ಪಶ್ಚಿಮ ಬಂಗಾಳದಲ್ಲಿ ದೀದಿಗೆ ಗಾಯದ ಮೇಲೆ ಬರೆ ಎಳೆದ ಬಿಜೆಪಿ!

ಡಿಜಿಟಲ್ ಕನ್ನಡ ಟೀಮ್:

ಪಶ್ಚಿಮ ಬಂಗಾಳದಲ್ಲಿ ದೀದಿಯ 40 ಶಾಸಕರು ಬಿಜೆಪಿ ಸೇರಲು ಸಿದ್ಧರಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನವಣಾ ಪ್ರಚಾರದ ವೇಳೆ ಎಚ್ಚರಿಕೆ ನೀಡಿದ್ದರು. ಅದರಂತೆ ಕಳೆದ ಎರಡು ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಆಪರೇಷನ್ ಕಮಲ ಭರ್ಜರಿಯಾಗಿ ನಡೆಯುತ್ತಿದ್ದು, ಟಿಎಂಸಿಯ ಮೂವರು ಶಾಸಕರು ಹಾಗೂ 50ಕ್ಕೂ ಹೆಚ್ಚು ಕಾರ್ಪೊರೇಟರ್ ಗಳು ಕಮಲ ಪಕ್ಷಕ್ಕೆ ಹಾರಿದ್ದಾರೆ.​ ಇದರೊಂದಿಗೆ 2021ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕೇಸರಿ ಪಡೆ ಪಕ್ಷ ಬಲವರ್ಧನೆಗೆ ಮುಂದಾಗಿದೆ.

ಎಡಪಕ್ಷಗಳ ಪ್ರಾಬಲ್ಯ ಕುಸಿಯುತ್ತಿದ್ದಂತೆ ಅಲ್ಲಿನ ಕಾರ್ಯಕರ್ತರು ಮಮತಾ ಬ್ಯಾನರ್ಜಿ ವಿರುದ್ಧ ಸೇಡು ತೀರಿಸಿಕೊಳ್ಳಲು ಬಿಜೆಪಿಗೆ ಜೈಕಾರ ಹಾಕುತ್ತಿದ್ದು, ಅದರ ಪರಿಣಾಮವಾಗಿ ಲೋಕಸಭೆ ಚುನಾವಣೆಯಲ್ಲಿ ಕಮಲ ಪಡೆ ಪಶ್ಚಿಮ ಬಂಗಾಳದಲ್ಲಿ ತನ್ನ ಹೆಜ್ಜೆ ಗುರುತು ಹಾಕಿದೆ. ಅದರೊಂದಿಗೆ ದೇಶದ ತುಂಬ ಕೇಸರಿಮಯ ಮಾಡಲು ಸರ್ವಸನ್ನದ್ಧವಾಗಿದೆ.

ಟಿಎಂಸಿಯ ಬಿಜ್​ಪುರ ಶಾಸಕ ಸುಬ್ರಾನ್ಸುರಾಯ್ ಹಾಗೂ ತುಷಾರ್​ ಕಾಂತಿ ಮತ್ತು ಕಮ್ಯುನಿಷ್ಟ್​ ಪಾರ್ಟಿ ಆಫ್ ಇಂಡಿಯಾ ಶಾಸಕ ದೇಬೇಂದ್ರ ನಾಥ್​ ರಾಯ್​ ಬಿಜೆಪಿ ಸೇರಿದ್ದಾರೆ. ಜೊತೆಗೆ ಹಲಿಶಹರ್ ಕಾಂಚ್ರಾಪಾರದ 17 ಮಂದಿ ಮುನ್ಸಿಪಲ್ ಮೆಂಬರ್ ಹಾಗೂ ನೈಹಾತಿ ಮುನ್ಸಿಪಲ್​ನಲ್ಲಿ 22 ಮಂದಿ ಸದಸ್ಯರು ಸೇರಿ ಒಟ್ಟು 56 ಮಂದಿ ಕಮಲ ಹಿಡಿದಿದ್ದಾರೆ. ಮೋದಿ ಚುನಾವಣೆ ವೇಳೆ ನೀಡಿದ್ದ ಹೇಳಿಕೆ ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ವಾರದಲ್ಲೇ ಫಸಲು ನೀಡಿದೆ. ಇದೀಗ ಪಾಲಿಕೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿ ಟಿಎಂಸಿ ಹಿಡಿದಿರುವ ಅಧಿಕಾರವನ್ನು ಕಿತ್ತುಕೊಳ್ಳಲು ಸ್ಕೆಚ್​ ಹಾಕಲಾಗಿದೆ.

