲ್ಲಿ ಮತ್ತೆ ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಲು ಸಹಕಾರಿ ಆದರು ಅನ್ನೋ ಅಪಖ್ಯಾತಿ ಬರಲಿದೆ. ಜೊತೆಗೆ ದೇವೇಗೌಡರಿಗೆ ರಾಷ್ಟ್ರಮಟ್ಟದಲ್ಲಿ ಒಳ್ಳೆ ಹೆಸರಿದ್ದು, ಅವರ ಪಕ್ಷದೊಂದಿಗೆ ಅಧಿಕಾರ ಹಂಚಿಕೊಂಡು ಆ ಬಳಿಕ ಬೆಂಬಲ ವಾಪಸ್ ತೆಗೆದುಕೊಂಡರು ಅನ್ನೋ ಕಾರಣಕ್ಕೆ ಇನ್ಮುಂದೆ ಕಾಂಗ್ರೆಸ್ ಪಕ್ಷವನ್ನು ಯಾವುದೇ ಪ್ರಾದೇಶಿಕ ಪಕ್ಷ ನಂಬುವುದಿಲ್ಲ. ಜೊತೆಗೆ ಒಕ್ಕಲಿಗ ನಾಯಕ ಕುಮಾರಸ್ವಾಮಿಯನ್ನು ಅಧಿಕಾರದಿಂದ ಕೆಳಗಿಳಿಸಿದ ಕುಖ್ಯಾತಿ ಕಾಂಗ್ರೆಸ್ ಮುಕುಟಕ್ಕೆ ಸೇರಲಿದ್ದು, ಮುಂದೆ ನಡೆಯುವ ಎಲ್ಲಾ ಚುನಾವಣೆಗಳಲ್ಲಿ ಒಕ್ಕಲಿಗ ಜನಾಂಗ ಕಾಂಗ್ರೆಸ್ ವಿರುದ್ಧ ಮತಚಲಾಯಿಸುವ ಸಾಧ್ಯತೆ ಹೆಚ್ಚು. ಒಟ್ಟಾರೆ ಕಾಂಗ್ರೆಸ್ ಈ ಸಮಯದಲ್ಲಿ ಯಾವುದೇ ನಿರ್ಧಾರ ಕೈಗೊಂಡರೂ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಅನ್ನೋದು ರಾಜಕೀಯ ಪಂಡಿತರ ವಿಶ್ಲೇಷಣೆ.

Leave a Reply