ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ನಿಧನ! ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಡಿಜಿಟಲ್ ಕನ್ನಡ ಟೀಮ್:

ಬಹುಅಂಗಾಂಗ ವೈಫಲ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಗತಿಪರ ಚಿಂತಕ, ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಸೋಮವಾರ ವಿಧಿವಶರಾಗಿದ್ದಾರೆ.

ಸಾಹಿತ್ಯ, ನಾಟಕ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ಅಪಾರವಾದ ಕೊಡುಗೆ ನೀಡಿದ್ದ ಕಾರ್ನಾಡರ ಅಗಲಿಕೆಗೆ ಸಾಹಿತ್ಯ, ರಾಜಕೀಯ, ಸಿನಿಮಾ, ನಾಟಕ ರಂಗದ ಗಣ್ಯರು ಹಾಗೂ ಅವರ ಅಬಿಮಾನಿಗಳು ಕಂಬನಿ ಮಿಡಿದಿದ್ದಾರೆ. ಇನ್ನು ಸಂತಾಪ ಸೂಚಕವಾಗಿ ಇಂದು ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಮೂರು ದಿನಗಳ ಕಾಲ ಶೋಕಾಚರಣೆ ನಡೆಸಲು ಸರ್ಕಾರ ತೀರ್ಮಾನಿಸಿದ್ದು, ಸರ್ಕಾರಿ ಕಾರ್ಯಕ್ರಮಗಳು ರದ್ದುಗೊಂಡಿವೆ.

81 ವರ್ಷದ ಗಿರೀಶ್ ಕಾರ್ನಾಡರು ಅನೇಕ ನಾಟಕಗಳನ್ನು ರಚಿಸಿದ್ದಾರೆ. ಇವರ ನಾಟಕಗಳು ಬೇರೆ ಬೇರೆ ಭಾಷೆಗಳಲ್ಲಿ ಭಾಷಾಂತರವಾಗಿ ಪ್ರದರ್ಶನಗಳನ್ನು ಕಂಡು ಖ್ಯಾತಿ ಗಳಿಸಿವೆ. ಇನ್ನು ಸಿನಿಮಾ ಕ್ಷೇತ್ರದಲ್ಲಿ ಚಿತ್ರಕಥೆ, ನಿರ್ದೇಶನ ಹಾಗೂ ಅಭಿನಯಗಳ ಮೂಲಕವೂ ಅನೇಕ ಸಾಧನೆ ಮಾಡಿರುವ ಕಾರ್ನಾಡರು, ಫಿಲ್ಮ್ ಫೇರ್, ರಾಷ್ಟ್ರ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ ಪುರಸ್ಕಾರಗಳನ್ನು ಪಡೆದಿದ್ದಾರೆ. ಇನ್ನು ಅನೇಕ ಆಂಗ್ಲ ಸಾಹಿತ್ಯಗಳನ್ನು ಅನುವಾದ ಮಾಡಿ ಸೈ ಎನಿಸಿಕೊಂಡಿರುವ ಕಾರ್ನಾಡರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಪ್ರಮಾಣದ ಕೊಡುಗೆ ನೀಡಿ ಜ್ಞಾನಪೀಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ, ಪದ್ಮ ಶ್ರೀ, ಪದ್ಮ ಭೂಷಣ ಪ್ರಶಸ್ತಿಗಳ ಗೌರವ ಪಡೆದಿದ್ದಾರೆ.

ಗಿರೀಶ್ ಕಾರ್ನಾಡರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದು, ಅವುಗಳು ಹೀಗಿವೆ…

ಜ್ಞಾನಪೀಠ ಪ್ರಶಸ್ತಿ ವಿಜೇತ, ಹಿರಿಯ ಸಾಹಿತಿ ಹಾಗೂ ಮೇರು ಕಲಾವಿದರಲ್ಲೊಬ್ಬರಾದ ಗಿರೀಶ್ ಕಾರ್ನಾಡ್ ಅವರು ಇಂದು ವಿಧಿವಶರಾಗಿರುವುದು ಕನ್ನಡ ಸಾಹಿತ್ಯ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ.

  • ದರ್ಶನ್ ತೂಗುದೀಪ, ನಟ

‘ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದ ಸಾಹಿತಿ, ಪ್ರಗತಿಪರ ಚಿಂತಕ ಗಿರೀಶ್ ಕಾರ್ನಾಡ್ ಅವರು ಇಂದು ವಿಧಿವಶರಾಗಿದ್ದಾರೆ ಎಂಬ ಸುದ್ದಿ ಕೇಳಿ ಆಘಾತವಾಯಿತು. ಅವರ ಆಲೋಚನೆಗಳು, ಚಿಂತನೆಗಳು ನಮ್ಮ ಸಮಾಜಕ್ಕೆ ಅಗತ್ಯವಾಗಿದ್ದವು. ಸಾಹಿತ್ಯ, ನಾಟಕ, ಚಲನಚಿತ್ರ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕಾರ್ನಾಡರು, ಈ ಮೂರು ರಂಗಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು. ಕೇವಲ ಬರವಣಿಗೆ ಮಾತ್ರವಲ್ಲ, ಅಭಿನಯದಲ್ಲೂ ಅವರು ಸಾಕಷ್ಟು ಹೆಸರು ಮಾಡಿದ್ದವರು. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆ ಹಾಗೂ ಹಿಂದಿ ಚಿತ್ರಗಳನ್ನೂ ನಟಿಸಿ ವಿಭಿನ್ನ ನಟ ಎಂಬ ಖ್ಯಾತಿ ಪಡೆದವರು. ಹೀಗೆ ನಮ್ಮ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರುವ ಕಾರ್ನಾಡರು ಸದಾ ನಮ್ಮೊಂದಿಗೆ ಉಳಿಯಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ನೋವನ್ನು ಅಭಿಮಾನಿಗಳು, ಕುಟುಂಬ ಸದಸ್ಯರಿಗೆ ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ.’

  • ಡಿಕೆ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ

Leave a Reply