ಮೋದಿ ಸರ್ಕಾರದಲ್ಲಿ ಮಂತ್ರಿ ಆಗ್ತಾರಾ ಸಂಸದೆ ಸುಮಲತಾ..?

ಡಿಜಿಟಲ್ ಕನ್ನಡ ಟೀಮ್:

ಮಂಡ್ಯ ಲೋಕಸಭಾ ಕ್ಷೇತ್ರ ಸೃಷ್ಟಿಸಿದ ಹವಾ ಇಡೀ ಹಿಂದೂಸ್ಥಾನ ಮಾತ್ರವಲ್ಲದೇ ಇತರೆ ದೇಶಗಳಲ್ಲೂ ಜನರು ಮಾತನಾಡುವಂತಾಗಿದ್ದು, ಸುಮಲತಾ ಅವರು ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಎದುರಾಳಿ ಆಗಿದ್ದಕ್ಕೆ ಮಾತ್ರ. ಚುನಾವಣಾ ಪ್ರಚಾರದ ವೇಳೆ ಅದೇನೇ ಟೀಕೆ ಟಿಪ್ಪಣಿ ಮಾಡಿದರೂ ಎರಡೂ ಕಡೆಯವರು ಇದೀಗ ಸ್ವೀಕರಿಸಿದ್ರು. ಸೋಷಿಯಲ್ ಮೀಡಿಯಾದಲ್ಲಿ ಎರಡೂ ಕಡೆಯವರ ವಾಗ್ದಾಳಿ ಧೂಳೆಬ್ಬಿಸಿತ್ತು. ಇತರೆ ದೇಶದ ಜನರೂ ಕೂಡ ಟೀಕೆಯನ್ನೇ ಕಾಮಿಡಿಯಾಗಿ ತೆಗೆದುಕೊಂಡ್ರು. ಇಷ್ಟೆಲ್ಲದರ ನಡುವೆ ಮಂಡ್ಯ ಜನರು ಮೊದಲ ಬಾರಿಗೆ ಪಕ್ಷೇತರ ಮಹಿಳಾ ಅಭ್ಯರ್ಥಿಯನ್ನು ಲೋಕಸಭೆಗೆ ಆಯ್ಕೆ ಮಾಡುವ ಮೂಲಕ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಸುಮಲತಾ ಕೂಡ ಮಂಡ್ಯ ಜನರಿಗಾಗಿ ಏನನ್ನಾದರೂ ಮಾಡಲೇಬೇಕು ಅನ್ನೋ ತುಡಿತ ಹೊಂದಿದ್ದಾರೆ. ಕೇವಲ ಸಂಸದರಾಗಿ ಇದ್ದರೆ, ಕೇಂದ್ರ ನೀಡುವ ಅನುದಾನವನ್ನು ನಂಬಿಕೊಂಡು ಕೂರಬೇಕಾಗುತ್ತದೆ. ಆದರೆ ಕೇಂದ್ರದಲ್ಲಿ ಸಚಿವರಾಗಿಬಿಟ್ಟರೆ ಒಳ್ಳೊಳ್ಳೆ ಯೋಜನೆಗಳು ಬರಲಿವೆ ಎಂದು ಮಂಡ್ಯ ಜನರು ಮಾತನಾಡ್ತಿದ್ದಾರೆ.

ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲಿಸಿರೋದು ಸಣ್ಣ ಸಾಧನೆಯಲ್ಲ. ಚಕ್ರವ್ಯೂಹಕ್ಕೆ ನುಗ್ಗಿ ಹೋರಾಡಿದ ಅಭಿಮನ್ಯುವಂತೆ ಅಖಾಡದಲ್ಲಿ ಹೋರಾಡಿದ ಸುಮಲತಾ ಚಕ್ರವ್ಯೂಹ ಬೇಧಿಸಿಕೊಂಡು ಹೊರ ಬಂದಿದ್ದಾರೆ. ಪಕ್ಷೇತರ ಅಭ್ಯರ್ಥಿ ಆಗಿರುವ ಕಾರಣಣಕ್ಕೆ ನಾನು ನನ್ನನ್ನು ಚುನಾವಣೆಯಲ್ಲಿ ಬೆಂಬಲಿಸಿದ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಜನರು ಹಾಗೂ ನನಗೆ ಬೆಂಬಲ ಕೊಟ್ಟವರ ಅನುಮತಿ ಪಡೆಯುತ್ತೇನೆ ಎಂದಿದ್ದಾರೆ. ಭಾನುವಾರ ಮಧ್ಯಾಹ್ನ ಡಾಲರ್ಸ್ ಕಾಲೋನಿಯ ಬಿ.ಎಸ್ ನಿವಾಸಕ್ಕೆ ಭೇಟಿ ನೀಡಿ ಬಿಜೆಪಿ ರಾಜ್ಯಾಧ್ಯಕ್ಷರ ಜೊತೆ ಚರ್ಚೆ ನಡೆಸಿದ್ರು. ಆ ಬಳಿಕ ಒಟ್ಟಿಗೆ ಎಸ್.ಎಂ ಕೃಷ್ಣ ಅವರ ನಿವಾಸಕ್ಕೆ ತೆರಳಿದ ಸುಮಲತಾ ಹಾಗೂ ಬಿಎಸ್‌ವೈ, ಆರ್. ಅಶೋಕ್ ಸಮಗ್ರವಾಗಿ ಚರ್ಚಿಸಿದ್ದು, ಒಕ್ಕಲಿಗ ಕೋಟಾದಲ್ಲಿ ಸಚಿವ ಸ್ಥಾನಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಕೇಂದ್ರದಲ್ಲಿ ಸುಮಲತಾ ಅವರಿಗೆ ಸಚಿವ ಸ್ಥಾನ ಸಿಗುತ್ತೆ ಅನ್ನೋ ನಂಬಿಕೆ ಮಂಡ್ಯ ಜನರದ್ದು. ಈಗಾಗಲೇ ಈ ಬಗ್ಗೆ ಸೋಷಿಯಲ್ ಮೀಡಿಯಾ ಸೇರಿದಂತೆ ಸಾಕಷ್ಟು ಕಡೆ ಒತ್ತಾಯವಾಗಿ ಕೇಳಿಬರುತ್ತಿದೆ.

