ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಟೀಂ ಇಂಡಿಯಾದ ಹಠವಾದಿ ವಿದಾಯ!

ಡಿಜಿಟಲ್ ಕನ್ನಡ ಟೀಮ್:

ಯುವರಾಜ್ ಸಿಂಗ್! ಭಾರತ ಕ್ರಿಕೆಟ್ ಕಂಡ ಅತ್ಯಂತ ಶ್ರೇಷ್ಠ ಸೀಮಿತ (ಏಕದಿನ ಹಾಗೂ ಟಿ20) ಓವರ್ ಮಾದರಿಯ ಆಟಗಾರ. ಮೈದಾನದಲ್ಲಿ ಈತನದ್ದು ಒಂದೇ ಹಠ ಅದು ತಂಡವನ್ನು ಗೆಲುವಿನ ದಡ ಸೇರಿಸುವುದು. ಅದಕ್ಕಾಗಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಯಾವುದೇ ವಿಭಾಗದಲ್ಲೂ ಬೇಕಾದರೂ ಯಾವುದೇ ಸಂದರ್ಭದಲ್ಲೂ ತಂಡದ ನೆರವಿಗೆ ಧಾವಿಸುವ ಆಟಗಾರ.

ಭಾರತೀಯ ಕ್ರಿಕೆಟ್ ನ ಫೀಲ್ಡಿಂಗ್ ಎಂದರೆ ಮೂಗು ಮೂರಿಯುತ್ತಿದ್ದ ಸಂದರ್ಭದಲ್ಲಿ ತಂಡಕ್ಕೆ ಎಂಟ್ರಿ ಕೊಟ್ಟ ಯುವರಾಜ್ ತಂಡಕ್ಕ ಫೀಲ್ಡಿಂಗ್ ನಲ್ಲಿ ಹೊಸ ಮಾನದಂಡವನ್ನೇ ರೂಪಿಸಿದರು. ಯುವರಾಜ್ ಸಿಂಗ್ ಅವರ ಅತ್ಯುತ್ತಮ ಫೀಲ್ಡಿಂಗ್ ಸಾಮರ್ಥ್ಯದ ಸ್ಪೂರ್ಥಿಯೇ ಇಂದು ಭಾರತ ಕ್ರಿಕೆಟ್ ತಂಡದಲ್ಲಿ ಹೆಚ್ಚು ಕಡಿಮೆ  ಎಂಟರಿಂದ ಹತ್ತು ಆಟಗಾರರು ಚುರುಕಿನ ಫೀಲ್ಡಿಂಗ್ ಮಾಡಬಲ್ಲ ಆಟಗಾರರು ಇರುವಂತಾಗಿದೆ. ಬ್ಯಾಟಿಂಗ್ ನಲ್ಲಿ 20 ರನ್ ಕಡಿಮೆ ಗಳಿಸಿದರೂ ಅತ್ಯುತ್ತಮ ಫೀಲ್ಡಿಂಗ್ ಮೂಲಕ 40 ರನ್ ಉಳಿಸಬಹುದು ಎಂಬುದನ್ನು ಹೇಳಿಕೊಟ್ಟ ಆಟಗಾರ.

ಯುವರಾಜ್ ಸಿಂಗ್ ಮಾದೈನದ ಒಳಗೆ ಹಾಗೂ ಹೊರಗೆ ಮೋಜುಗಾರ. ಆ ಮೋಜುತನದ ನಡುವೆಯೂ ಆತನಲ್ಲಿ ಒಬ್ಬ ಹಠವಾದಿ ಇದ್ದಾನೆ. ಎದುರಾಳಿ ತಂಡ ಯಾವುದೇ ಇರಲಿ, ಯಾವುದೇ ಪಿಚ್ ಆಗಿರಲಿ, ಪಂದ್ಯ ಎಂತಹುದು ಪರಿಸ್ಥಿತಿಯಲ್ಲಿರಲಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಬಲ್ಲ ಬೆಸ್ಟ್ ಫಿನಿಶರ್ ಎಂಬ ಹೆಗ್ಗಳಿಕೆಯೂ ಯುವರಾಜ್ ಸಿಂಗ್ ಅವರದು. ಇವರ 19 ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಹೂವಿನ ಹಾಸಿನಿಂದ ಕೂಡಿರಲಿಲ್ಲ. ಅವರ ಈ ಪಯಣ ರೋಚಕತೆ ಹಾಗೂ ಹೋರಾಟದಿಂದ ಕೂಡಿದ್ದು.

