ಮೋದಿಗೆ ಗೆಲ್ಲುವ ವಿಶ್ವಾಸ ಕಳೆದು ಹೋಯ್ತಾ..? ಕಾರಣವೇನು..?

ಡಿಜಿಟಲ್ ಕನ್ನಡ ಟೀಮ್:

2014ರ ಲೋಕಸಭಾ ಚುನಾವಣೆ ಯುಪಿಎ ವಿರೋಧಿ ಅಲೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಅಭೂತ ಪೂರ್ವ ಗೆಲುವಿಗೆ ಸಹಕಾರಿಯಾಗಿತ್ತು‌ ಅನ್ನೋ ಮಾತಿತ್ತು. ಆದ್ರೆ ಈ ಬಾರಿ ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ತೆಗೆದುಕೊಂಡ ದಿಟ್ಟ ಕ್ರಮಗಳಿಂದ ಮತದಾರರನ್ನು ಸೆಳೆಯುತ್ತಿತ್ತು. ಅಭಿವೃದ್ಧಿ ವಿಚಾರದಲ್ಲಿ ಮತ ಕೇಳುವ ಪ್ರವೃತ್ತಿಗೆ ಇದೇ ಮೊದಲ ಬಾರಿಗೆ ಬ್ರೇಕ್ ಹಾಕಲಾಯ್ತು. ಯಾವುದೇ ಅಭಿವೃದ್ಧಿ ಅಜೆಂಡಾ ಈ ಬಾರಿ ಪ್ರಸ್ತಾಪ ಆಗಲೇ ಇಲ್ಲ. ವಿರೋಧ ಪಕ್ಷಗಳೂ ಕೂಡ ಪ್ರಧಾನಿ ನರೇಂದ್ರ ಮೋದಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ರಫೇಲ್ ಹಗರಣ, ಅಚ್ಛೇ ದಿನ ಎಲ್ಲಿದೆ ಎಂದು ಪ್ರಶ್ನಿಸುತ್ತಲೇ ಚುನಾವಣೆ ಮುಗಿಸಿದವು. ಆದರೆ ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನದ ಬಾಲಾಕೋಟ್ ಮೇಲೆ ಭಾರತೀಯ ವಾಯುಪಡೆ ನಡೆಸಿದ ನಿರ್ಧಿಷ್ಟ ದಾಳಿ ಚುನಾವಣಾ ವಸ್ತು ಆಗಬಾರದು ಎಂದು ಆದೇಶವಿದ್ದರೂ ಬೇರೆ ಬೇರೆ ರೂಪದಲ್ಲಿ ಪ್ರಚಾರದ ವಸ್ತುವಾಯ್ತು. ದೇಶದ ರಕ್ಷಣೆ ವಿಚಾರದಲ್ಲಿ ಮೋದಿ ಬಿಟ್ಟರೆ ಬೇರೆಯವರು ಬೇಕಿಲ್ಲ ಎನದನುವಷ್ಟರ ಮಟ್ಟಿಗೆ ಮೋದಿ ಸರ್ಕಾರದ ಪರವಾಗಿ ಮತದಾರನ ಒಲವು ವ್ಯಕ್ತವಾಯ್ತು. ಮೋದಿ, ಅಮಿತ್ ಶಾ ಸೇರಿದಂತೆ ಎಲ್ಲಾ ನಾಯಕರ ಗುರಿ 300ಕ್ಕೂ ಹೆಚ್ಚು ಎನ್ನುವಂತಾಯ್ತು.

ಆದ್ರೆ ಇಂದು ಏಳನೆ ಹಾಗೂ ಅಂತಿಮ ಹಂತದ ಚುನಾವಣೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರಿಗೆ ದಿಗಿಲು ಹುಟ್ಟಿಸಿದೆ ಅನ್ನೋ ಮಾಹಿತಿ ಇದೆ. 7 ರಾಜ್ಯಗಳ 59 ಕ್ಷೇತ್ರಗಳ ಮತದಾನ ನಡೆಯುತ್ತಿದ್ದು, ಈ ಕ್ಷೇತ್ರಗಳಲ್ಲಿ ಕಮಲಪಡೆಗೆ ಭಾರೀ ಹಿನ್ನಡೆಯಾದರೆ ಅಧಿಕಾರ ಕೈತಪ್ಪಿ ಹೋಗಲಿದೆ ಅನ್ನೋ ಚಿಂತೆಯಲ್ಲಿ ಮುಳುಗಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅನ್ನೋ ಮಾಹಿತಿಯಿದೆ. ಪಶ್ಚಿಮ ಬಂಗಾಳದಲ್ಲಿ 9, ಜಾರ್ಖಂಡ್‌ನಲ್ಲಿ 3, ಬಿಹಾರದಲ್ಲಿ 8, ಉತ್ತರ ಪ್ರದೇಶ 13, ಹಿಮಾಚಲ ಪ್ರದೇಶದಲ್ಲಿ 4, ಪಂಜಾಬ್‌ನಲ್ಲಿ 13, ಚಂಡಿಘಡ 1, ಮಧ್ಯಪ್ರದೇಶ 8 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಇಷ್ಟು ಕೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರೋಧವಾಗಿ ಮತ ಚಲಾವಣೆ ಆಗಬಹುದು ಎಂದು ಅಂದಾಜಿಸಲಾಗಿದೆ. ಅದೇ ಕಾರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಮೌನಕ್ಕೆ ಶರಣಾಗಿ ದೇವರ ಮೊರೆ ಹೋಗಿದ್ದಾರಾ ಅನ್ನೋದು ಖಚಿತವಾಗಿಲ್ಲ. ಆದರೆ ಫಲಿತಾಂಶ ಏರುಪೇರಾಗುವ ಸಂಭವ ಹೆಚ್ಚಾಗಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರ ಮನಸ್ಸು ಶಾಂತತೆ ಕಳೆದುಕೊಂಡಿದೆಯಂತೆ.

