ಈ ಫಲಿತಾಂಶವನ್ನು ಬಿಜೆಪಿ ನಿರೀಕ್ಷೆ ಮಾಡಿತ್ತಾ..?

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಐತಿಹಾಸಿಕ ವಿಜಯ ದಾಖಲಿಸಿದೆ. ಅದರಲ್ಲೂ ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಕಮಲ ಪಾಳಯ ವಿಶೇಷ ಸಾಧನೆ ಮಾಡಿದೆ. ಮಮತಾ ಬ್ಯಾನರ್ಜಿ ಹಾಗೂ ನವೀನ್​ ಪಟ್ನಾಯಕ್​ ಅಬ್ಬರದ ನಡುವೆ ಮೋದಿ ಜಾಗ ಗಿಟ್ಟಿಸುವ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ. ಲೋಕಸಭಾ ಚುನಾವಣೆ ಪ್ರಚಾರದ ವೇಳೆ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಾಕ್ಸಮರವನ್ನೇ ಮಾಡಿದ್ರು. ಬಿಜೆಪಿ ನಾಯಕರ ಚುನಾವಣಾ ಪ್ರಚಾರಕ್ಕೆ ಮಮತಾ ಬ್ಯಾನರ್ಜಿ ಅವಕಾಶ ಕೊಟ್ಟಿರಲಿಲ್ಲ. ಅಂತಿಮ ಹಂತದ ಚುನಾವಣೆ ವೇಳೆ ಅಮಿತ್​ ಶಾ ನೇತೃತ್ವದ ರೋಡ್​ ಶೋ ವೇಳೆ ದೊಡ್ಡ ಗಲಾಟೆ ನಡೆದಿತ್ತು. 42 ಸ್ಥಾನಗಳ ಪೈಕಿ ಬರೋಬ್ಬರಿ 17 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಳೆದ ಬಾರಿ 72 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದ್ರೆ ಈ ಬಾರಿ ಎಸ್​ಪಿ ಹಾಗೂ ಬಿಎಸ್​ಪಿ ಹೊಂದಾಣಿಕೆ ಹೋರಾಟ ಮಾಡಿದ್ರಿಂದ 59 ಸ್ಥಾನಗಳಿಗೆ ಕುಸಿತವಾದ ಬಿಜೆಪಿ ಬಲ, 13 ಸ್ಥಾನಗಳನ್ನು ಕಳೆದುಕೊಂಡಿತ್ತು. ಇದೀಗ ಎಲ್ಲಾ ನಷ್ಟವನ್ನು ಪಶ್ಚಿಮ ಬಂಗಾಳ ಹಾಗು ಒಡಿಶಾ ಮೂಲಕ ತುಂಬಿಕೊಂಡಿದೆ. ದೇಶಾದ್ಯಂತ ಮಹಾರಾಷ್ಟ್ರ 23, ಪಶ್ಚಿಮ ಬಂಗಾಳ 17, ಬಿಹಾರ 17, ಅಸ್ಸಾಂ 9, ಕರ್ನಾಟಕ 25, ದೆಹಲಿ 7, ಗುಜರಾತ್​ 26, ಹಱಣ 9, ಹಿಮಾಚಲ್​ ಪ್ರದೇಶ 4, ಜಮ್ಮು ಕಾಶ್ಮೀರ 3, ಜಾರ್ಖಂಡ್​ 11, ಮಧ್ಯಪ್ರದೇಶ 28, ಒಡಿಶಾ 8, ರಾಜಸ್ಥಾನ 24 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಚಂಡ ಬಹುಮತ ಸಾಧಿಸಿದೆ.

ಪಶ್ಚಿಮ ಬಂಗಾಳದಲ್ಲಿ ಕಳೆದ ಬಾರಿ ಬಿಜೆಪಿ ಗೆದ್ದಿದ್ದು ಕೇವಲ 2 ಸ್ಥಾನ. ಒಡಿಶಾದಲ್ಲಿ ಗೆದ್ದಿದ್ದು ಕೇವಲ 1 ಸ್ಥಾನ. ಪರಿಸ್ಥಿತಿ ಹೀಗಿದ್ದರೂ ನರೇಂದ್ರ ಮೋದಿ ಕ್ರಮವಾಗಿ 17 ಹಾಗೂ 8 ಕ್ಷೇತ್ರಗಳ ಜನರ ಮನಸ್ಸು ಗೆಲ್ಲಲು ಸಾಧ್ಯವಾಗಿದೆ. ಇದಕ್ಕೆ ಕಾರಣ ಅಂದ್ರೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ಪಕ್ಕಾ ಎದುರಾಳಿ ಎಡರಂಗ ತನ್ನ ಅಸ್ತಿತ್ವ ಕಳೆದುಕೊಂಡಾಗ ಆಸರೆಯಾಗಿ ಸಿಕ್ಕಿದ್ದು ಬಿಜೆಪಿ, ಮಮತಾ ಮೇಲಿನ ಕೋಪದಲ್ಲಿರುವ ಎಡಪಕ್ಷದ ಕಾರ್ಯಕರ್ತರು ಕೇಸರಿಪಡೆ ಸೇರಿದ್ದಾರೆ. ಇದೇ ಕಾರಣದಿಂದ ದೀದಿ ಕೋಟೆಗೆ ನುಗ್ಗಿದ ನರೇಂದ್ರ ಮೋದಿ ಅಂಡ್​ ಟೀಂ ಬರೋಬ್ಬರಿ 17 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ಅದೇ ರೀತಿ ಒಡಿಶಾದ ಕಳೆದ ಬಾರಿ 1 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 8 ಸ್ಥಾನಗಳನ್ನು ಗಳಿಸಿಕೊಂಡಿದೆ. ಇದಕ್ಕೆ ಕಾರಣ, ಕಳೆದ ತಿಂಗಳು ಒಡಿಶಾದಲ್ಲಿ ಫನಿ ಚಂಡಮಾರುತದ ವೇಳೆ ರಾಜ್ಯ ಸರ್ಕಾರಕ್ಕೆ ಬೆನ್ನೆಲುಬಾಗಿ ನಿಂತಿದ್ದು ಹಾಗೂ 1 ಸಾವಿರ ಕೋಟಿ ರೂಪಾಯಿ ತುರ್ತು ಅನುದಾನ ಕೊಟ್ಟಿದ್ದು. ಇದೇ ಕಾರಣಕ್ಕಾಗಿ ನರೇಂದ್ರ ಮೋದಿಗೆ ಒಡಿಶಾ ಜನ ಜೈ ಎಂದಿದ್ದಾರೆ. ಆದರೂ ನರೇಂದ್ರ ಮೋದಿ ಉತ್ತರ ಪ್ರದೇಶದಲ್ಲಿ ಕಳೆದುಕೊಂಡ ಕೆಲವು ಸ್ಥಾನಗಳನ್ನು ಅನ್ಯ ರಾಜ್ಯಗಳಲ್ಲಿ ಪಡೆಯುವ ಲೆಕ್ಕಾಚಾರ ಪಕ್ಕಾ ಹಾಕಿದ್ದಾರೆ. ಫಲಿತಾಂಶ ವಿರೋಧ ಪಕ್ಷಗಳಿಗೆ ಮಾತ್ರವಲ್ಲದೆ ಸ್ವತಃ ಬಿಜೆಪಿ ಕಾರ್ಯಕರ್ತರಿಗೂ ದಂಗುಬಡಿಸಿದೆ ಅಂದ್ರೆ ಸುಳ್ಳಲ್ಲ.

Leave a Reply