ಪಶ್ಚಿಮ ಬಂಗಾಳದಲ್ಲಿ ದೀದಿ- ಮೋದಿ ಜಿದ್ದಾಜಿದ್ದಿ ಫೈಟ್​!

ಡಿಜಿಟಲ್ ಕನ್ನಡ ಟೀಮ್:

ದೇಶದಲ್ಲಿ 7 ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಏಳೂ ಹಂತಗಳಲ್ಲೂ ಚುನಾವಣೆ ಇದೆ. ಮೇ 19ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, 42 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬಿಜೆಪಿ ಹಾಗೂ ಟಿಎಂಸಿ ಜಿದ್ದಾಜಿದ್ದಿನ ರಾಜಕಾರಣ ನಡೆಸುತ್ತಿವೆ. ಮೋದಿ, ಅಮಿತ್ ​ಷಾ ಕಮಲ ಅರಳಿಸಲು ಪಕ್ಕಾ ಲೆಕ್ಕಾಚಾರ ಹಾಕಿದ್ದು, ಮಮತಾ ಬ್ಯಾನರ್ಜಿ ವಿರುದ್ಧ ರಣತಂತ್ರ ರೂಪಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಉತ್ತರ ಪ್ರದೇಶದಲ್ಲಿ 72 ಸ್ಥಾನಗಳನ್ನು ಗೆಲುವು ಸಾಧಿಸುವ ಮೂಲಕ ಅಭೂತಪೂರ್ವ ಮುನ್ನಡೆ ಸಾಧಿಸಿತ್ತು. ಈ ಬಾರಿ ಉತ್ತರ ಪ್ರದೇಶ ಕಬ್ಬಿಣದ ಕಡಲೆಯಾಗಿದ್ದು, ಗೆಲ್ಲುವ ಸ್ಥಾನಗಳ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿಯಲಿದೆ. ಇದೇ ಕಾರಣಕ್ಕೆ ಮೋದಿ ಹಾಗೂ ಶಾ ಪಶ್ಚಿಮ ಬಂಗಾಳದ ಮೇಲೆ ಕಣ್ಣಿಟ್ಟಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ, ಮಂಗಳವಾರ ಸಂಜೆ ಕೊಲ್ಕತ್ತಾದಲ್ಲಿ ಬೃಹತ್​ ರೋಡ್​ ಶೋ ನಡೆಸಿದ್ರು. ಈ ವೇಳೆ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದು ವಿದ್ಯಾಸಾಗರ್​ ಕಾಲೇಜು ಆವರಣದಲ್ಲಿದ್ದ ಈಶ್ವರ್ ಚಂದ್ರ ವಿದ್ಯಾಸಾಗರ್​ ಪ್ರತಿಮೆ ಧ್ವಂಸವಾಗಿತ್ತು. ಈ ಗಲಾಟೆ ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿದೆ.

ಅಮಿತ್​ ಷಾ ರೋಡ್​ ಶೋ ವೇಳೆ ನಡೆದ ಗಲಾಟೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯೇ ಕಾರಣ ಎನ್ನುವುದು ಬಿಜೆಪಿ ಆರೋಪ. ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ರೋಡ್​ ವೇಳೆ ನಡೆದ ದಾಳಿಗೆ ಟಿಎಂಸಿ ಕಾರ್ಯಕರ್ತರೇ ಕಾರಣ ಎಂದು ಆರೋಪಿಸಿದ್ರು. ಜಮ್ಮು ಕಾಶ್ಮೀರದಲ್ಲಿ ಈ ಬಾರಿ ಲೋಕಸಭಾ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಮಾತ್ರ ಹಿಂಸಾಚಾರ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಇನ್ನೊಂದು ಅಚ್ಚರಿಯ ಬೆಳವಣಿಗೆ ಅಂದ್ರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಅಚ್ಚರಿಯ ನಿರ್ಧಾರ ಕೈಗೊಂಡಿದೆ. ಚುನಾವಣೆ ಇನ್ನೊಂದು ದಿನ ಬಾಕಿ ಇರುವ ಹಾಗೆ ಬಹಿರಂಗ ಪ್ರಚಾರ ಅಂತ್ಯವಾಗುತ್ತದೆ. ಆದ್ರೆ ಕೋಲ್ಕತ್ತಾದಲ್ಲಿ ಗಲಾಟೆ ನಡೆದಿರುವ ಕಾರಣದಿಂದ ಮೇ 17ರಂದು ಅಂತ್ಯವಾಗಬೇಕಿದ್ದ ಬಹಿರಂಗ ಚುನಾವಣಾ ಪ್ರಚಾರ, ಮೇ 16ರ ರಾತ್ರಿ 10 ಗಂಟೆಗೆ ಮುಕ್ತಾಯವಾಗಲಿದೆ ಎಂದು ಘೋಷಣೆ ಮಾಡಿದೆ. ಚುನಾವಣಾ ಆಯೋಗದ ಈ ನಿರ್ಧಾರವನ್ನು ಮಮತಾ ಬ್ಯಾನರ್ಜಿ ಖಂಡಿಸಿದ್ದು, ಚುನಾವಣಾ ಆಯೋಗ ಕೇಂದ್ರ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply