ಯಾಕಣ್ಣ…! ಟ್ರೋಲ್ ಭರದಲ್ಲಿ ಸ್ವಾತಂತ್ರ್ಯ ಹರಣ!

ಡಿಜಿಟಲ್ ಕನ್ನಡ ಟೀಮ್:

ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ಟ್ರೋಲ್ ಪೇಜ್ ಗಳಲ್ಲಿ ಓರ್ವ ಕಪ್ಪನೆ, ಬಡ ಹೆಂಗಸಿನ ಫೋಟೋ ಜತೆಗೆ ‘ಯಾಕಣ್ಣ?’ ಎಂಬ ಟ್ರೋಲ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇತ್ತೀಚೆಗೆ ರಾಯಚೂರಿನಲ್ಲಿ ಮಧು ಎಂಬ ಯುವತಿ ಸಾವಿನ ಪ್ರಕರಣವನ್ನು ವೈರಲ್ ಮಾಡಿ ಬೆನ್ನು ತಟ್ಟಿಕೊಂಡಿದ್ದ ಟ್ರೋಲ್ ಪೇಜ್ ಗಳು ಈಗ ಈಕೆಯ ವಿಚಾರದಲ್ಲಿ ಮನೋವಿಕೃತಿ ಮೆರೆಯುತ್ತಿವೆ.

ಹೌದು, ‘ಯಾಕಣ್ಣ’ ಎಂಬ ಟ್ರೋಲ್ ಒಂದು ಮನೋವಿಕೃತಿ. ಎಷ್ಟೋ ಜನ ಓದುಗರು ಈ ಯಾಕಣ್ಣ ಟ್ರೋಲ್ ನೋಡಿರುತ್ತೀರಿ ಆದರೆ ಅದು ಯಾಕೆ ಇಷ್ಟು ವೈರಲ್ ಆಗಿದೆ ಎಂಬುದು ಅರ್ಥವಾಗದೇ ಇರಬಹುದು ಹೀಗಾಗಿ ಮೊದಲು ಆಕೆ ವೈರಲ್ ಆದ ಹಿನ್ನೆಲೆ ಹೇಳುತ್ತೇವೆ ಕೇಳಿ. ಈಕೆ ಯಾವುದೋ ಒಂದು ಕೊಠಡಿ ಅಥವಾ ಕಟ್ಟಡದಲ್ಲಿ ಓರ್ವ ವ್ಯಕ್ತಿ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುತ್ತಾಳೆ. ಇದನ್ನು ಯಾರೋ ಮಹಾನುಭಾವ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ಮಾಡುತ್ತಿರುವುದನ್ನು ಕಂಡ ಆಕೆ ಕೇಳಿದ್ದು ‘ಯಾಕಣ್ಣ?’ ಅಂತಾ.

ಅಷ್ಟೇ… ಈಕೆ ಒಂದು ಮೆಮ್ ವಸ್ತುವಾದಳು. ಈಕೆ ಮೇಲೆ ಒಂದಾದ ಮೇಲೆ ಒಂದು ಟ್ರೋಲ್ ಹರಿದಾಡುತ್ತಿವೆ. ಅವಳನ್ನು ಕೆಟ್ಟದಾಗಿ ಲೇವಡಿ ಮಾಡಲಾಗುತ್ತಿದೆ. ನಮಗೆ ವಾಕ್ ಸ್ವಾತಂತ್ರ್ಯ ಇದೆ. ಹಾಗಂತಾ ಬೇರೆಯವರ ಖಾಸಗಿ ಹಕ್ಕನ್ನು ಕಿತ್ತುಕೊಳ್ಳೋದು ಎಷ್ಟು ಸರಿ. ಇಂತಹ ಒಂದು ಗಂಭೀರ ಪ್ರಶ್ನೆಯನ್ನು ಈ ಪ್ರಕರಣ ಹುಟ್ಟು ಹಾಕಿದೆ.

