ಸೋಲಲ್ಲೂ “ಸೇಡಿನ ಗೆಲುವು” ಸಾಧಿಸಿದ್ದು ಯಾರ‌್ಯಾರು ಗೊತ್ತಾ..?

ಡಿಜಿಟಲ್ ಕನ್ನಡ ಟೀಮ್:

ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂದು ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಹೀನಾಯ ಸೋಲು ಕಂಡಿದೆ. ಮೈತ್ರಿ ಮಾಡಿಕೊಂಡರು ಎರಡೂ ಪಕ್ಷಗಳ ನಾಯಕರ ನಡುವಣ ಮುಸುಕಿನ ಗುದ್ದಾಟ, ಪ್ರತಿಷ್ಠೆಯ ಪರಿಣಾಮ ಲೋಕಸಭೆ ಚುನಾವಣೆ ತಂತ್ರಗಾರಿಕೆಯಲ್ಲಿ ಸಂಪೂರ್ಣ ವಿಫಲವಾಗಿದೆ. ನಾಯಕರಲ್ಲಿನ ಸಮನ್ವಯ ಕೊರತೆ ತಳಮಟ್ಟದಲ್ಲಿ ಕಾರ್ಯಕರ್ತರ ನಡುವಣ ಹೊಂದಾಣಿಕೆ ಮೇಲೆ ಪರಿಣಾಮ ಬೀರಿತು. ಇವೆಲ್ಲಕ್ಕೂ ಕಾರಣ ನಾಯಕರ ನಡುವಣ ಹಳೇ ಸೇಡು!

ಹೌದು, ಪಕ್ಷದ ಒಳಗೆ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹೆಸರಿಗೆ ಮಾತ್ರ ಮೈತ್ರಿ ಮಾಡಿಕೊಂಡಿದ್ದರೇ ಹೊರತು ಎಂದಿಗೂ ತಮ್ಮ ಹಳೇ ಮನಸ್ತಾಪ ಮರೆತಿರಲಿಲ್ಲ. ತಮ್ಮ ಸೇಡು ತೀರಿಸಿಕೊಳ್ಳಲು ಈ ಚುನಾವಣೆಯನ್ನು ವೇದಿಕೆಯಾಗಿ ಬಳಸಿಕೊಂಡ ಪರಿಣಾಮ ಇಂದು ಎರಡೂ ಪಕ್ಷಗಳ ನಾಯಕರು ಹೀನಾಯ ಸೋಲಿಂದ ತಲೆ ತಗ್ಗಿಸುವ ಪರಿಸ್ಥಿತಿ ಬಂದಿದೆ. ಈ ಸೋಲಿನಲ್ಲಿ ಕೆಲವು ನಾಯಕರು ತಮ್ಮ ಪ್ರತೀಕಾರ ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಯಾರು ಯಾರ ವಿರುದ್ಧ ಹೇಗೆ ಸೇಡು ತೀರಿಸಿಕೊಂಡಿದ್ದಾರೆ ನೋಡೋಣ ಬನ್ನಿ…

ಮಾಜಿ ಸಿಎಂ ಸಿದ್ದರಾಮಯ್ಯ ನೇರನುಡಿ. ಯಾರ ಮಾತಿಗೂ ತಲೆಕೆಡಿಸಿಕೊಳ್ಳದ ಹುಂಬ ವ್ಯಕ್ತಿತ್ವ. ಕಳೆದ ಬಾರಿ 2013 ರಿಂದ 2018 ರ ತನಕ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ 2018 ರಲ್ಲಿ ನಡೆದ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರು. ಆದ್ರೆ ಜೆಡಿಎಸ್ ಜಿ.ಟಿ ದೇವೇಗೌಡರನ್ನು ಎದುರಾಳಿಯಾಗಿ ನಿಲ್ಲಿಸುವ ಮೂಲಕ ಕಠಿಣ ಸವಾಲು ಹಾಕಿತ್ತು. ಯಾವಾಗ ಜಿ.ಟಿ ದೇವೇಗೌಡರ ಎದುರು ಸೋಲುವುದು ಖಚಿತ ಅನ್ನೋದು ಗೊತ್ರಾಯ್ತು. ಕೂಡಲೇ ಎಚ್ಚೆತ್ರ ಸಿದ್ದರಾಮಯ್ಯ, ಬಾಗಲಕೋಟೆಯ ಬದಾಮಿಯಲ್ಲಿ ಸ್ಪರ್ಧೆ ಮಾಡಿದ್ರು. ಅಲ್ಲೂ ಕೇವಲ 1500 ಮತಗಳ ಕನಿಷ್ಠ ಅಂತರದಲ್ಲಿ ಗೆದ್ದು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು. ಜೆಡಿಎಸ್ ತನಗೆ ಕೆಡುಕು ಮಾಡಿತ್ತು ಅನ್ನೋ ಕೋಪ ಮನಸ್ಸಲ್ಲಿ ಕುದಿಯುತ್ತಿತ್ತು. ಇದೇ ಕಾರಣಕ್ಕೆ ಮೈತ್ರಿ ಇದ್ದರೂ ಮಂಡ್ಯದಲ್ಲಿ ಸುಮಲತಾ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಮಾಡಿದ್ರು. ಬಿ.ಎಸ್ ಯಡಿಯೂರಪ್ಪ ಜೊತೆ ಚರ್ಚೆ ಮಾಡಿ ಬಿಜೆಪಿ ಬೆಂಬಲ ಸಿಗುವಂತೆಯೂ ನೋಡಿಕೊಂಡ್ರು. ತಮ್ಮ ಶಿಷ್ಯರ ಮನವೊಲಿಸುವ ನೆಪದಲ್ಲಿ ಮಾರ್ಗದರ್ಶನ ಮಾಡುತ್ತಾ ಸುಮಲತಾ ಗೆಲ್ಲುವಂತೆ ನೋಡಿಕೊಂಡ್ರು.

ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕ. ಈ ಹಿಂದೆ ಜೆಡಿಎಸ್‌ನಲ್ಲಿ ತಳ ಮಟ್ಟದಿಂದ ಬೆಳೆದು ಶಾಸಕನಾಗಿ, ಸಚಿವನಾಗಿ ಜಿಲ್ಲೆಯ ಅಭಿವೃದ್ಧಿಗೆ ಪಣತೊಟ್ಟ ಚಲುವರಾಯಸ್ವಾಮಿ, ಅದತಲ್ಲಿ ಯಶಸ್ಸು ಕಂಡವರು. ಆದರೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವಿಶ್ವಾಸಕ್ಕೋ ಹಣದಾಸೆಗೋ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಜೆಡಿಎಸ್ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಬಳಿಕ ರಾಜಿ ಸಂಧಾನಕ್ಕೆ ಪ್ರಯತ್ನ ನಡೆದಿತ್ತಾದರೂ ಯಶಸ್ಸು ಕಾಣಲಿಲ್ಲ. ಕೊನೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿಕೊಂಡರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್, ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ರಿಂದ ಕಂಗಾಲಾದ ಚಲುವರಾಯಸ್ವಾಮಿ ಹಾಗೂ ಸ್ನೇಹಿತರು ಒಳಗೊಳಗೆ ಕುದಿಯುತ್ತಿದ್ದರು. ಸಿಎಂ ಕುಮಾರಸ್ವಾಮಿ ಯಾವಾಗ ಮಗನ ರಾಜಕೀಯ ನೆಲೆ ಹುಡುಕಿಕೊಂಡು ಮಂಡ್ಯದತ್ತ ಕಾಲಿಟ್ಟರೋ ಆಗ ಚಲುವರಾಯಸ್ವಾಮಿ ಆಟ ಶುರುವಾಯ್ತು. ತನ್ನ ವರ್ಚಸ್ಸು ಬಳಸಿ ತೆರೆಮರೆಯಲ್ಲಿ‌ ದಾಳ ಉರುಳಿಸಿದ್ರು. ಅದಕ್ಕೆ ಸಿದ್ದರಾಮಯ್ಯ ಅವರ ಬೆಂಬಲ ಸಿಕ್ಕಿದ್ದು‌ಕುಮಾರಸ್ವಾಮಿ ಮೇಲಿನ ಕೋಪ ತೀರಿಸಿಕೊಳ್ಳಲು ಸಹಕಾರಿ ಆಯ್ತು. ಕಳೆದ ವಿಧಾನಸಭೆಯಲ್ಲಿ ನಾಗಮಂಗಲ ಕ್ಷೇತ್ರದಲ್ಲಿ ಸೋಲಿಸಿದ್ದ ಜಿದ್ದನ್ನು ಚಲುವರಾಯಸ್ವಾಮಿ ಈ ರೀತಿ ತೀರಿಸಿಕೊಂಡರು.

