ಡಿಜಿಟಲ್ ಕನ್ನಡ ಟೀಮ್:
‘ದಿನಬೆಳಗಾದರೆ ಗೊಂದಲ ನಿವಾರಣೆ ಮಾಡುವ ಬದಲು, ನಿಮಗೆ ಮೈತ್ರಿ ಸರ್ಕಾರ ಬೇಕೋ? ಬೇಡವೋ? ಹೇಳಿಬಿಡಿ…’ ಇದು ಮಾಜಿ ಪ್ರಧಾನಿ ದೇವೇಗೌಡ ಕಾಂಗ್ರೆಸ್ ನಾಯಕರಿಗೆ ಕಡ್ಡಿ ಮುರಿದಂತೆ ಹೇಳಿರುವ ಮಾತು.
ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಎರಡೂ ಪಕ್ಷಗಳ ನಾಯಕರ ನಡುವೆ ಭಿನ್ನಮತ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ.
ಇದನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿ ಸರ್ಕಾರ ಬೆಎಲಿಸುಕ ಪ್ರಯತ್ನ ನಡೆಸುತ್ತಿದೆಯಾದರೂ ಈವರೆಗೂ ಯಶಸ್ವಿಯಾಗಿಲ್ಲ. ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಸಮ್ಮಿಶ್ರ ಸರ್ಕಾರ ಉಳಿಯಲು ಸಾಧ್ಯವೇ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ.
ಆಪರೇಷನ್ ಕಮಲದ ಭೀತಿ ನಡುವೆ ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕರು ಪದೇ ಪದೇ ಬಂಡಾಯದ ಬಾವುಟ ಹಾರಿಸುತ್ತಿದ್ದಾರೆ. ಇದನ್ನು ಬಗೆಹರಿಸುವುದೇ ಪಕ್ಷದ ನಾಯಕರಿಗೆ ದೊಡ್ಡ ಸವಾಲಾಗಿದೆ. ಒಂದು ಕಡೆಯಿಂದ ಬಂಡಾಯ ಶಮನ ಮಾಡುತ್ತಾ ಬಂದರೆ ಮತ್ತೊಂದು ಕಡೆಯಿಂದ ಹೊಸ ಬಂಡಾಯ ಶುರುವಾಗುತ್ತದೆ.
ಚುನಾವಣೆ ಫಲಿತಾಂಶದ ನಂತರ ರಮೇಶ್ ಜಾರಕಿಹೊಳಿ, ರೋಷನ್ ಬೇಗ್ ಸೇರಿದಂತೆ ಹಲವು ಕಾಂಗ್ರೆಸ್ ಹಿರಿಯ ನಾಯಕರು ಬಿಜೆಪಿಯ ಕಡೆ ಮುಖ ಮಾಡಿ ನಿಂತಿದ್ದಾರೆ. ದಿನಬೆಳಗಾದರೆ ಆಪರೇಷನ್ ಭೀತಿಯಲ್ಲೇ ಸರ್ಕಾರ ಸಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ದೇವೇಗೌಡರು ಬೇಸತ್ತಿದ್ದು, ಮೈತ್ರಿ ಸರ್ಕಾರದಲ್ಲಿ ಆಸಕ್ತಿ ಇದೆಯಾ ಇಲ್ಲವಾ ಎಂದು ಕೇಳಿದ್ದಾರೆ ಎಂದು ವರದಿ ಬಂದಿವೆ.
ಮೂಲಗಳ ಪ್ರಕಾರ, ‘ಪ್ರತಿದಿನ ನಮ್ಮಿಂದ ಎಳೆದಾಟ ಸಾಧ್ಯವಿಲ್ಲ, ಅಧಿಕಾರಕ್ಕಾಗಿ ನಾವು ಅಂಟಿಕೊಂಡಿಲ್ಲ. ಚುನಾವಣೆಯಲ್ಲಂತೂ ಕಾಂಗ್ರೆಸ್ ಬೆಂಬಲ ಸಿಕ್ಕಿಲ್ಲ. ಸರ್ಕಾರ ಮುನ್ನಡೆಸಲು ಸೂಕ್ತ ಬೆಂಬಲ ಸಿಗುತ್ತಾ? ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮೂಲಕ ಕೈ ಹೈಕಮಾಂಡ್ಗೆ ದೇವೇಗೌಡರು ಕೇಳಿದ್ದಾರೆ.
ಸೋಮವಾರ ಬೆಳಗ್ಗೆ ದಿನೇಶ್ ಗುಂಡೂರಾವ್ ಅವರನ್ನು ತಮ್ಮ ಪದ್ಮನಾಭನಗರ ಮನೆಗೆ ಕರೆಸಿಕೊಂಡಿದ್ದ ದೇವೇಗೌಡರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಒಂದಷ್ಟು ಶಾಸಕರು ಬಿಜೆಪಿ ಕಡೆ ಮುಖ ಮಾಡಿದ್ದಾರೆ, ಇದೇನು ಮಕ್ಕಳಾಟವಾ ಎಂದು ದೇವೇಗೌಡ ಪ್ರಶ್ನಿಸಿದ್ದಾರೆ. ದಿನ ಬೆಳಗಾದ್ರೆ ಶಾಸಕರನ್ನ ಸಮಾಧಾನ ಪಡಿಸುವ ಕೆಲಸವೇ ಆಗಿಹೋಗಿದೆ. ಹಾಗಾದರೆ ಸರ್ಕಾರದ ಕೆಲಸ ಮಾಡೋದು ಯಾವಾಗ? ಸರ್ಕಾರ ಉಳಿಸಿಕೊಳ್ಳೋದಕ್ಕೆ ಸಮಯ ಕಳೆಯೋದಾ? ನಿಮ್ಮ ನಿರ್ಧಾರ ಏನು? ಮುಖಂಡರ ಜೊತೆ ಮಾತಾಡಿ ಸ್ಪಷ್ಟ ನಿರ್ಧಾರಕ್ಕೆ ಬನ್ನಿ ಎಂದು ಗೌಡರು ಗುಂಡೂರಾವ್ಗೆ ತಾಕೀತು ಮಾಡಿದ್ದಾರೆ.
ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆಗಬೇಕು, ಆಗ ಮತ್ತೆ ಅಸಮಾಧಾನ ಅಂದ್ರೆ ಕಷ್ಟವಾಗತ್ತೆ. ಸರ್ಕಾರ ಸುಸೂತ್ರವಾಗಿ ನಡೆಯಬೇಕು, ಇಲ್ಲದಿದ್ದರೆ ಸರ್ಕಾರ ಇದ್ದು ಪ್ರಯೋಜನ ಏನು? ಎಂದು ಪ್ರಶ್ನಿಸಿದ್ದಾರೆ.