ದೇವರಲ್ಲಿ ಇಷ್ಟಾರ್ಥ ಬೇಡಿಕೊಂಡಿದ್ದೇನೆ, ಕುಂದಗೋಳ ಜನ ಕೈ ಬಿಡಲ್ಲ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

ಮುಕ್ತಿ ಮಂದಿರ ಪವಿತ್ರವಾದ ಕ್ಷೇತ್ರ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ಕ್ಷೇತ್ರ. ಇಲ್ಲಿ ನನ್ನ ಇಷ್ಟಾರ್ಥ ಬೇಡಿಕೊಂಡಿದ್ದೇನೆ. ಕುಂದಗೋಳ ಜನ ನನ್ನ ಕೈ ಬಿಡಲ್ಲ ಎಂದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಬುಧವಾರ ತಮ್ಮ 58ನೇ ಜನ್ಮದಿನದ ಪ್ರಯುಕ್ತ ಮುಕ್ತಿ ಮಂದಿರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಸಚಿವರು ನಂತರ ಮಾಧ್ಯಮದವರ ಜತೆ ಮಾತನಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು…

ನನಗೆ ಇಷ್ಟವಾದಂತಹ ಕ್ಷೇತ್ರಕ್ಕೆ ಬಂದು ಆಶೀರ್ವಾದ ಪಡೆದುಕೊಂಡಿದ್ದೇನೆ. ಇದೊಂದು ಪವಿತ್ರ ಕ್ಷೇತ್ರ. ದೇವಸ್ಥಾನಕ್ಕೆ ಆಗಮಿಸಿ ನನ್ನ ಇಷ್ಟಾರ್ಥಗಳನ್ನು ಕೇಳಿಕೊಂಡಿದ್ದೇನೆ. ಕುಂದಗೋಳ ಕ್ಷೇತ್ರದ ಜನ ನಮ್ಮನ್ನ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ.

ಈ ಸಂದರ್ಭದಲ್ಲಿ ರಾಜಕೀಯ ವಿಚಾರವಾಗಿ ಉತ್ತರ ನೀಡಲ್ಲ. ಈ ಕ್ಷೇತ್ರಕ್ಕೆ ಬಂದಿರುವುದು ರಾಜಕೀಯ ಮಾತನಾಡುವುದಕ್ಕಲ್ಲ.

ಪಕ್ಷದಲ್ಲಿ ಅಧೀಕೃತವಾಗಿ ಯಾವುದು ಘೋಷಣೆ ಯಾಗುತ್ತೋ ಅದೇ ಫೈನಲ್. ಉಳಿದಂತೆ ಯಾವುದೂ ನನಗೆ ಗೊತ್ತಿಲ್ಲ. ರಾಜಕೀಯವಾಗಿ ಯಾವ ವಿಚಾರವನ್ನೂ ಕೇಳಬೇಡಿ.

ನಾನು ರಾಜಕೀಯ ಮಾತಾಡೋಕೆ ಇಲ್ಲಿಗೆ ಬಂದಿಲ್ಲ ಬೇರೆ ವಿಚಾರ ಇದ್ರೆ ದಯವಿಟ್ಟು ಮಾತಾಡಿ.

ಇಂದು ಅಭಿಮಾನಿಗಳು ನನ್ನ ಹುಟ್ಟುಹಬ್ಬ ಆಚರಣೆ ಆಯೋಜಿಸಿದ್ರು ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ.

ಇದುವರೆಗೂ ಸರ್ಕಾರ ಅಭದ್ರವಾಗೋ ಯಾವ ಘಟನೆಯೂ ನಡೆದಿಲ್ಲ. ಏನೇನು ಹೇಳಬೇಕು ಎನ್ನೋದನ್ನು ಸಿದ್ಧರಾಮಯ್ಯ, ಕುಮಾರಸ್ವಾಮಿ ಇಬ್ರೂ ಹೇಳಿದ್ದಾರೆ. ಮಿಕ್ಕವರ ಮಾತು ಕೇಳಲ್ಲ.

ಡಿಕೆಶಿಗೆ ಚಿನ್ನದ ಉಂಗುರ ಹಾಕಿ ಶ್ರೀಗಳ ಆಶೀರ್ವಾದ

ಹುಟ್ಟುಹಬ್ಬದ ಪ್ರಯುಕ್ತ ಮುಕ್ತಿ ಮಂದಿರ ದೇವಾಲಯಕ್ಕೆ ಆಗಮಿಸಿದ ಸಚಿವ ಡಿಕೆ ಶಿವಕುಮಾರ್ ಅವರಿಗೆ ಚಿನ್ನದ ಉಂಗುರ ಹಾಕಿ ವಿಮಲ ರೇಣುಕಾ ಶಿವಾಚಾರ್ಯ ಶ್ರೀಗಳು ಆಶೀರ್ವಾದ ಮಾಡಿದ್ದಾರೆ.

ಪೂರ್ಣ ಕುಂಭ ಹೊತ್ತ ನೂರಾರು ಮಹಿಳೆಯರು, ಅಭಿಮಾನಿಗಳಿಂದ ಡಿಕೆಶಿ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿತು. ವೀರಶೈವ ಲಿಂಗಾಯತ ಮಠದಲ್ಲಿ ಡಿಕೆಶಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಶ್ರೀಗಳು ಶಾಲು ಹಾಕಿ ಸಚಿವರನ್ನು ಸ್ವಾಗತಿಸಿದರು.

ಈ ವೇಳೆ ಡಿಕೆಶಿ ಅಭಿಮಾನಿಗಳಿಂದ ಮಹಿಳೆಯರು ಹಾಗೂ ಮಕ್ಕಳಿಗೆ ಧಾರವಾಡ ಪೇಡೆ ಹಂಚಿದರು.

Leave a Reply