ಇಷ್ಟಕ್ಕೆಲ್ಲಾ ಕಾರಣವಾಗಿರೋದು ಸಾಧ್ವಿ ಹಚ್ಚಿದ ವಿವಾದದ ಕಿಡಿ. ಮಹಾತ್ಮ ಗಾಂಧಿ ಕೊಂದ ನಾಥೂರಾಮ್ ಗೋಡ್ಸೆ ಓರ್ವ ಮಹಾನ್ ದೇಶಭಕ್ತ ಎಂದು ನೀಡಿದ ಹೇಳಿಕೆ ಮೋದಿ ಅವರ ವರ್ಚಸ್ಸಿಗೆ ಭಾರೀ ಧಕ್ಕೆ ಉಂಟು ಮಾಡಿದ್ದು, ಸಾಧ್ವಿಯನ್ನು ಎಂದೆಂದಿಗೂ ಕ್ಷಮಿಸಲಾರೆ ಎನ್ನುವ ಮೂಲಕ ಡ್ಯಾಮೇಜ್ ಕಂಟ್ರೋಲ್ ಮಾಡಲು ಯತ್ನಿಸಿದ್ದಾರೆ. ಆದರೂ ಕರ್ನಾಟಕದಲ್ಲಿ ನಳಿನ್ ಕುಮಾರ್ ಕಟಿಲ್ ಹಾಗೂ ಅನಂತಕುಮಾರ್ ಹೆಗಡೆ ಕೂಡ ಸಾಧ್ವಿ ಹೇಳಿಕೆಯನ್ನು ಪುನರುಚ್ಚಾರ ಮಾಡಿದ್ದು, ಮೋದಿ ಕೋಪಕ್ಕೆ ಮತ್ತಷ್ಟು ಕಾರಣವಾಗಿದೆ. ಮಹಾತ್ಮ ಗಾಂಧಿ ಭಾರತ ಅಷ್ಟೇ ಅಲ್ಲದೆ ಇಡೀ ವಿಶ್ವವೇ ಶಾಂತಿಧೂತನನ್ನು ಗೌರವಿಸುತ್ತದೆ. ಹಾಗಿದ್ದರೂ ಈ ರೀತಿಯ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದು ಕೊನೆ ಹಂತದ ಮತದಾನದ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ. ಒಟ್ಟು ಇಂದು 10 ಕೋಟಿ ಮತದಾರರು ಹಕ್ಕು ಚಲಾವಣೆ ಮಾಡ್ತಿದ್ದಾರೆ. ಇದು ದೇಶದ ಒಟ್ಟು ಮತದಾರರ ಶೇಕಡ 12ರಷ್ಟಿದ್ದು, ಒಂದು ವೇಳೆ ಗೋಡ್ಸೆ ದೇಶಭಕ್ತ ಎಂದಿರುವ ಹೇಳಿಕೆ ಪರಿಣಾಮ ಬೀರಿದರೆ ಮೋದಿ ಕನಸು ನುಚ್ಚುನೂರಾಗಲಿದೆ. ಕಳೆದ ಬಾರಿ ಶೇಕಡ 31ರಷ್ಟು ಮತ ಪಡೆದು 272 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ ಒಂದೆರಡು ಪರ್ಸೆಂಟ್ ಮತಗಳು ಕಡಿಮೆಯಾದರೂ ಭಾರಿ ಏರುಪೇರಾಗುವ ಸಂಭವ ಹೆಚ್ಚಾಗಿದೆ. ಈಗಾಗಲೇ ಮತದಾನ ಮುಕ್ತಾಯದ ಹಂತದಲ್ಲಿದ್ದು, ಯಾರೇ ವಿಶ್ವಾಸ ಕಳೆದುಕೊಂಡರೂ ಗಳಿಸಿಕೊಂಡರೂ ಯಾವುದೇ ವ್ಯತ್ಯಾಸ ಆಗೋದಿಲ್ಲ. ಮೇ 23 ರಂದು ಪ್ರಕಟವಾಗುವ ಫಲಿತಾಂಶ ಇಷ್ಟೆಲ್ಲಾ ಗೊಂದಲಗಳಿಗೆ ಉತ್ತರವಾಗಲಿದೆ.

Leave a Reply