ಆಂಧ್ರದಲ್ಲಿ ಜಗನ್ ಜಗಮಗ! ಚಂದ್ರಬಾಬು ನಾಯ್ಡುಗೆ ಹೀನಾಯ ಸೋಲು

ಡಿಜಿಟಲ್ ಕನ್ನಡ ಟೀಮ್:

ಆಂಧ್ರ ರಾಜಕಾರಣದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆ ದೊಡ್ಡ ಪ್ರಮಾಣದ ಬದಲಾವಣೆಗೆ ಸಾಕ್ಷಿಯಾಗಿದ್ದು, 175 ಕ್ಷೇತ್ರಗಳ ಪೈಕಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಜಗನ್ ಮೋಹನ್ ರೆಡ್ಡಿ ಅವರ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಅದರೊಂದಿಗೆ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಹೀನಾಯ ಸೋಲು ಕಂಡಿದೆ.

ಮೇ 25ರಂದು ಜಗನ್ ತಮ್ಮ ಪಕ್ಷದ ಶಾಸಕರ ಸಭೆ ಕರೆದಿದ್ದು, ಮೇ 30ರಂದು ಪ್ರಮಾಣವಚನ ಸಾಧ್ಯತೆ ಇದೆ.

ಮತದಾನದ ವೇಳೆ ಸಾಕಷ್ಟು ಗಲಭೆಗೆ ಸಾಕ್ಷಿಯಾಗಿದ್ದ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮತದಾರ ಜಗನ್ ಮೋಹನ್ ರೆಡ್ಡಿಗೆ ಬಹುಪರಾಕ್ ಹೇಳಿದ್ದಾನೆ. 2014ರಲ್ಲಿ ಬಿಜೆಪಿ ಜತೆಗೆ ಚುನಾವಣೆ ಎದುರಿಸಿದ್ದ ಟಿಡಿಪಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿತ್ತು. ನಂತರ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ವಿಚಾರವಾಗಿ ಅಸಮಾಧಾನಗೊಂಡ ಟಿಡಿಪಿ ಎನ್ ಡಿಎ ಮೈತ್ರಿಕೂಟದಿಂದ ಹೊರಬಂದು ರಾಷ್ಟ್ರದ ಇತರೆ ಪ್ರದೇಶಿಕ ಪಕ್ಷಗಳ ಜತೆ ಕೈಕುಲುಕುವ ಪ್ರಯತ್ನ ಮಾಡಿದರು.

ಆದರೆ ಆಂಧ್ರ ಮತದಾರ ನಾಯ್ಡು ಅವರ ಈ ಎಲ್ಲ ಪ್ರಯತ್ನಗಳನ್ನು ಸಾರಾಸಗಟಾಗಿ ತಿರಸ್ಕರಿಸಿ ಜಗನ್ ರೆಡ್ಡಿ ಕೈ ಹಿಡಿದಿದ್ದಾರೆ. ಚಂದ್ರಬಾಬು ನಾಯ್ಡು ಅವರ ಸರ್ಕಾರ ಕೇವಲ ನಗರದ ಜನತೆಗಳಿಗೆ ಮಾತ್ರ ಸೀಮಿತವಾಗಿದೆ. ಹಳ್ಳಿ ಹಾಗೂ ಬಡ ಜನರಿಗೆ ನಾಯ್ಡು ಆಡಳಿತ ಸಿಕ್ಕಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಇಷ್ಟರ ಮಟ್ಟಿಗೆ ಆಂಧ್ರ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿತ್ತು. ಈ ಮಧ್ಯೆ ಟಿಡಿಪಿ ಸರ್ಕಾರದ ವಿರುದ್ಧ ಜಗನ್ ಮೋಹನ್ ಸಾವಿರಾರು ಕಿ.ಮೀಗಳು ಪಾದಯಾತ್ರೆ ನಡೆಸಿ ದಿಟ್ಟ ಹೋರಾಟ ಮಾಡಿದ್ದು, ಮತದಾರನನ್ನು ಸೆಳೆಯವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ.

Leave a Reply