ನಾಳೆ ಮತ ಎಣಿಕೆ, ಮಧ್ಯರಾತ್ರಿ ಬಯಲಾಗಲಿದೆ ರಹಸ್ಯ!?

ಡಿಜಿಟಲ್ ಕನ್ನಡ ಟೀಮ್:

ಭಾರತದ 543 ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ನಾಳೆ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ. ಈಗಾಗಲೇ ಕೇಂದ್ರ ಚುನಾವಣಾ ಆಯೋಗ ಮತ ಎಣಿಕೆಗೆ ಸಕಲ ತಯಾರಿ ಮಾಡಿಕೊಂಡಿದ್ದು, ಉಗ್ರರು, ನಕ್ಸಲರ ಹಾವಳಿ ಇರುವ ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದೆ. ಇನ್ನು ಜಿದ್ದಾಜಿದ್ದಿನ ಪೈಪೋಟಿಗೆ ಕಾರಣವಾಗಿರುವ ಸೂಕ್ಷ್ಮ ಕ್ಷೇತ್ರಗಳಲ್ಲೂ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಮದ್ಯ ಮಾರಾಟ, ಸಂಭ್ರಮಾಚರಣೆಗಳನ್ನು ಮಾಡದಂತೆ ಸೂಚನೆ ನೀಡಲಾಗಿದೆ. ಇನ್ನು ಪೊಲೀಸ್ ಇಲಾಖೆ ಜೊತೆ ಕೇಂದ್ರ ಮೀಸಲು ಪಡೆ, ಕೈಗಾರಿಕಾ ರಕ್ಷಣಾ ಪಡೆ, ಸಿಟಿ ಆರ್ಮ್ ಫೋರ್ಸ್ ಕೂಡ ಭದ್ರತೆಯ ಜವಾಬ್ದಾರಿ ಹೊತ್ತುಕೊಂಡಿದೆ.

ಪ್ರತಿಬಾರಿ ಚುನಾವಣೆ ನಡೆದಾಗ ಫಲಿತಾಂಶ ಬೆಳಗ್ಗೆ 10 ರಿಂದ 12 ಗಂಟೆಯೊಳಗೆ ಹೊರಬೀಳುತ್ತಿತ್ತು. ಅದರಲ್ಲೂ ಮತದಾನದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಬಳಕೆಗೆ ತಂದ ಬಳಿಕ ಮತ ಎಣಿಕೆ ಕಾರ್ಯ ತುಂಬಾ ಸರಳವಾಗಿತ್ತು. ಚುನಾವಣಾ ಕಾರ್ಯಕ್ಕೆ ನಿಯೋಜಿಸುವ ಅಧಿಕಾರಿ ಮತಯಂತ್ರದಲ್ಲಿ ಶೇಕರಣೆ ಆಗಿರುವ ಮತಗಳ ಒಟ್ಟು ಲೆಕ್ಕ ತೋರಿಸಿ ತದ ನಂತರ ಯಾರಿಗೆ ಎಷ್ಟು ಮತ ಬಂದಿದೆ ಅನ್ನೋ ಲೆಕ್ಕಾಚಾರವನ್ನು ಎಣಿಕಾ ಕೇಂದ್ರದಲ್ಲಿ ಹಾಜರಿರುತ್ತಿದ್ದ ಏಜೆಂಟ್‌ಗೆ ತೋರಿಸುವ ಕೆಲಸ ಮಾಡ್ತಿದ್ರು. ತಾಂತ್ರಿಕವಾಗಿ ಮತ ಎಣಿಕೆ ಕೆಲಸ ನಡೆಯುತ್ತಿದ್ದ ಕಾರಣ ಯಾವುದೇ ಗೊಂದಲಕ್ಕೂ ಅವಕಾಶ ಇರಲಿಲ್ಲ. ಮತ ಎಣಿಕೆ ಕೆಲಸವೂ ಸರಾಗವಾಗಿ ಮುಕ್ತಾಯವಾಗುತ್ತಿತ್ತು. ಆದರೆ ಈ ಬಾರಿ ಮತ ಎಣಿಕೆ ಕಾರ್ಯ ತುಂಬಾ ತಡವಾಗಲಿದ್ದು, ಅಧಿಕೃತ ಘೋಷಣೆ ಮಧ್ಯರಾತ್ರಿ ಮೀರಿದರೂ ಆಶ್ಚರ್ಯ ಇಲ್ಲ ಎನ್ನುತ್ತಿದ್ದಾರೆ ಮತ ಎಣಿಕಾ ಅಧಿಕಾರಿಗಳು. ಇದಕ್ಕೆ ಕಾರಣ ವಿವಿಪ್ಯಾಟ್!