ಮಂಡ್ಯದಲ್ಲಿ ಸಿದ್ದರಾಮಯ್ಯ ಮಸಲತ್ತು ಮಾಡ್ತಿದ್ದಾರೆ ಅನ್ನೋದನ್ನು ಅರಿತ ಸಿಎಂ ಕುಮಾರಸ್ವಾಮಿ, ಅತ್ತ ಮೈಸೂರಿನಲ್ಲಿ ಸಿದ್ದರಾಮಯ್ಯ ಆಪ್ತ ವಿಜಯಶಂಕರ್ ಅವರನ್ನು ಸೋಲಿಸಿದ್ರು. ಮೊದಲಿಗೆ ಆಪ್ತ ಸಾ ರಾ ಮಹೇಶ್ ಮೂಲಕ ಎಚ್ಚರಿಕೆ ಹೇಳಿಕೆ ಕೊಡಿಸಿದ್ದ ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಮ್ಮ ನಿರ್ಧಾರ ಬದಲಿಸದ ಕಾರಣಕ್ಕೆ ಮೈಸೂರಿನಲ್ಲಿ ಬಿಜೆಪಿಯ ಪ್ರತಾಪ್ ಸಿಂಹರನ್ನು ಬೆಂಬಲಿಸಿದ್ರು. ಇನ್ನು ಫಲಿತಾಂಶ ಹೊರ ಬೀಳುವ ಮೊದಲೇ ಈ ಬಗ್ಗೆ ಸಚಿವ ಜಿ.ಟಿ ದೇವೇಗೌಡರ ಮೂಲಕ ಹೇಳಿಕೆ ಕೊಡಿಸುವ ಮುನ್ನ ರಾಜಕೀಯ ಚದುರಂಗ ಅರ್ಥವಾಗಿದೆ ಎಂದು ಹೇಳಿದ್ರು.

ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ್ರು. ಆದ್ರೆ ಹಾಲಿ ಸಂಸದರಾಗಿದ್ದ ಮುದ್ದಹನುಮೇಗೌಡ ಇದ್ರಿಂದ ಕುಪಿತಗೊಂಡು ತಟಸ್ಥರಾದರು. ಮಾಜಿ ಪ್ರಧಾನಿ ದೇವೇಗೌಡರಿಗೆ ಸೋಲಾಯ್ತು. ಮುದ್ದಹನುಮೇಗೌಡರು ಈ ರೀತಿ ತಮಗೆ ಟಿಕೆಟ್ ಕೊಡದ ಸೇಡನ್ನು ತೀರಿಸಿಕೊಂಡರು‌.

ಇನ್ನು ಪರಮೇಶ್ವರ್ ಅಧ್ಯಕ್ಷತೆಯಲ್ಲಿ 2013ರಲ್ಲಿ ಚುನಾವಣೆ ನಡೆದಿತ್ತು, ಆಗ ಕಾಂಗ್ರೆಸ್ ಬಹುಮತ ಪಡೆದರೂ ಪರಮೇಶ್ವರ್ ಅಧ್ಯಕ್ಷರಾಗಿ ತುಮಕೂರಿನ ಕೊರಟಗೆರೆಯಲ್ಲಿ ಜೆಡಿಎಸ್‌ನ ಸುಧಾಕರ್ ಲಾಲ್ ವಿರುದ್ಧ ಸೋಲನಪ್ಪಿದರು. ಇದರಿಂದ ಆದ ನಷ್ಟ ಎಂದರೆ ಮುಖ್ಯಮಂತ್ರಿ ಹುದ್ದೆ. ಅಂದು ದೇವೇಗೌಡರು ಸುಧಾಕರ್ ಲಾಲ್ ಅವರನ್ನು ಗೆಲ್ಲಿಸುವ ಮೂಲಕ ನನ್ನ ಸಿಎಂ ಕನಸು ನುಚ್ಚು ನೂರು ಮಾಡಿದರು‌ ಅನ್ನೋ ಕೋಪವನ್ನು ಈ ಬಾರಿ ತೀರಿಸಿಕೊಂಡರು.

ಅದೇ ರೀತಿ ಮಧುಗಿರಿಯಲ್ಲಿ ಅನಿತಾ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿದ್ದ ಕೆ. ಎನ್ ರಾಜಣ್ಣ ಸೋಲನ್ನಪ್ಪಿದ್ರು. ದೇವೇಗೌಡರ ಕುಟುಂಬದಿಂದ ಸೋಲಾಯ್ತು ಅನ್ನೋ ಕೋಪವನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತೋರಿಸಿದರು. ಕೊರಟಗೆರೆ, ಮಧುಗಿರಿಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜುಗೆ ಬಹುಮತ ಬರುವಂತೆ ಮಾಡಿದರು.

