ಸಿಂಗಂ ಅಣ್ಣಾ ಮಲೈ ಇಂದೇ ರಾಜೀನಾಮೆ? ರಾಜಕೀಯ ಎಂಟ್ರಿ ಬಗ್ಗೆ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕದ ಸಿಂಗಂ ಎಂದೇ ಹೆಸರು ಸಂಪಾದಿಸಿರುವ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದು ಖಚಿತವಾಗಿದ್ದು, ಇಂದೇ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಅಣ್ಣಾ ಮಲೈ ಅವರು ರಾಜಕೀಯ ಪ್ರವೇಶ ಮಾಡಲಿದ್ದು, ಆ ಕಾರಣಕ್ಕೆ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ತಮ್ಮ ಈ ನಿರ್ಧಾರಕ್ಕೆ ಕುಟುಂಬ ಹಾಗೂ ವೈಯಕ್ತಿಕ ಕಾರಣ ನೀಡಿದ್ದಾರೆ. ಈ ಬಗ್ಗೆ ಅವರು ಹೇಳಿದ್ದು ಹೀಗೆ…

‘ನಾನು ಇಲಾಖೆಗೆ ಸೇರಿ 9 ವರ್ಷ ಆಗಿದೆ. ಇಷ್ಟು ವರ್ಷಗಳ ಕಾಲ ಕುಟುಂಬಕ್ಕೆ ಸರಿಯಾದ ಸಮಯ ನೀಡಲು ಆಗಿಲ್ಲ. ಇನ್ನು ಮುಂದೆ ಕುಟುಂಬಕ್ಕೆ ಹೆಚ್ಚಿನ ಸಮಯ ನೀಡುತ್ತೇನೆ. ತಂದೆ, ತಾಯಿ, ಬಂಧು ಬಳಗ ಊರಲ್ಲಿ ಇದ್ದಾರೆ. ನಾನು ಇಲ್ಲಿದ್ದು ಏನು ಮಾಡಲಿ. ನಾನು ಸೇವೆಗೆ ಸೇರಿದ ಮೇಲೆ ಕೇವಲ ಒಂದೇ ಒಂದು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದೇನೆ.

ನಾನು ಯಾವ ರಾಜಕೀಯ ಪಕ್ಷಕ್ಕೂ ಸೇರುತ್ತಿಲ್ಲ. ಸದ್ಯ ಕೆಲವು ದಿನಗಳ ಕಾಲ ನಾನು ವಿಶ್ರಾಂತಿ ಪಡೆಯುತ್ತೇನೆ. ಹಿಮಾಲಯಕ್ಕೆ ಟ್ರೆಕ್ಕಿಂಗ್ ಹೋಗುತ್ತೇನೆ. ಮಗ ಓದುತ್ತಿದ್ದು, ಅವನ ಜೊತೆ ಇರುತ್ತೀನಿ.

ಕಳೆದ ಆರು ತಿಂಗಳ ಹಿಂದೆಯೇ ರಾಜೀನಾಮೆಗೆ ಪ್ಲಾನ್ ಮಾಡಿದ್ದೆ. ಆದ್ರೆ ಚುನಾವಣೆಗೂ ಮುನ್ನ ರಾಜೀನಾಮೆ ನೀಡುವುದು ಸರಿಯಲ್ಲ ಎಂದು ಈಗ ರಾಜೀನಾಮೆ ನೀಡುತ್ತಿದ್ದೇನೆ. 33-34 ವರ್ಷಕ್ಕೆ ಯಾರೂ ಈ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನಾನು ತೆಗೆದುಕೊಂಡಿದ್ದೇನೆ.

ಮಲೇಷ್ಯಾದಲ್ಲಿ ಕೆಲಸ ಮಾಡುತ್ತಿದ್ದೆ. ರಾತ್ರೋರಾತ್ರಿ ವಿಮಾನ ಹತ್ತಿ ಬಂದು ಯುಪಿಎಸ್ ಸಿ ಪರೀಕ್ಷೆ ಬರೆದು ಪೊಲೀಸ್ ಇಲಾಖೆ ಸೇರಿದೆ. ಕಳೆದ 9 ವರ್ಷಗಳಲ್ಲಿ ನನ್ನ ಕೆಲಸದ ಬಗ್ಗೆ ತೃಪ್ತಿ ಇದೆ. ಇನ್ನು ಎಷ್ಟು ದಿನ ಕೊಲೆ, ಸುಲಿಗೆ, ದರೋಡೆ ಬಗ್ಗೆ ಮಾತಾಡಲಿ. ಇದೇ ಜೀವನವಲ್ಲ. ಬೇರೆ ಜೀವನವೂ ಇದೆ.’

ಅಣ್ಣಾ ಮಲೈ ಅವರು ಇಂದು ಡಿಜಿಪಿ ನೀಲಮಣಿ ರಾಜು ಅವರಿಗೆ ರಾಜೀನಾಮೆ ಪತ್ರ ನೀಡಲಿದ್ದು, ಡಿಜಿಪಿ ಮೂಲಕ ರಾಜ್ಯ ಗೃಹ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ರವಾನೆಯಾಗಲಿದೆ. ಅಲ್ಲಿಂದ ಕೇಂದ್ರ ಯುಪಿಎಸ್ಸಿಗೆ ರಾಜೀನಾಮೆ ಪತ್ರ ಕಳುಹಿಸಲಾಗುತ್ತದೆ ಎಂಬ ವರದಿ ಬಂದಿದೆ.

Leave a Reply