ಮತದಾನಕ್ಕೆ ಇವಿಎಂ ಬಳಸಿದ ಬಳಿಕ ಮತೆಣಿಕೆ ಸುಲಭ ಮಾಡಿಕೊಂಡಿದ್ದ ಚುನಾವಣಾ ಆಯೋಗ, ಕಳೆದ ಬಾರಿ ಮತ ಎಣಿಕೆಯನ್ನು ಸುಲಭವಾಗಿ ನಿಬಾಯಿಸಿದ್ದ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಆದೇಶ ಕಂಟಕವಾಗಿ ಪರಿಣಮಿಸಿತು. ಇವಿಎಂ ಬಳಕೆಗೆ ಆಕ್ರೋಶ ವ್ಯಕ್ತಪಡಿಸಿದ ವಿರೋಧ ಪಕ್ಷಗಳು, ಇವಿಎಂ ದುರ್ಬಳಕೆ ಆಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ವು. ಬಳಿಕ ಇವಿಎಂ ಹ್ಯಾಕಿಂಗ್ ನಡೆಯುವ ಸಾಧ್ಯತೆ ಹೆಚ್ಚಾಗಿದ್ದು, ಇವಿಎಂ ಸ್ಥಗಿತಗೊಳಿಸಿ, ಮೊದಲ ಹಾಗೆ ಬ್ಯಾಲೆಟ್ ಪೇಪರ್ ಬಳಸಬೇಕೆಂದು ಮನವಿ ಮಾಡಿದ್ರು. ಆ ಅನುಮಾನ ಬಗೆಹರಿಸುವ ಉದ್ದೇಶದಿಂದ ಇವಿಎಂ‌ನಲ್ಲಿ ಮತ ಚಲಾವಣೆ ಆಗ್ತಿದ್ದ ಹಾಗೆ ವಿವಿಪ್ಯಾಟ್‌ನಲ್ಲಿ ನೀವು ಚಲಾಸಿದ ಮತ ನಿಮಗೆ ಪೇಪರ್‌ನಲ್ಲಿ ಕೆಲವು ಕ್ಷಣಗಳ ಕಾಲ ಕಾಣುವಂತೆ ವ್ಯವಸ್ಥೆ ಮಾಡಿತ್ತು. ನಾವು ಹಾಕಿದ ಮತ ಬಿಜೆಪಿಗೆ ಹೋಗುವಂತೆ ಪ್ರೋಗ್ರಾಮಿಂಗ್ ಮಾಡಿದ್ದಾರೆ ಅನ್ನೋ ಆರೋಪ ಸ್ಥಗಿತವಾಯ್ತು. ಆ ನಂತರ ಶುರುವಾಗಿದ್ದು,ಇವಿಎಂಗಳನ್ನು ಬದಲಾಯಿಸಲಾಗ್ತಿದೆ, ಇವಿಎಂ ಪ್ರೋಗ್ರಾಂ ಬದಲಾಯಿಸಿ ಬಿಜೆಪಿಗೆ ಹೆಚ್ಚು ಮತಗಳು ಬರುವ ಹಾಗೆ ಮಾಡಲಾಗ್ತಿದೆ ಎಂದು ದೂರುತ್ತಿವೆ. ಇದೇ ಆರೋಪದ ಮೇಲೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದಾಗ ಸುಪ್ರೀಂ ನೀಡಿದ ತೀರ್ಪು ವಿರೋಧ ಪಕ್ಷಗಳಿಗೆ ವರದಾನವಾಗಿತ್ತು.

ವಿರೋಧ ಪಕ್ಷಗಳು ಕಾನೂನು ಸಮರ ಸಾರಿದ್ವು. ಈ ವೇಳೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದ ವಿಧಾನಸಭಾ ಕ್ಷೇತ್ರ 5 ಬೂತ್‌ಗಳ ಇವಿಎಂ ಹಾಗೂ ವಿವಿಪ್ಯಾಟ್‌ನ ಮತಗಳನ್ನು ಪ್ರತ್ಯೇಕವಾಗಿ ಎಣಿಕೆ ಮಾಡಿ ಎರಡರಲ್ಲೂ ಒಂದೇ ರೀತಿಯ ಮತಗಳು ಬಂದಿವೆಯಾ ಅನ್ನೋದನ್ನು ಖಚಿತಪಡಿಸಿ ಎಂದಿತ್ತು. ಹೀಗಾಗಿ ಇದೇ ಮೊದಲ ಬಾರಿಗೆ ಎಲ್ಲಾ ವಿಧಾನಸಭಾ ಕ್ಷೇತ್ರಗಳ 5 ಬೂತ್‌ಗಳು ಅಂದರೆ ಒಂದು ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳು, ಒಟ್ಟು 40 ಬೂತ್‌ಗಳ ವಿವಿಪ್ಯಾಟ್ ಹಾಗೂ ಇವಿಎಂ ಮತಗಳ ಎಣಿಕೆ ಮಾಡಲೇ ಬೇಕು. ಇದೇ ಮೊದಲ ಬಾರಿಗೆ ಈ ರೀತಿಯ ವ್ಯವಸ್ಥೆ ಜಾರಿಗೆ ಬಂದಿದ್ದು, ಕನಿಷ್ಠ ಪಕ್ಷ ನಾಲ್ಕು ಗಂಟೆಗಳು ತಡವಾಗಲಿದೆ ಎಂದಿದ್ದಾರೆ. ಅಂದರೆ ಕನಿಷ್ಠ ರಾತ್ರಿ ಒಂಭತ್ತರಿಂದ ಹತ್ತು ಗಂಟೆಗಳಾಗುತ್ತವೆ ಎನ್ನಲಾಗಿದೆ. ಅದನ್ನೆಲ್ಲಾ ಒಟ್ಟುಗೂಡಿಸಿ ಅಂತಿಮ ಫಲಿತಾಂಶ ಪ್ರಕಟ ಮಾಡುವುದು ಮಧ್ಯರಾತ್ರಿ ಆದರೂ ಅಚ್ಚರಿಯಿಲ್ಲ ಅನ್ನೋ ಮಾತುಗಳು ಕೇಳಿಬಂದಿವೆ. ಒಂದು ವೇಳೆ ವಿವಿಪ್ಯಾಟ್ ಹಾಗೂ ಇವಿಎಂನ ಮತಗಳಲ್ಲಿ ವ್ಯತ್ಯಾಸ ಆದರೆ ಶುಕ್ರವಾರ ಬೆಳಗ್ಗೆ ಆದರೂ ಅಚ್ಚರಿಯ ವಿಚಾರವೇನಲ್ಲ ಅನ್ನೋ ಮಾತುಗಳು ಕೇಳಿಬಂದಿರೋದು ಜನತೆ ಹುಬ್ಬೇರುವಂತೆ ಮಾಡಿದೆ.

Leave a Reply