ದೀದಿಕೋಟೆಯಲ್ಲಿ ಕೇಸರಿ ಆರ್ಭಟ..! ಗೂಸಾ ಹಿಂದಿದೆ ರಾಜಕೀಯ..!

ಡಿಜಿಟಲ್ ಕನ್ನಡ ಟೀಮ್:

ಪಶ್ಚಿಮ ಬಂಗಾಳದಲ್ಲಿ ಏಳು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ (TMC) ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ. ಇಲ್ಲಿವರೆಗೂ ಕೋಲ್ಕತ್ತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ ಅನ್ನೋ ಕಾರಣಕ್ಕೆ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚುನಾವಣಾ ಪ್ರಚಾರಕ್ಕೂ ಅವಕಾಶ ಕೊಟ್ಟಿರಲಿಲ್ಲ. ಇದೀಗ ಕೊನೇ ಹಂತದ ಚುನಾವಣೆ ಬಾಕಿ ಇದ್ದು ಕೋಲ್ಕತ್ತಾದಲ್ಲಿ ಅಮಿತ್ ಶಾ ಬೃಹತ್ ರೋಡ್ ಶೋ ನಡೆಸಿದ್ರು. ಆದ್ರೆ ನಡೀಬಾರದ್ದು ನಡೆದು ಹೋಯ್ತು.‌

ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿಸಲು ಕೇಸರಿಪಡೆ ಮಹತ್ವದ ಲೆಕ್ಕಾಚಾರ ಹಾಕಿದ್ರೆ ದೀದಿ ನೇತೃತ್ವದ ಟಿಎಂಸಿ ಬಿಜೆಪಿಯನ್ನು ಮಟ್ಟಹಾಕಲು ಪ್ಲಾನ್ ಮಾಡ್ತಿದೆ. ಒಟ್ಟು ಏಳು ಹಂತದ ಚುನಾವಣೆಯಲ್ಲಿ ಕಳೆದ ಆರು ಹಂತದ ಚುನಾವಣೆಯಲ್ಲೂ ಪಶ್ಚಿಮ ಬಂಗಾಳ ಭಾಗವಾಗಿದೆ. ಎಲ್ಲಾ ಹಂತದಲ್ಲೂ ಒಂದಲ್ಲಾ ಒಂದು ಕಡೆ ಟಿಎಂಸಿ ಹಾಗೂ ಬಿಜೆಪಿ ಕಾರ್ತಕರ್ತರ ನಡುವೆ ಘರ್ಷಣೆಗಳು ನಡೆದಿವೆ.‌ ಅದರಲ್ಲೂ ಬಿಜೆಪಿ ಕಾರ್ಯಕರ್ತರನ್ನು ಟಿಎಂಸಿ ಕಾರ್ಯಕರ್ತರು ಅಟ್ಟಾಡಿಸಿಕೊಂಡು ಹೊಡೆದಿರುವ ಘಟನೆಗಳೂ ನಡೆದಿವೆ. ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಆದ್ರೆ ಟಿಎಂಸಿ ಕಾರ್ಯಕರ್ತರಿಂದ ಏಟು ತಿಂದು ನರಳುತ್ತಿರೋಡು ಮಾತ್ರ ಬಿಜೆಪಿಯ ಸಣ್ಣ ಪುಟ್ಟ ಕಾರ್ಯಕರ್ತರು.

ಅಮಿತ್ ಶಾ ಇವತ್ತು ಎರಡು ಕಡೆ ರೋಡ್ ಶೋ ನಡೆಸಿದ್ರು. ಈ ವೇಳೆ ಯೂನಿವರ್ಸಿಟಿ ಬಳಿ ಕಪ್ಪು ಬಾವುಟ ಪ್ರದರ್ಶನ ಮಾಡಿದ ವಿದ್ಯಾರ್ಥಿಗಳು ಗೋ‌ಬ್ಯಾಕ್ ಘೋಷಣೆ ಕೂಗಿದ್ರು. ಪ್ರತಿಭಟನೆ ನಡೆಸಿದವರು ಎಡಪಂಥೀಯ ಹಾಗೂ ಟಿಎಂಸಿ ಕಾರ್ಯಕರ್ತರು ಎನ್ನಲಾಗಿದ್ದು, ಈ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಪ್ರತಿಭಟನಾ ನಿರತರ ನಡುವೆ ದೊಡ್ಡಮಟ್ಟದ ಗಲಾಟೆ ನಡೀತು. ಈ ವೇಳೆ ಅಮಿತ್ ಶಾ ಕೂದಲೆಳೆ ಅಂತರದಲ್ಲಿ‌ ಪೊಲೀಸರ ನೆರವಿನಿಂದ ಪಾರಾದ್ರು. ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಟಿಎಂಸಿಯ ಗೂಂಡಾ ಕಾರ್ಯಕರ್ತರು ಈ ಗಲಭೆಗೆ ಕಾರಣ, ಆದ್ರೆ ಇದರ ಪ್ರಮುಖ ಆರೋಪಿ ಮಮತಾ ಬ್ಯಾನರ್ಜಿ ಎಂದು ಟೀಕಿಸಿದ್ದಾರೆ.

