ಮೋದಿ ಭಾರತ! ವಿರೋಧಿಗಳು ಧೂಳಿಪಟ!

ಡಿಜಿಟಲ್ ಕನ್ನಡ ಟೀಮ್:

ಎಕ್ಸಿಟ್ ಪೋಲ್ ನಿರೀಕ್ಷೆಯಂತೆ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಭಾರತೀಯ ಜನತಾ ಪಕ್ಷ ನೇತೃತ್ವದ ಎನ್ ಡಿಎ ಬಹುಮತದತ್ತ ಸಾಗುತ್ತಿದೆ. ಇದರೊಂದಿಗೆ ಮಹಾಘಟಬಂಧನದ ಜಪ ಮಾಡುತ್ತಿದ್ದ ವಿರೋಧ ಪಕ್ಷಗಳು ಧೂಳಿಪಟವಾಗುವ ಸೂಚನೆ ಸಿಗುತ್ತಿವೆ.

ಕರ್ನಾಟಕದಲ್ಲಿ ಬಿಜೆಪಿಯನ್ನು ನಿಯಂತ್ರಿಸಬೇಕು ಎಂಬ ಉದ್ದೇಶದೊಂದಿಗೆ ರಚನೆಯಾಗಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದರೂ ನಿರೀಕ್ಷಿತ ಗೆಲುವು ಸಾಧಿಸುವ ಬದಲು ಅನಿರೀಕ್ಷಿತ ಹಿನ್ನಡೆ ಅನುಭವಿಸಿರೋದು ರಾಷ್ಟ್ರ ರಾಜಕಾರಣದಲ್ಲಿ ಮತದಾರನ ಅಭಿಪ್ರಾಯವೇ ಬೇರೆ ಎಂಬ ಸಂದೇಶ ರವಾನೆಯಾಗಿದೆ.

ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ 328 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದ ಎನ್ಡಿಎ ಮೈತ್ರಿ ಕೂಟದಲ್ಲಿ ಬಿಜೆಪಿ 295, ಶಿವಸೇನೆ 19, ಅಕಾಲಿದಳ 4, ಜೆಡಿಯು 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಅದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಹುದ್ದೆ ಅಲಂಕರಿಸುವ ಸೂಚನೆಗಳು ಬಂದಿವೆ. ಇದರೊಂದಿಗೆ ಕಳೆದ  ಬಾರಿಯಂತೆ ಈ ಬಾರಿಯೂ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆಯುವ ಸೂಚನೆಯನ್ನು ನೀಡಿದೆ. ಇನ್ನು ವಿರೋಧ ಪಕ್ಷಗಳನ್ನು ನೋಡುವುದಾದರೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಹಿನ್ನಡೆಯಾಗಿದ್ದು, ದೀದಿ ನಾಡಲ್ಲಿ ಕಮಲ ತನ್ನ ಛಾಪು ಮೂಡಿಸಿದೆ. ಆರು ತಿಂಗಳ ಹಿಂದೆ ನಡೆದ ಛತ್ತೀಸ್ ಗಡ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಅದೇ ರೀತಿ ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತಿದೆ. ಇನ್ನು ಎಲ್ಲರ ಗಮನ ಸೆಳೆದಿದ್ದ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಲ್ಪ ಹಿನ್ನಡೆ ಅನುಭವಿಸಿದೆಯಾದರೂ ಎಸ್ ಪಿ ಹಾಗೂ ಬಿಎಸ್ ಪಿ ಮೈತ್ರಿ ತನ್ನ ನಿರೀಕ್ಷೆ ತಲುಪುವಲ್ಲಿ ಸಂಪೂರ್ಣ ವಿಫಲವಾಗಿದೆ.

Leave a Reply