ಮಂಡ್ಯದ ಸಂಸದರಾಗಿ ನಿಖಿಲ್, ಸುಮಲತಾ ಇಬ್ಬರೂ ಆಯ್ಕೆ..!?

ಡಿಜಿಟಲ್ ಕನ್ನಡ ಟೀಮ್:

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಎಂದರೆ ಇಂಡಿಯಾ ಅನ್ನೋ ಹಾಗೆ ಹವಾ ಕ್ರಿಯೇಟ್ ಮಾಡಿತ್ತು. ಕನ್ಯಾಕುಮಾರಿ ಇಂದ ಕಾಶ್ಮೀರದ ತನಕ ಜನರು ಮಂಡ್ಯ ರಾಜಕಾರಣದ ಬಗ್ಗೆ ಮಾತನಾಡಿದ್ರು. ಈಗಲೂ ಫಲಿತಾಂಶದ ಬಗ್ಗೆ ಇಡೀ ದೇಶದ ರಾಜಕಾರಣವೇ ಕರ್ನಾಟಕದ ಸಕ್ಕರೆ ನಾಡು ಮಂಡ್ಯ ಕಡೆಗೆ ಎದುರು ನೋಡುತ್ತಿದೆ. ಆದರೆ ಈ ನಡುವೆ ಮಂಡ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ನಾಳೆ ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಅದರಲ್ಲೂ ರಾತ್ರಿ ವೇಳೆಗೆ ದೇಶದ ಅಂತಿಮ ಫಲಿತಾಂಶ ಅಧಿಕೃತವಾಗಲಿದೆ ಅನ್ನೋ ವರದಿಗಳು ಬರುತ್ತಿವೆ. ಆದರೆ ಮಂಡ್ಯದಲ್ಲಿ ಮಾತ್ರ ಈಗಾಗಲೇ ಫಲಿತಾಂಶ ಹೊರಬಿದ್ದಿದೆ. ಇಬ್ಬರನ್ನೂ ಸಂಸದರನ್ನಾಗಿ ಆಯ್ಕೆ ಮಾಡಲಾಗಿದೆ. ನಿಮಗೇನು ತಲೆ ಕೆಟ್ಟಿದ್ಯಾ ಎಂದು ನೀವು ನಮ್ಮನ್ನು ಕೇಳಬಹುದು. ಆದ್ರೆ ಮುಂದೆ ಓದಿದ ಬಳಿಕ ನಿಮಗೆ ಅದರ ಮರ್ಮ ಗೊತ್ತಾಗಲಿದೆ.

ವಿಷಯ ಏನಂದ್ರೆ ಮಂಡ್ಯ ಲೋಕಸಭಾ ಚುನಾವಣೆ ಮುಕ್ತಾಯವಾದ ಬಳಿಕ ನಿಖಿಲ್ ಕುಮಾರಸ್ವಾಮಿ, ಸಂಸದರು ಅನ್ನೋ ನೇಮ್ ಪ್ಲೇಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಆ ಬಳಿಕ ಸುಮಲತಾ ಹೆಸರನ್ನೂ ಎಡಿಟ್ ಮಾಡಿ ಕೆಲವರು ಪೋಸ್ಟ್ ಮಾಡಿದ್ದರು. ಆದರೆ ಇದೀಗ ನೈಜ್ಯ ಜೀವನದಲ್ಲೇ ನಿಖಿಲ್ ಕುಮಾರಸ್ವಾಮಿ ಸಂಸದರಾಗಿದ್ದಾರೆ.ಲಗ್ನ ಪ್ರತಿಕ್ರೆಯೊಂದರಲ್ಲಿ ನಿಖಿಲ್ ಅವರನ್ನು ಸಂಸದ ಎಂದು ಮುದ್ರಣ ಮಾಡಲಾಗಿದೆ.

ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ಗ್ರಾಮದ ಜೆಡಿಎಸ್ ಮುಖಂಡ ನಾಗರಾಜು, ತಮ್ಮ ಮಗನ ಮದುವೆಯ ಆಹ್ವಾನ ಪತ್ರಿಕೆಯಲ್ಲಿ ಅತಿಥಿ ಎಂದು ನಿಖಿಲ್ ಹೆಸರನ್ನು ಹಾಕಿಸಿದ್ದಾರೆ. ಅದರಲ್ಲಿ ನಿಖಿಲ್ ಸಂಸದರು ಎಂದು ಮುದ್ರಿಸಲಾಗಿದೆ. ಜೂನ್ 09 ರಂದು ಶ್ರೀರಂಗಪಟ್ಟಣದ TAPCMS ಸಮುದಾಯ ಭವನದಲ್ಲಿ ಮದುವೆ ನಡೆಯಲಿದ್ದು, ನಿಖಿಲ್ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿ ಅಹ್ವಾನ ಪತ್ರಿಕೆ ಮುದ್ರಿಸಿ ಹಂಚುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸಂಸದರು ಅನ್ನೋ ಆಹ್ವಾನ ಪತ್ರಿಕೆ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟು ಹವಾ ಕ್ರಿಯೇಟ್ ಮಾಡ್ತಿದ್ದ ಹಾಗೆ ಸುಮಲತಾ ಕೂಡ ಏಕಾಏಕಿ ಸಂಸದರಾಗಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಸುಲಭ ಗೆಲುವಿಗೆ ಅಡ್ಡಗಾಲು ಹಾಕಿದ್ದು ಅಂದ್ರೆ ಮಾಜಿ ಸಚಿವ ಚಲುವರಾಯಸ್ವಾಮಿ ಅನ್ನೋದು ಮುಚ್ಚಿಟ್ಟ ರಹಸ್ಯ. ಇದೀಗ ನಿಖಿಲ್ ಸಂಸದರು ಅನ್ನೋ ಆಹ್ವಾನ ಪತ್ರಿಕೆಗೂ ಚಲುವರಾಯಸ್ವಾಮಿ ತವರು ನಾಗಮಂಗಲ ಕ್ಷೇತ್ರದಲ್ಲಿ ಕೌಂಟರ್ ಕೊಡಲಾಗಿದೆ. ಫಲಿತಾಂಶ ನಾಳೆ ಬರಲಿದ್ದು, ಅದಕ್ಕೂ ಮೊದಲೇ ಸಂಸದರನ್ನಾಗಿ ಸುಮಲತಾ ಅವರನ್ನು ಬೆಂಬಲಿಗರು, ಸಂಸದರಾಗಿ ಆಯ್ಕೆ ಮಾಡಿದ್ದಾರೆ. ಸುಮಲತಾಗೆ ಅಭಿನಂದಿಸಿ ಕಾಂಗ್ರೆಸ್ ಮುಖಂಡರು, ಫ್ಲೆಕ್ಸ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಶೀಲರಾದ ಸುಮಲತಾ ಎಂದು ಬರೆದು ಅಭಿನಂದನೆ ಸಲ್ಲಿಸಿದ್ದಾರೆ.

ಒಟ್ಟಾರೆ ಮಂಡ್ಯದಲ್ಲಿ ಅಭಿಮಾನಿಗಳು ವಿಭಿನ್ನ ವರ್ತನೆಯಿಂದ ಭಾರೀ ಸುದ್ದಿ ಮಾಡಿದ್ದು, ಫಲಿತಾಂಶಕ್ಕೂ ಮುನ್ನವೇ ತಮಗೆ ಬೇಕಾದವರನ್ನೂ ಸಂಸದರು ಎಂದು ಹಾಕಿಕೊಂಡಿದ್ದಾರೆ. ಇದಕ್ಕೆ ಅಲ್ವಾ ಕೂಸು ಹುಟ್ಟುವ ನೊದಲೇ ಕುಲಾಯಿ ಹೊಲೆಸಿದ್ರು ಅನ್ನೊದು.

Leave a Reply