ಕಿರಿಯರ ಮಟ್ಟದ ಕ್ರಿಕೆಟ್ ನಲ್ಲೇ ತನ್ನ ಛಾಪು ಮೂಡಿಸಿ ಗಮನ ಸೆಳೆದ ಯುವರಾಜ್ ಸಿಂಗ್ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿ ಮಿಂಚಿದರು. ಅಲ್ಲಿಂದ ನೇರವಾಗಿ ಟೀಂ ಇಂಡಿಯಾ ಬಾಗಿಲು ತಟ್ಟಿದ ಯುವರಾಜ್, ಆರಂಭದಲ್ಲಿ ಬ್ಯಾಟಿಂಗ್ ಗಿಂತ ಹೆಚ್ಚಾಗಿ ಫೀಲ್ಡಿಂಗ್ ಮೂಲಕ ತಂಡದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡರು. ಕ್ರಮೇಣ ಭಾರತದ ಮಧ್ಯಮ ಕ್ರಮಾಂಕದ ಆಧಾರಸ್ತಂಭವಾದ ಯುವಿ, ಮಹೇಂದ್ರ ಸಿಂಗ್ ಧೋನಿ ಜತೆ ಬೆಸ್ಟ್ ಫಿನಿಶರ್ ಆಗಿ ಬೆಳೆದರು. ಕ್ರಮೇಣ ಸ್ಪಿನ್ ಬೌಲಿಂಗ್ ಮೂಲಕವೂ ಗಮನ ಸೆಳೆದ ಯುವಿ ಆಲ್ರೌಂಡರ್ ಆದರು.

ಯುವಿ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದರಾದರೂ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಆದರೆ ಯುವರಾಜ್ ಸಿಂಗ್ ಇಲ್ಲದ ಏಕದಿನ ತಂಡ ದುರ್ಬಲವಾಗಿ ಕಾಣುವಷ್ಟರ ಮಟ್ಟಿಗೆ ತಮ್ಮ ಪ್ರಭುತ್ವ ಸಾಧಿಸಿದರು.

ನಂತರ ಚುಟುಕು ಮಾದರಿಯ ಕ್ರಿಕೆಟ್ ಯುಗ ಆರಂಭವಾಗುತ್ತಿದ್ದಂತೆ 2007ರ ಟಿ20 ವಿಶ್ವಕಪ್ ನಲ್ಲಿ ಯುವಿ ಪ್ರದರ್ಶನ ಆತನ ಸಾಮರ್ಥ್ಯವನ್ನು ಬೇರೊಂದು ಹಂತಕ್ಕೆ ಕೊಂಡೋಯಿತು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಒಂದೇ ಓವರ್ ಗೆ 6 ಸಿಕ್ಸರ್, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 30 ಎಸೆತಗಳಲ್ಲಿ 70ಕ್ಕೂ ಹೆಚ್ಚು ರನ್ ಯುವಿ ಟಿ20 ಕ್ರಿಕೆಟ್ ನಲ್ಲಿ ಆಡಿದ ಅವಿಸ್ಮರಣೀಯ ಇನಿಂಗ್ಸ್ ಗಳು.

ಹೀಗೆ ಅತ್ಯಂತ ಯಶಸ್ವಿಯಾಗಿ ಸಾಗುತ್ತಿದ್ದ ಯುವರಾಜ್ ಸಿಂಗ್ ಗೆ 2011ರ ವಿಶ್ವಕಪ್ ಆರಂಭಕ್ಕೂ ಮುನ್ನ ಮಹಾಮಾರಿ ಕ್ಯಾನ್ಸರ್ ಅತಿ ದೊಡ್ಡ ಶಾಕ್ ನೀಡಿತು. ಎಂತಹ ಗಟ್ಟಿಗನನ್ನು ಎದೆಗುಂದಿಸುವಂತೆ ಮಾಡುವ ಕ್ಯಾನ್ಸರ್ ಯುವಿ ಬಾಳಲ್ಲಿ ದೊಡ್ಡ ಸವಾಲನ್ನೇ ಎಸೆಯಿತು. ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದ ಯುವರಾಜ್ ಸಿಂಗ್ ಅನುಭವದ ಆಧಾರದ ಮೇಲೆ ತಂಡದಲ್ಲಿ ಸ್ಥಾನ ಪಡೆದರಾದರು. ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲೇಬೇಕು ಎಂಬ ಒತ್ತಡ ಒಂದುಕಡೆಯಾದರೆ ಜೀವವನ್ನೇ ನುಂಗಿಹಾಕಬಲ್ಲ ಕ್ಯಾನ್ಸರ್ ಮತ್ತೊಂದು ಕಡೆ. ಇಂತಹ ಪರಿಸ್ಥಿತಿಯಲ್ಲಿ ಧೃತಿಗೆಡದ ಯುವಿ ತನ್ನ ಆತ್ಮಸ್ಥೈರ್ಯವನ್ನು ಕಾಪಾಡಿಕೊಂಡರು. ತಂಡದ ಸಹ ಆಟಗಾರರಿಗೂ ಟೂರ್ನಿಯ ಕೆಲವು ಪಂದ್ಯಗಳ ನಂತರವೇ ಯುವಿಯ ಆರೋಗ್ಯದ ಸ್ಥಿತಿಯ ಬಗ್ಗೆ ಮಾಹಿತಿ ಸಿಕ್ಕಿತು.

