ಹರಕು ಬಾಯಿ ನಾಯಕರ ಹೇಳಿಕೆಗೆ ಬಿಜೆಪಿ ಹೈಕಮಾಂಡ್ ಕಂಗಾಲು! ತೇಪೆ ಸಾರುವ ಕೆಲಸ ಶುರು!

ಡಿಜಿಟಲ್ ಕನ್ನಡ ಟೀಮ್:

ಸದ್ಯ ರಾಷ್ಟ್ರಾದ್ಯಂತ ಮಹಾತ್ಮ ಗಾಂಧೀಜಿಯವರನ್ನು ನಾಥುರಾಮ್ ಗೋಡ್ಸೆ ಹತ್ಯೆ ಮಾಡಿದ ವಿಚಾರ ರಾಜಕೀಯ ಟೀಕೆಗಳಿಗೆ ಪ್ರಮುಖ ಅಸ್ತೃವಾಗಿದೆ. ಸ್ವತಂತ್ರ ಭಾರತದ ಮೊದಲ ಉಗ್ರ ಗೋಡ್ಸೆ. ಆತ ಓರ್ವ ಹಿಂದೂ ಎಂಬ ಒಂದು ಹೇಳಿಕೆ ಈಗ ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗುತ್ತಿದೆ. ಈ ವಿಚಾರದಲ್ಲಿ ಕೆಲ ಬಿಜೆಪಿ ನಾಯಕರು ತಮ್ಮ ನಾಲಿಗೆ ಹೆಚ್ಚಾಗಿ ಹರಿದು ಬಿಟ್ಟಿದ್ದು ಬಿಜೆಪಿ ನಾಯಕರಿಗೆ ಇನ್ನಿಲ್ಲದ ಧರ್ಮ ಸಂಕಟಕ್ಕೆ ಎದುರಾಗಿದೆ.

ಹೌದು, ಒಂದೆಡೆ ಮಧ್ಯಪ್ರದೇಶದ ಭೋಪಾಲ್​ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್​ ಗಾಂಧಿ ಕೊಂದ ಗೋಡ್ಸೆ ದೇಶಪ್ರೇಮಿ ಎಂದರೆ, ಮತ್ತೊಂದೆಡೆ ರಾಜ್ಯದ ಬಿಜೆಪಿ ನಾಯಕರಾದ ನಳಿನ್ ಕುಮಾರ್ ಕಟೀಲ್ ಹಾಗೂ ಅನಂತ ಕುಮಾರ್ ಹೆಗಡೆ ಅವರು ಗಾಂಧಿ ವಿರುದ್ಧ ಲಘುವಾಗಿ ಮಾತನಾಡಿದ್ದಾರೆ.

ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್​ ಕುಮಾರ್​ ಕಟಿಲ್​ ಟ್ವೀಟ್​ ಮಾಡಿ ನಾಥುರಾಮ್​ ಗೋಡ್ಸೆ ಕೊಂದಿದ್ದು ಒಬ್ಬರನ್ನು, ಉಗ್ರ ಅಜ್ಮಲ್​ ಕಸಬ್​ ಕೊಂದಿದ್ದು 72 ಮಂದಿ, ರಾಜೀವ್​ ಗಾಂಧಿ ಕೊಂದಿದ್ದ 17 ಸಾವಿರ ಜನರನ್ನ. ಹಾಗಿದ್ರೆ ಉಗ್ರ ಯಾರು ಅನ್ನೋದನ್ನು ನೀವೇ ನಿರ್ಧರಿಸಿ ಎಂದು ಬಿಟ್ರು.