ಟಿಎಂಸಿ ಶಾಸಕರನ್ನು ಪಕ್ಷಕ್ಕೆ ಸೆಳೆದ ಬಳಿಕ ಮಾತನಾಡಿರುವ ಬಿಜೆಪಿ ರಾಜ್ಯ ಉಸ್ತುವಾರಿ ವಿಜಯ್ ವರ್ಗಿಯ ಬಿಜೆಪಿಗೆ ಶಾಸಕರು ಬಂದರೂ ನಾವು ದಿದಿ ಸರ್ಕಾರವನ್ನು ಉರುಳಿಸುವ ಕೆಲಸ ಮಾಡೋದಿಲ್ಲ. ಆದ್ರೆ ಮುಂಬರುವ 2021 ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಎರಡು ಭಾಗ ಬಿಜೆಪಿ ಶಾಸಕರಿರುವ ಹಾಗೆ ಯೋಜನೆ ರೂಪಿಸುವ ಉದ್ದೇಶ ಹೊಂದಿದ್ದೇವೆ ಎಂದಿದ್ದಾರೆ. ಜೊತೆಗೆ ಪಶ್ಚಿಮಬಂಗಾಳದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಮಲಪಡೆ ಅತ್ಯುತ್ತಮ ಸಾಧನೆ ಮಾಡಿರೋ ಮಾತನಾಡಿರುವ ಅವರು ಕಳೆದ ಮೂರು‌ ವರ್ಷಗಳಿಂದ ನಾವು ಈ ಫಲಿತಾಂಶಕ್ಕಾಗಿ ಕಾಯುತ್ತಿದ್ದೆವು ಎಂದಿದ್ದಾರೆ.

ಪಂಜಾಬ್, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರ ಸೇರಿದಂತೆ ಕೆಲವೇ ಕೆಲವು ರಾಜ್ಯಗಳಲ್ಲಿ ಬಿಜೆಪಿಯ ಝಂಡ ಹಾರಿಸಲು ಸಾಧ್ಯವಾಗಿಲ್ಲ. ಇನ್ನುಳಿದ ಎಲ್ಲಾ ಕಡೆ ಕಮಲ ಕೇಕೆ ಹಾಕುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎರಡನೇ ಬಾರಿ ಅಧಿಕಾರ ಹಿಡಿದಿದ್ದು, ದೇಶದ ಮೂಲೆ ಮೂಲೆಯಲ್ಲೂ ಕಮಲದ ಫಸಲು ತೆಗೆಯುವ ಉಮ್ಮಸ್ಸಿನಲ್ಲಿದ್ದಾರೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಆಪರೇಷನ್ ನಡೆಸಿ ಅಧಿಕಾರ ಹಿಡಿಯುವುದು ಅಮಿತ್ ಶಾ ಹಾಗೂ ನರೇಂದ್ರ ಮೋದಿ ಅವರ ಉದ್ದೇಶ. ಒಮ್ಮೆ ಪಕ್ಷ ಅಧಿಕಾರ ಹಿಡಿದುಬಿಟ್ಟರೆ ಮುಂದೆ ಅಧಿಕಾರ ಹೋದರೂ ಮತ್ತೆ ಅಧಿಲಾರಕ್ಕೆ ಬರಬಹುದು. ಅದಕ್ಕಿಂತ ಮುಖ್ಯವಾಗಿ ನೆಲೆ ಇಲ್ಲದ ಕಡೆ ಒಮ್ಮೆ ನೆಲೆ ಕಂಡುಕೊಂಡರೆ ಜನರ ಮನಸ್ಸಿನಲ್ಲಿ ಸ್ಥಾನ ಸಿಗುತ್ತೆ ಅನ್ನೋ ಲೆಕ್ಕಾಚಾರದಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

Leave a Reply