ಲೋಕಸಭಾ ಚುನಾವಣೆ ಫಲಿತಾಂಶದಿಂದ ದಿಗ್ಭ್ರಮೆಯಾಗಿದೆ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಫಲಿತಾಂಶದಿಂದ ದಿಗ್ಭ್ರಮೆ, ಆಶ್ಚರ್ಯವಾಗಿದೆ. ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯರು ಸೋತಿರೋದು ಶಾಕ್ ತಂದಿದೆ… ಇದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ನೀಡಿರುವ ಪ್ರತಿಕ್ರಿಯೆ.

ಆಸ್ಟ್ರೇಲಿಯಾ ಪ್ರವಾಸದಿಂದ ಮರಳಿದ ನಂತರ ಲೋಕಸಭೆ ಚುನಾವಣೆ ಫಲಿತಾಂಶ ಕುರಿತಂತೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ ಸಚಿವರು, ಈ ಫಲಿತಾಂಶ ನಂಬಲು ಸಾಧ್ಯವಾಗುತ್ತಿಲ್ಲ ಎಂದರು. ಈ ವೇಳೆ ಅವರು ಹೇಳಿದ್ದಿಷ್ಟು…

‘ಕರ್ನಾಟಕದಲ್ಲಿನ ಲೋಕಸಭಾ ಚುನಾವಣೆ ಫಲಿತಾಂಶ ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ಬಂದಿದೆ. ದೇವೇಗೌಡ್ರು, ಮಲ್ಲಿಕಾರ್ಜುನ ಖರ್ಗೆ, ಮೊಯ್ಲಿ ಅವರಂತಹ ಹಿರಿಯ ನಾಯಕರ ಸೋಲು ನಿಜಕ್ಕೂ ದೊಡ್ಡ ಶಾಕ್. ಅವರ ಹೋರಾಟ ಎಂತಹದ್ದು ಎಂಬುದು ಚರಿತ್ರೆಯಲ್ಲಿ ಉಳಿದುಕೊಂಡಿದೆ. ಸಂಸತ್ ನಲ್ಲಿ 10 ಸಂಸದರು ಕಾಂಗ್ರೆಸ್ ನಿಂದ ಆಯ್ಕೆಯಾಗುತ್ತಿದ್ದರು. ಈಗ ಕೇವಲ ಒಬ್ಬರು ಮಾತ್ರ ಆಯ್ಕೆಯಾಗಿದ್ದಾರೆ. ಈ ಫಲಿತಾಂಶ ನಂಬಲು ಸಾಧ್ಯವಾಗುತ್ತಿಲ್ಲ. ಎಲ್ಲಿ ತಪ್ಪಾಗಿದೆ? ಏನಾಗಿದೆ? ಎಂದು ಹೇಳುವುದು ಕಷ್ಟವಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ನನ್ನ ಸಹೋದರ ಒಬ್ಬನೇ ಗೆದ್ದಿರೋದು ನನಗೆ ಖುಷಿಯಾಗಿಲ್ಲ. ದೇವೇಗೌಡರು, ಖರ್ಗೆಯಂತಹ ಹಿರಿಯ ನಾಯಕರು ಸಂಸತ್ತಿನಲ್ಲಿಲ್ಲದೇ ಸುರೇಶ್ ಒಬ್ಬ ಇದ್ದು ಏನು ಪ್ರಯೋಜನ?

ಜನ ಪ್ರೀತಿ ವಿಶ್ವಾಸದಿಂದ ಮತಹಾಕಿ ಅವನನ್ನು ಉಲಿಸಿಕೊಂಡಿದ್ದಾರೆ. ಅದು ಬೇರೆ ವಿಚಾರ. ಅವನಿಗೂ 3 ಲಕ್ಷ ಅಂತರದ ಗೆಲುವು ನಿರೀಕ್ಷೆ ಮಾಡಲಾಗಿತ್ತು. ನಾನು ಕ್ಷೇತ್ರಕ್ಕೆ ಹೋಗದಿದ್ದರೂ ದಳದ ಹಾಕೂ ಕಾಂಗ್ರೆಸ್ ಎಲ್ಲ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಕೂಡ ನಮ್ಮ ಕ್ಷೇತ್ರದಲ್ಲಿ ಸುರೇಶ್ ಗೆ ಬೆಂಬಲಿಸಿದ್ದಾರೆ. ಆದರೆ ರಾಜ್ಯದ ಫಲಿತಾಂಶ ನಂಬಲು ಸಾಧ್ಯವಾಗುತ್ತಿಲ್ಲ. ಈ ಫಲಿತಾಂಶದ ಕುರಿತಾಗಿ ಎಲ್ಲೆಲ್ಲಿ ಏನೇನಾಗಿದೆ ಎಂಬುದನ್ನು ಇನ್ನಷ್ಟೇ ನಾವು ವಿಮರ್ಷೆ ಮಾಡ, ಚರ್ಚಿಸಬೇಕಿದೆ.