ಆದ್ರೆ ಬಿಜೆಪಿ ಆರೋಪಕ್ಕೆ ತೃಣಮೂಲ ಕಾಂಗ್ರೆಸ್ ತಿರುಗೇಟು ನೀಡಿದ್ದು, ಬಿಜೆಪಿ ಈ ಗಲಾಟೆ ಸೃಷ್ಠಿ ಮಾಡುವ ಬಗ್ಗೆ ಮೊದಲೇ ನಿರ್ಧಾರ ಮಾಡಿಕೊಂಡು ಹೊರಗಡೆಯಿಂದ ಗೂಂಡಾಗಳನ್ನು ಕರೆತಂದಿದ್ದಾರೆ ಎಂದು ವಾಗ್ದಾಳಿ‌ ನಡೆಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ವಿದ್ಯಾಸಾಗರ್ ಕಾಲೇಜು ಪ್ರಿನ್ಸಿಪಾಲ್ ಗೌತಮ್ ಕುಂಡು ಮಾತನಾಡಿ, ಕಾಲೇಜಿಗೆ ಕೆಲವರು ನುಗ್ಗಿ ದಾಂದಲೆ ನಡೆಸಿದ್ದಾರೆ. ಕಾಲೇಜಿನ ಪೀಠೋಪಕರಣ ಅಷ್ಟೇ ಅಲ್ಲದೆ ಪುರಾತನವಾದ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸ ಮಾಡಿದ್ದಾರೆ. ಮಹಿಳಾ ಸಿಬ್ಬಂದಿಯ ಹ್ಯಾಂಡ್ ಬ್ಯಾಗ್, ಲ್ಯಾಪ್‌ಟಾಪ್ ಕಳವು ಮಾಡಿ ಓಡಿ ಹೋಗಿದ್ದಾರೆ. ಹೀಗಾಗಿ ದಾಳಿ ನಡೆಸಿದ ಬಿಜೆಪಿ‌ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸುತ್ತೇವೆ ಎಂದಿದ್ದಾರೆ.

ಒಟ್ಟಾರೆ ಪಶ್ಚಿಮ ಬಂಗಾಳದಲ್ಲಿ ಪ್ರಚಾರ ನಡೆಸಲು ಕಾನೂನು ಸುವ್ಯವಸ್ಥೆ ಹದಗೆಡುತ್ತೆ ಅನ್ನೋ ಕಾರಣಕ್ಕೆ ಮಮತಾ ಬ್ಯಾನರ್ಜಿ ಸರ್ಕಾರ ಅವಕಾಶ ನಿರಾಕರಿಸಿತ್ತು ಎನ್ನುವ ಮಾತಿದೆ.ಆದ್ರೆ ದೀದಿ‌ ಸರ್ಕಾರ ಹೇಳಿದಂತೆ ಕೋಲ್ಕತ್ತಾದಲ್ಲಿ‌ ದೊಡ್ಡ ಮಟ್ಟದ ಗಲಾಟೆ ನಡೆದಿದೆ. ತನ್ನ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ದೀದಿ ಸೂಚನೆ ಮೇರೆಗೆ ಗಲಾಟೆ ನಡೆದಿದೆ ಎನ್ನುವ ಮಾತಿನ ಜೊತೆಗೆ ಬಿಜೆಪಿಯೇ ಚುನಾವಣಾ ಲಾಭಕ್ಕಾಗಿ ಗಲಭೆ ನಡೆಸಿದೆ ಎನ್ನುವ ಆರೋಪವೂ ಕೇಳಿ ಬಂದಿದೆ.

ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಈ ಗಲಾಟೆ ಹಿಂದಿದೆ ಎಂಬ ಆರೋಪವೂ ಇದೆ. ಟಿಎಂಸಿ ಅಥವಾ ಬಿಜೆಪಿ ಎರಡೂ ಪಕ್ಷಗಳು ತಮ್ಮ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಗಲಭೆ, ಗಲಾಟೆ, ಕೊಲೆಯನ್ನೂ ಮಾಡಿಸುತ್ತಾರೆ. ಆದ್ರೆ ಘಟನೆಯಲ್ಲಿ ಒದೆ ತಿನ್ನೋದು ರಕ್ತ ಹರಿಸಿಕೊಳ್ಳೋದು ಮಾತ್ರ ಸಣ್ಣ ಸಣ್ಣ ಕಾರ್ಯಕರ್ತರು. ಕಾರ್ಯಕರ್ತರನ್ನೇ ಗುರಾಣಿಯಾಗಿ ಬಳಸಿಕೊಳ್ಳುವ ರಾಜಕೀಯ ಪಕ್ಷಗಳು ಸಾವಿನ ಸಮಾಧಿ ಮೇಲೆಯೇ ರಾಜಕಾರಣ ಮಾಡೋದು ಅಧಿಕಾರ ಹಿಡಿಯೋದು ಅನ್ನೋದ್ರಲ್ಲಿ ಯಾವುದೇ ಸಂಶಯವಿಲ್ಲ.

Leave a Reply