ಇನ್ನು ವಿವಾದಿತ ಹೇಳಿಕೆಗಳ ಸರದಾರ ಅನಂತಕುಮಾರ್ ಹೆಗಡೆ, ಇನ್ನು ಗೋಡ್ಸೆ ಬಗ್ಗೆ ಈಗ ನಡೆಯುತ್ತಿರುವ ಚರ್ಚೆಯನ್ನು ನೋಡಿದ್ರೆ, 7 ದಶಕಗಳ ಹಿಂದಿನ ನಾತೂರಾಮ್​ ಗೋಡ್ಸೆ ಆತ್ಮ ಸಂತಸಪಡುತ್ತಿದ್ದರು’ ಎಂದು ಟ್ವೀಟ್ ಮಾಡಿದ್ದಾರೆ.

ಇಷ್ಟಕ್ಕೆ ಬಿಜೆಪಿ ನಾಯಕರ ಬಾಯಿ ಸುಮ್ಮನಾಗಲಿಲ್ಲ ಮಹಾತ್ಮ ಗಾಂಧಿ ಫಾದರ್​ ಆಫ್​ ಪಾಕಿಸ್ತಾನ್​ ಎಂದು ಮಧ್ಯಪ್ರದೇಶ ಬಿಜೆಪಿ ಮುಖಂಡ ಅನಿಲ್​ ಸೌಮಿತ್ರ ಹೇಳಿಕೆ ನೀಡಿದ್ದಾರೆ.

ಹೀಗೆ ಒಬ್ಬರಾದ ಮೇಲೆ ಒಬ್ಬರು ಬಿಜೆಪಿ ನಾಯಕರು ಮಹಾತ್ಮ ಗಾಂಧಿ ವಿಚಾರದಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದಕ್ಕೆ ಭಾರಿ ಟೀಕೆ ವ್ಯಕ್ತವಾಗುತ್ತಿದಂತೆ ಎಚ್ಚೆತ್ತ ಬಿಜೆಪಿ ಹೈಕಮಾಂಡ್, ಈ ನಾಯಕರ ಬಾಯಿಗೆ ಬೀಗ ಜಡಿದಿದೆ. ತಮ್ಮ ಹೇಳಿಕೆಗೆ ಕ್ಷಮೆ ಹಾಗೂ ಸಮರ್ಥನೆ ನೀಡಿಸುತ್ತಿದೆ. ಇನ್ನು ಡ್ಯಾಮೇಜ್ ಕಂಟ್ರೋಲ್ ಮಾಡಲು ಈ ಹೇಳಿಕೆಗಳನ್ನು ವೀರೊಧಿಸುವುದರ ಜತೆಗೆ ಶಿಸ್ತು ಕ್ರಮ ಹೆಸರಲ್ಲಿ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ.

ಕಾರಣ, ಕಳೆದ ಐದು ವರ್ಷಗಳಲ್ಲಿ ಸ್ವಚ್ಛ ಭಾರತ ಕಾರ್ಯಕ್ರಮ ಸೇರಿದಂತೆ ಹಲವು ಯೋಜನೆಗಳಲ್ಲಿ ಗಾಂಧಿ ಅವರನ್ನು ಬಳಸಿಕೊಂಡ ಬಿಜೆಪಿ ಗಾಂಧಿ ಅವರ ಬಗೆಗೆ ಇನ್ನಿಲ್ಲದಂತೆ ಪ್ರೀತಿ ತೋರಿತ್ತು. ಈಗ ಬಿಜೆಪಿಗೆ ಈ ನಾಯಕರ ಹೇಳಿಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಪಕ್ಷದ ಒಬ್ಬರೋ ಇಬ್ಬರೋ ಈ ರೀತಿ ಹೇಳಿಕೆ ನೀಡಿದರೆ ಅದು ವೈಯಕ್ತಿಕ ಅಭಿಪ್ರಾಯ ಎನ್ನಬಹುದು. ಆದರೆ ಸರದಿ ಸಾಲಿನಲ್ಲಿ ನಿಂತವರಂತೆ ಒಬ್ಬರಾದ ಮೇಲೆ ಒಬ್ಬರು ಗಾಂಧಿ ಬಗ್ಗೆ ಲಘುವಾಗಿ ಮಾತನಾಡಿರೋದು ಬಿಜೆಪಿ ಮನಸ್ಥಿತಿ ಏನು ಎಂಬುದಕ್ಕೆ ಸಾಕ್ಷಿಯಾಗಿದೆ. ಇನ್ನು ಇಷ್ಟು ದಿನಗಳ ಕಾಲ ಗಾಂಧಿ ಕುರಿತ ಒಲವು ಕೇವಲ ತೋರಿಕೆಗೆ ಮಾತ್ರ ಸೀಮಿತ ಎಂಬ ಟೀಕೆ ವ್ಯಕ್ತವಾಗುತ್ತಿದೆ.

ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯಿಂದ ಅಮಿತ್ ಶಾ ಸೇರಿದಂತೆ ಎಲ್ಲ ಹಿರಿಯ ನಾಯಕರು ಈ ನಾಯಕರ ನಾಲಿಗೆಗೆ ಲಗಾಮು ಹಾಕಲು ಮುಂದಾಗಿದ್ದಾರೆ. ಮೊದಲಿಗೆ ಸಾದ್ವಿ ಅವರು ಕ್ಷಮೆ ಕೇಳಿದರಾದರೂ ಪಕ್ಷದ ಒತ್ತಡದಿಂದ ಕ್ಷಮೆ ಕೇಳಿದ್ದೇನೆ ಎಂದಿದ್ದಾರೆ. ಅಲ್ಲಿಗೆ ಅವರ ಕ್ಷಮೆ ಕೇವಲ ಕಾಟಾಚಾರದ ಕ್ಷಮೆ ಎಂದು ಸಾಬೀತಾಗಿದೆ. ಇನ್ನು ಸಾಧ್ವಿ ಪ್ರಜ್ಞಾ ಸಿಂಗ್​ ಹೇಳಿಕೆ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಮೋದಿ ತಪ್ಪನ್ನು ಸರಿಪಡಿಸುವ ಪ್ರಯತ್ನ ಪಟ್ಟಿದ್ದಾರೆ.

ಇನ್ನು ಅನಿಲ್​ ಸೌಮಿತ್ರ ಅವರನ್ನು ತಾತ್ಕಾಲಿಕವಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿದ್ದು, 7 ದಿನದ ಒಳಗಾಗಿ ಉತ್ತರ ಕೊಡುವಂತೆ ನೋಟಿಸ್​ ಜಾರಿ ಮಾಡಿದೆ.

ಇದೇ ರೀತಿ ರಾಜ್ಯ ನಾಯಕರ ಮೇಲೂ ಒತ್ತಡ ಬಂದ ಪರಿಣಾಮ, ನಳಿನ್ ಕುಮಾರ್ ಕಟೀಲ್ ‘ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದಲ್ಲಿ ಕ್ಷಮೆ ಕೋರುತ್ತೇನೆ’ ಎಂದಿದ್ದಾರೆ. ಇನ್ನು ಅನಂತಕುಮಾರ್ ಹೆಗಡೆ ತಮ್ಮ ಟ್ವಿಟರ್ ಅಕೌಂಟು ಹ್ಯಾಕ್ ಹಾಗಿದ್ದು ನಾನು ಈ ಟ್ವೀಟ್ ಮಾಡಿಲ್ಲ ಎಂದು ಬಚಾವಾಗಲು ಪ್ರಯತ್ನಿಸಿದ್ದಾರೆ.

ವಿರೋಧ ಹೆಚ್ಚಿದ ಪರಿಣಾಮ ಈ ನಾಯಕರ ವಿರುದ್ಧ ಶಿಸ್ತು ಸಮಿತಿ ವಿಚಾರಣೆ ನಡೆಸಲಿದ್ದು, ಸೂಕ್ತ ಶಿಕ್ಷೆ ನೀಡಲಾಗುವುದು ಎಂದು ಅಮಿತ್ ಶಾ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.

Leave a Reply