ವಿಶ್ವಕಪ್ ಟೂರ್ನಿಯಲ್ಲಿ ತನ್ನ ಸರ್ವಸ್ವವನ್ನು ಪಣಕ್ಕಿಟ್ಟ ರೀತಿಯಲ್ಲಿ ಆಡಿದ ಯುವರಾಜ್ ಸಿಂಗ್ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಮಿಂಚಿದರು. ಭಾರತ ವಿಶ್ವಕಪ್ ಗೆಲುವಿನ ರೂವಾರಿಗಳಲ್ಲಿ ಒಬ್ಬರಾದರು. ಅಷ್ಟೇ ಅಲ್ಲ, ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಲ್ಲದೇ ಇತರರಿಗೆ ಸ್ಫೂರ್ತಿಯಾಗಿ ನಿಂತರು. ನಂತರ ಕ್ಯಾನ್ಸರ್ ಚಿಕಿತ್ಸೆಗೆ ಒಳಪಟ್ಟ ಯುವರಾಜ್ ದೈಹಿಕವಾಗಿ ಬಳಲಿ ಬೆಂಡಾದರು. ಅಲ್ಲಿಗೆ ಯುವಿ ಕ್ರಿಕೆಟ್ ಬದುಕು ಮುಗಿದೇ ಹೋಯಿತು ಎಂದು ಎಲ್ಲರು ಭಾವಿಸಿದರು. ಆದರೆ ಅಷ್ಟು ಸುಲಭವಾಗಿ ಸೋಲನ್ನು ಒಪ್ಪದ ಯುವಿ ಕ್ಯಾನ್ಸರ್ ನಿಂದ ಗುಣಮುಖರಾದ ನಂತರ ಮತ್ತೆ ಪ್ಯಾಡ್ ಕಟ್ಟಿ ಮೈದಾನಕ್ಕಿಳಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಅಗತ್ಯವಿರುವ ಫಿಟ್ನೆಸ್ ಅನ್ನು ಮತ್ತೆ ಕಂಡುಕೊಂಡರು. ದೇಶಿ ಪಂದ್ಯಗಳನ್ನಾಡಿ ಮತ್ತೆ ತಮ್ಮ ಫಾರ್ಮ್ ಅನ್ನು ತೋರಿಸಿ ತಂಡಕ್ಕೆ ವಾಪಸ್ಸಾದರು. ಇದು ಯುವಿ ತಮ್ಮ ಜೀವನದಲ್ಲಿ ಸಾಧಿಸಿದ ಅತಿ ದೊಡ್ಡ ಯಶಸ್ಸು ಎಂದೇ ಪರಿಗಣಿಸಬಹುದು. ನಂತರದ ದಿನಗಳಲ್ಲಿ ತಂಡದಲ್ಲಿ ಯುವ ಆಟಗಾರರ ಪೈಪೋಟಿ ನಡುವೆ ಯುವಿ ಸ್ಥಾನ ಕಳೆದುಕೊಂಡರೂ ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ಸಂದರ್ಭದಲ್ಲೂ ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳಬಾರದು ಎಂಬ ಸಂದೇಶವನ್ನು ಸಾರಿರುವ ಯುವಿ ಇತರರಿಗೆ ಮಾದರಿಯಾಗಿ ನಿಂತಿದ್ದಾರೆ.

ಸದ್ಯ ಯು ವಿ ಕ್ಯಾನ್ (ನಿಮ್ಮಿಂದ ನಮ್ಮಿಂದ ಸಾಧ್ಯ) ಎಂಬ ಸಂಸ್ಥೆ ಆರಂಭಿಸಿರುವ ಯುವರಾಜ್, ತಮ್ಮ ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಪೀಡಿತರ ನೆರವಿಗಾಗಿ ಶ್ರಮಿಸುವುದಾಗಿ ಹೇಳಿಕೊಂಡಿದ್ದಾರೆ. ಸರಿಸುಮಾರು ಎರಡು ದಶಕಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿ ಮಾದರಿಯಾಗಿ ನಿಂತಿರುವ ನಮ್ಮೆಲ್ಲರ ನೆಚ್ಚಿನ ಯುವರಾಜನಿಗೆ ಆಲ್ ದ ಬೆಸ್ಟ್…!

Leave a Reply