ಇನ್ನು ಬಿಜೆಪಿಯಿಂದ ಗೆಲ್ಲದೆ ಬೆಂಬಲ ಪಡೆದು ಗೆದ್ದಿರುವ ಸುಮಲತಾ, ನಾನು ಎಲ್ಲಾ ಪಕ್ಷದ ಬೆಂಬಲ ಪಡೆದು ಗೆದ್ದಿದ್ದೇನೆ ಎನ್ನುತ್ತಿರುವ ಮಂಡ್ಯ ಸಂಸದರಿಗೆ ನಿಜವಾಗಲೂ ಕೇಂದ್ರದಲ್ಲಿ ಮೋದಿ ಮಂತ್ರಿಮಂಡಲದಲ್ಲಿ ಅವಕಾಶ ಸಿಗುತ್ತಾ ಅನ್ನೋ ಪ್ರಶ್ನೆ ಎದುರಾಗುತ್ತದೆ. ಅದರಲ್ಲೂ ಮೊದಲ ಬಾರಿಗೆ ಆಯ್ಕೆಯಾಗಿರುವ ಪಕ್ಷೇತರ ಅಭ್ಯರ್ಥಿಯನ್ನು ನರೇಂದ್ರ ಮೋದಿ ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ತಾರಾ ಅನ್ನೋ ಅನುಮಾನಗಳು ಮೂಡುತ್ತವೆ. ಆದರೆ, ಸುಮಲತಾ ಕೇಂದ್ರ ಮಂತ್ರಿ ಆಗ್ತಾರೆ ಅನ್ನೋ ಜನ ಹೇಳೋ ಮಾತುಗಳೇ ಬೇರೆ. ಸದ್ಯಕ್ಕೆ ಉತ್ತರ ಕರ್ನಾಟಕ ಬಿಟ್ಟರೆ ದಕ್ಷಿಣ ಕರ್ನಾಟಕದಲ್ಲಿ ಕಮಲ ಅರಳುವುದು ಅಷ್ಟೊಂದು ಸುಲಭವಲ್ಲ. ಇದು ಬಿಜೆಪಿ ನಾಯಕರಿಗೂ ಗೊತ್ತಿರುವ ಸಂಗತಿ. ಇದೇ ಕಾರಣಕ್ಕಾಗಿ ಸುಮಲತಾ ಅವರಿಗೆ ಕೇಂದ್ರದಲ್ಲಿ ಮಂತ್ರಿ ಮಾಡಿ, ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡೋದು ಅವರ ಲೆಕ್ಕಾಚಾರ ಎನ್ನಲಾಗಿದೆ. ಸುಮಲತಾ ಅವರು ಕಾಂಗ್ರೆಸ್ ಸಪೋರ್ಟ್‌ನಿಂದ ಗೆದ್ದಿದ್ದಾರೋ ಅಥವಾ ಅನುಕಂಪದ ಆಧಾರದಲ್ಲಿ ಗೆದ್ದಿದ್ದಾರೋ? ಇಲ್ಲಾ ಜೆಡಿಎಸ್ ನಾಯಕರ ಕೀಳುಮಟ್ಟದ ಬೈಗುಳದಿಂದ ಜನರ ಮನಸ್ಸು ಗೆದ್ದು ಜಯಶೀಲರಾದರೋ ಅನ್ನೋದು ಬೇರೆ ಮಾತು. ಆದ್ರೆ ಸುಮಲತಾ ಗೆದ್ದಾಗಿದೆ, ಇದನ್ನು ಹೇಗೆ ಬಿಜೆಪಿ ಬಲವರ್ಧನೆಗೆ ಬಳಸಿಕೊಳ್ಳಬೇಕು ಎಂದು ಚಿಂತಿಸುತ್ತಿರುವ ಬಿಜೆಪಿ ನಾಯಕರು ಸುಮಲತಾ ಅವರನ್ನು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಲು ಬಳಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದ್ದು, ಮಂತ್ರಿ ಸ್ಥಾನ ಪಕ್ಕಾ ಎನ್ನಲಾಗ್ತಿದೆ. ಈ ಬಗ್ಗೆ ಈಗಾಗಲೇ ಸಂದೇಶ ಕೇಂದ್ರ ನಾಯಕರ ಕಿವಿ ತಲುಪಿದ್ದು, ಆ ಕಡೆಯಿಂದ ರವಾನೆಯಾಗುವ ಸಿಗ್ನಲ್‌ಗಾಗಿ ಕಾಯಲಾಗ್ತಿದೆ ಎನ್ನಲಾಗಿದೆ.

ಆದರೆ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್. ಅಶೋಕ್, ಮೋದಿ ಸರ್ಕಾರದಲ್ಲಿ ಸುಮಲತಾ ಮಂತ್ರಿ ಆಗ್ತಾರೆ ಎಂಬ ಮಾತು ಕೇವಲ ವದಂತಿ ಎಂದು ಹೇಳಿದ್ದಾರೆ. ಆದರೆ ಕೇಂದ್ರ ಬಿಜೆಪಿ ನಾಯಕರ ಲೆಕ್ಕಾಚಾರ ಏನು? ಎಂಬುದು ಸದ್ಯದಲ್ಲೇ ನಡೆಯಲಿರುವ ಸಚಿವ ಸಂಪುಟ ರಚನೆ ವೇಳೆ ಸ್ಪಷ್ಟವಾಗಲಿದೆ.

Leave a Reply