ಅಷ್ಟಕ್ಕೂ ಆಕೆ ಮಾಡಿದ ತಪ್ಪೇನು? ತನಗೆ ಇಷ್ಟವಾದ ವ್ಯಕ್ತಿ ಜತೆ ಸೇರಿದ್ದು ತಪ್ಪೇ? ಆಕೆಯ ಖಾಸಗಿತನಕ್ಕೆ ಬೆಲೆಯೇ ಇಲ್ಲವೇ? ಅಥವಾ ಲಂಗು ಲಗಾಮು ಇಲ್ಲದೆ ಬಾಯಿಗೆ ಬಂದಿದನ್ನು ಹೇಳಲು ಅವಕಾಶ ಕೊಟ್ಟಿರುವುದು ತಪ್ಪೇ? ನಮ್ಮ ಸ್ವಾತಂತ್ರ್ಯದ ಹೆಸರಲ್ಲಿ ಬೇರೆಯವರ ಹಕ್ಕು ಕಸಿಯುವುದು ಎಷ್ಟು ಸರಿ? ಇದೆಲ್ಲದಕ್ಕೂ ಮುಖ್ಯವಾಗಿ ಆಕೆಯ ಅನುಮತಿ ಇಲ್ಲದೆ ಆಕೆಯ ಫೋಟೋ ಬಳಸಲು ಅವಕಾಶ ಕೊಟ್ಟಿರೋದು ಯಾರು? ಈ ಪ್ರಕರಣ ಹುಟ್ಟು ಹಾಕಿರುವ ಇಷ್ಟು ಪ್ರಶ್ನೆಗಳಿಗೆ ಉತ್ತರ… ಸಾಮಾಜಿಕ ಜಾಲತಾಣಗಳ ಮೇಲೆ ಯಾವುದೇ ಲಗಾಮು ಇಲ್ಲದಿರುವುದು. ಇಲ್ಲಿ ಯಾರುಬೇಕಾದರೂ ಯಾರ ಬಗ್ಗೆ ಏನುಬೇಕಾದರು ಹೇಳಬಹುದು. ಕೇಳಿದರೆ ಮತ್ತದೇ ವಾಕ್ ಸ್ವಾತಂತ್ರ್ಯ ಎಂಬ ರಕ್ಷಾ ಕವಚ ಬಳಸುತ್ತಾರೆ.

ಟ್ರೋಲ್ ಹೆಸರಲ್ಲಿ ಬೇರೊಬ್ಬರನ್ನು ಲೇವಡಿ ಮಾಡಿ ಮಾನ ಹರಾಜು ಹಾಕುವ ಅವಕಾಶ ಕೊಟ್ಟವರಾರು? ಬೇರೊಬ್ಬರನ್ನು ಹೀಗೆ ಟ್ರೋಲ್ ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳುವ ಕೀಳು ಬುದ್ಧಿ ನಮ್ಮ ಸಮಾಜದಲ್ಲಿನ ವಿಕೃತಿಗೆ ಸಾಕ್ಷಿಯಾಗಿದೆ.

ಆಕೆ ಯಾವುದೇ ತಪ್ಪು ಮಾಡಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ನೋಡಿದರು ಅವರಿಬ್ಬರದು ಒಪ್ಪಿತ ಲೈಂಗಿಕ ಕ್ರಿಯೆ. ಹಾಗಿದ್ದ ಮೇಲೆ ಬೇರೆಯವರ ಸಮಸ್ಯೆ ಏನು? ಮಧು ವಿಚಾರದಲ್ಲಿ ರೇಪ್ ಮಾಡಿ ಹತ್ಯೆಯಾಗಿದೆ (ಸದ್ಯಕ್ಕೆ ಆರೋಪವಿದ್ದು, ತನಿಖೆ ನಡೆಯುತ್ತಿದೆ.) ಆದರೆ ಈಕೆಯ ವಿಚಾರದಲ್ಲಿ ಸಮಾಜದ ಒಂದು ವರ್ಗವೇ ಮಾನಸಿಕ ಅತ್ಯಾಚಾರ ಮಾಡುತ್ತಿರುವುದು ದೊಡ್ಡ ದುರಂತ. ಆಕೆ ಅನಕ್ಷರಸ್ಥೆ. ಇದರ ವಿರುದ್ಧ ಹೇಗೆ ಹೋರಾಡಬೇಕೋ ಗೊತ್ತಿಲ್ಲ. ಆ ವಿಡಿಯೋ ಹಾಗೂ ಈ ಟ್ರೋಲ್ ಆಕೆ ಬದುಕಿನಲ್ಲಿ ಎಷ್ಟು ದೊಡ್ಡ ಘಾಸಿ ಮಾಡಬಹುದು ಎಂಬುದನ್ನು ಒಮ್ಮೆ ಯೋಚಿಸಿದರು ನಮ್ಮ ತಲೆ ನೆಲ ನೋಡುತ್ತದೆ. ಇದರ ವಿರುದ್ಧ ಧ್ವನಿ ಎತ್ತುವುದಿರಲಿ ಇದನ್ನು ಮಾಡಬೇಡಿ ಎಂದು ಈ ಮಹಾನುಭಾವರನ್ನು ಹೇಗೆ ಕೇಳಿಕೊಳ್ಳಬೇಕು ಎಂಬುದರ ಅರಿವು ಆಕೆಗಿಲ್ಲ.

Leave a Reply