ಆಪರೇಷನ್ ಕಮಲಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲು ವರಿಷ್ಠರ ಸೂಚನೆ?

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟ ಹಾಗೂ ಮಧ್ಯ ಪ್ರದೇಶದಲ್ಲಿ ಕಮಲ್ ನಾಥ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತ ಸಾಬೀತು ಪ್ರಕ್ರಿಯೆ ಮುಗಿಯುವವರೆಗೂ ಕರ್ನಾಟಕದಲ್ಲಿ ಆಪರೇಷನ್ ಕಮಲ ಪ್ರಕ್ರಿಯೆಗೆ ಬ್ರೇಕ್ ಹಾಕುವಂತೆ ದೆಹಲಿ ಬಿಜೆಪಿ ನಾಯಕರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರಿಗೆ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.

ಬಿಜೆಪಿಯಲ್ಲಿನ ಈ ಬೆಳವಣಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ತಾತ್ಕಾಲಿಕ ನೆಮ್ಮದಿ ಸಿಕ್ಕಂತಾಗಿದೆ. ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಕಾಂಗ್ರೆಸ್ ಜೆಡಿಎಸ್ ನಾಯಕರ ಭಿನ್ನ ಹೇಳಿಕೆಗಳು, ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಗೊಂದಲಗಳ ನಡುವೆ ಆಪರೇಷನ್ ಕಮಲದ ಭೀತಿ ದೋಸ್ತಿ ಸರ್ಕಾರಕ್ಕೆ ಹೆಚ್ಚಿನ ಸವಾಲಾಗಿತ್ತು. ಆದರೆ ಈಗ ಬಿಜೆಪಿಯ ಆಪರೇಷನ್ ಕಮಲಕ್ಕೆ ತಾತ್ಕಾಲಿಕೆ ಬ್ರೇಕ್ ಬಿದ್ದಿರೋದು ದೋಸ್ತಿಗಳು ಆಂತರಿಕ ಸಮಸ್ಯೆ ಬಗೆಹರಿಸಿಕೊಳ್ಳಲು ಕಾಲಾವಕಾಶ ಸಿಕ್ಕಂತಾಗಿದೆ.

ಬಿಜೆಪಿ ನಾಯಕರುಗಳ ಪ್ರಕಾರ ಮೇ 23ರ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್ ನ ಏಳು ಹಾಗೂ ಜೆಡಿಎಸ್ ನ ಮೂವರು ಶಾಸಕರುಗಳು ಬಿಜೆಪಿ ಸೇರಬೇಕಿತ್ತು. ಆದರೆ ಆಪರೇಷನ್ ಕಮಲಕ್ಕೆ ಬ್ರೇಕ್ ಬಿದ್ದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅತೃಪ್ತ ಶಾಸಕರು ಬಿಜೆಪಿಯನ್ನು ನಂಬಿ ಹೋಗುವುದು ಹೇಗೆ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.  ಆಪರೇಷನ್ ಕಮಲದಿಂದ ಪಕ್ಷ ತೊರೆದು ಬಿಜೆಪಿ ಸೇರಿದರೂ ನಂತರ ನಡೆಯಲಿರುವ ಉಪ ಚುನಾವಣೆ ತಡವಾದರೆ ತಮ್ಮ ಗೆಲುವು ಕಷಟವಾಗಲಿದೆ ಎಂಬ ಆತಂಕ ಈ ಅತೃಪ್ತರಲ್ಲಿ ಮೂಡಿದೆ.

ಇನ್ನು ಬಿಜೆಪಿಯಲ್ಲಿ ಯಡಿಯೂರಪ್ಪನವರೆ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದು ಅನುಮಾನವಾಗಿರುವಾಗ ಅವರನ್ನು ನಂಬಿ ಬಿಜೆಪಿಗೆ ಹೋದರೆ ತಮ್ಮ ಭವಿಷ್ಯ ಏನಾಗಲಿದೆಯೋ ಎಂಬ ಆತಂಕ ಕೂಡ ಹುಟ್ಟುಕೊಂಡಿದೆ. ಈ ಮಧ್ಯೆ ಯಡಿಯೂರಪ್ಪ ವರಿಷ್ಠರ ಮಾತಿಗೆ ಬೆಲೆ ಕೊಟ್ಟು ಆಪರೇಷನ್ ಕಮಲ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಕೈ ಬಿಡುತ್ತಾರಾ? ಅಥವಾ ತಮ್ಮ ಪ್ರಯತ್ನ ತಾವು ಮುಂದುವರಿಸುತ್ತಾರಾ ಎಂಬ ಪ್ರಶ್ನೆಯೂ ಹುಟ್ಟುಕೊಂಡಿದೆ.

Leave a Reply