ಎಂಬಿ ಪಾಟೀಲರು ಸಿಎಂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ‌ಸಚಿವರಾಗಿ ಆಯ್ಕೆಯಾಗಿರಲಿಲ್ಲ. ಕೊನೆಗೆ ಬಂಡಾಯದ ಬಾವುಟ ಹಾರಿಸಿ ಸಚಿವರಾದರು. ಮೈತ್ರಿಯಾಗಿರುವ ಕಾರಣಕ್ಕೆ ಸುನಿತಾ ಚೌಹಾಣ್ ಅವರಿಗೆ ಜೆಡಿಎಸ್ ಟಿಕೆಟ್ ಸಿಕ್ಕರೂ ಸರಿಯಾಗಿ ಪ್ರಚಾರ ಹಾಗೂ ಬೆಂಬಲ ನೀಡದೆ ರಮೇಶ್ ಜಿಗಜಿಣಗಿ ಗೆಲುವಿಗೆ ಸಹಕಾರಿಯಾದರು. ಈ ಮೂಲಕ ಕೋಪ ತರಿಸಿಕೊಂಡರು.

ಕೋಲಾರದಲ್ಲಿ ಮುನಿಯಪ್ಪಗೆ ಲೋಕಸಭಾ ಟಿಕೆಟ್ ಕೊಡವಾರದು ಅನ್ನೋ ಕೂಗು ಜೋರಾಗಿತ್ತು. ರಮೇಶ್ ಕುಮಾರ್ ನೇತೃತ್ವದಲ್ಲಿ ದೆಹಲಿಗೆ ನಿಯೋಗವೇ ತೆರಳಿತ್ತು. ಜೆಡಿಎಸ್ ಶಾಸಕರೂ ರಮೇಶ್ ಕುಮಾರ್ ಆಗ್ರಹಕ್ಕೆ ಸೈ ಎಂದಿದ್ದರು. ಆದರೆ ಮುನಿಯಪ್ಪ ತನ್ನ ವರ್ಚಸ್ಸು, ಪ್ರಬಾವ ಬಳಸಿ ಟಿಕೆಟ್ ಪಡೆದರು. ಆದ್ರೆ ಬಿಜೆಪಿಯ ಓರ್ವ ಕಾರ್ಪೊರೇಟರ್ ವಿರುದ್ಧ ಸೋಲು ಒಪ್ಪಿಕೊಂಡ್ರು. ಈ ಮೂಲಕ ಮುನಿಯಪ್ಪ ವಿರೋಧಿಪಡೆ ಗೆಲುವನ್ನು ಸಂಭ್ರಮಿಸಿತು.

ಹಾಸನದಲ್ಲಿ ಎ ಮಂಜು ಸ್ವಂತ ವರ್ಚಸ್ಸಿನ ಮೇಲೆ ಉತ್ತಮ ಪೈಪೋಟಿ ನೀಡಿದ್ರು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರೂ ಕಾಂಗ್ರೆಸ್‌ನ ಮುಖಂಡರು, ನಾಯಕರ ವಿಶ್ವಾಸ ಕಡಿಮೆ ಆಗಿರಲಿಲ್ಲ. ಅದರ ಜೊತೆಗೆ ಬಿಜೆಪಿ‌ ಸಪೋರ್ಟ್ ಸಿಕ್ಕಿದ್ದರೆ ಮಂಡ್ಯದಲ್ಲಿ‌ ಫಲಿತಾಂಶ ಬದಲಾಗಿದ್ದರೆ ಎ ಮಂಜು ಸರಳ ಗೆಲುವು ಸಾಧಿಸಬೇಕಿತ್ತು. ಆದ್ರೆ ಈಗಾಗಲೇ ರಾಜ್ಯದಲ್ಲಿ ಸಚಿವನಾಗಿ ಕೆಲಸ ಮಾಡಿರುವ ಎ. ಮಂಜು ಇದೀಗ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಉಸ್ತುವಾರಿ ಮಂಜು ಪಾಲಾಗಲಿದೆ ಅನ್ನೋ ಕಾರಣಕ್ಕೆ ಹಾಸನ ಶಾಸಕ ಪ್ರೀತಂ ಗೌಡ ಉಲ್ಟಾ ಹೊಡೆದರು. ಬಿಜೆಪಿಯ ಸೂಕ್ತ ಬೆಂಬಲ ಸಿಗದ ಕಾರಣಕ್ಕೆ ಸೋತು ಹೋದರು. ಒಟ್ಟಾರೆ ಕೆಲವೊಂದು ಕಾರಣಕ್ಕೆ ಕೆಲವೊಂದು ರಾಜಕಾರಣಿಗಳು ಸೇಡಿನ ಕೂಪಕ್ಕೆ ಬಿದ್ದರು. ಅದು ಕೆವಲು ಕಡೆ ಚೆನ್ನಾಗಿ ವರ್ಕೌಟ್ ಆದರೆ ಇನ್ನು ಕೆಲವು ಕಡೆ ಪರಿಣಾಮ ಬೀರಿಲ್ಲ ಅಂತಾನೇ ಹೇಳಬಹುದು.

Leave a Reply