ಮೈತ್ರಿ ವಿಚಾರವಾಗಿ ನಾನು ಸದ್ಯಕ್ಕೆ ಏನನ್ನೂ ಮಾತನಾಡುವುದಿಲ್ಲ. ಹೀಗಾಗಿ ಗಾಂಧಿಜೀ ಹೇಳಿದಂತೆ ಕಣ್ಮಿಗೆ ಬಟ್ಟೆ ಕಟ್ಟಿ, ಕಿವಿಗೆ ಹತ್ತಿ ಇಟ್ಟು, ಬಾಯಿಗೆ ಬೀಗ ಹಾಕಿಕೊಂಡು ಇರುವಂತೆ ಇದ್ದೀನಿ. ನಾನು ಸರ್ಕಾರದ ಪರವಾಗಿದ್ದೇನೆ. ನಾವು ಯಾವ ಮಾತು ನೀಡಿದ್ದೇವೋ ಆ ಮಾತು ಉಳಿಸಿಕೊಳ್ಳಲು ಬದ್ಧರಾಗಿದ್ದೇವೆ.’

ಇನ್ನು ಯಡಿಯೂರಪ್ಪನವರ ಆಪರೇಷನ್ ಕಮಲದ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಯಡಿಯೂರಪ್ಪನವರ ಕೈಯಲ್ಲಿ ಏನೇನು ಮಾಡಲು ಸಾಧ್ಯವೋ ಅವರು ಮಾಡಲಿ ನೋಡೋಣ’ ಎಂದರು. ಇನ್ನು ಲಿಂಗಾಯತ ಮತಗಳು ಬಿದ್ದಿಲ್ಲ ಎಂಬ ಪ್ರಶ್ನೆಗೆ, ‘ಸದ್ಯಕ್ಕೆ ನಾನು ಯಾವುದೇ ನಾಯಕರು, ಧರ್ಮದ ವಿಚಾರವಾಗಿ ನಾನು ಮಾತನಾಡುವಂತಿಲ್ಲ. ಯಾರೂ ಕೂಡ ಮಾಧ್ಯಮಗಳ ಮುಂದೆ ಮಾತನಾಡಬಾರದು ಎಂದು ನಮಗೆ ಆದೇಶ ಬಂದಿದೆ. ಹೀಗಾಗಿ ಈ ವಿಚಾರಗಳ ಬಗ್ಗೆ ನಾನು ಉತ್ತರಿಸುವುದಿಲ್ಲ’ ಎಂದರು.

ಜಿಂದಾಲ್ ಸಂಸ್ಥೆಗೆ ಭೂಮಿ ಕ್ರಯ ವಿಚಾರ

ಇನ್ನು ಜಿಂದಾಲ್ ಸಂಸ್ಥೆಗೆ ಮೂರುವರೆ ಸಾವಿರ ಎಕರೆ ಜಮೀನು ನೀಡುವ ವಿಚಾರವನ್ನು ಸಮರ್ಥಿಸಿಕೊಂಡ ಸಚಿವರು ಹೇಳಿದಿಷ್ಟು…

‘ಈ ವಿಚಾರವಾಗಿ ಬಿಜೆಪಿ ಅವಧಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಜಿಂದಾಲ್ ಗೆ ಮೂರು ಸಾವಿರಾರು ಎಕರೆ ಜಮೀನು ನೀಡೋ ನಿರ್ಣಯ ಸರಿಯಾಗಿದೆ. ಈ ಹಿಂದೆಯೇ ಕ್ಯಾಬಿನೆಟ್ ಗೆ ಬರಬೇಕಿತ್ತು. ಇದರಿಂದ ಉದ್ಯೋಗ ಸೃಷ್ಟಿ, ಬಂಡವಾಳ ಹೂಡಿಕೆ, ಮೂಲಭೂತ ಸೌಕರ್ಯ ಸೃಷ್ಟಿಗೆ ಅನುಕೂಲವಾಗಲಿದೆ. ಹೀಗಾಗಿ ಇಂತಹ ನಿರ್ಣಯಗಳು ಅಗತ್ಯ.

ಈ ಹಿಂದೆ ಇನ್ಫೋಸಿಸ್ ಕಂಪನಿಗೆ ಮೈಸೂರಲ್ಲಿ ಜಮೀನು ನೀಡಿದಾಗಲೂ ಆಕ್ಷೇಪ ವ್ಯಕ್ತವಾಗಿತ್ತು. ಆದ್ರೆ ಇದೀಗ ಆ ಸಂಸ್ಥೆಯಿಂದ ಉದ್ಯೋಗ ಸೃಷ್ಟಿಯಾಗಿದೆ. ಹಾಗೆಯೇ ಒಮ್ಮೊಮ್ಮೆ ಒಂದೊಂದು ಇಂತಹ ನಿರ್ಣಯಗಳನ್ನು ಮಾಡಬೇಕಾಗುತ್ತೆ.’

Leave a Reply