ಎಸ್ ಸಿಒ ಸಭೆ: ಪಾಕಿಸ್ತಾನದ ವಿರುದ್ಧ ದಾಳಿ ಬೇಡ ಎಂದು ಚೀನಾ ಸಲಹೆ, ಮೋದಿ ನಡೆ ಮೇಲೆ ಎಲ್ಲರ ಕಣ್ಣು!

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಮಂಗಳವಾರದಿಂದ ಆರಂಭವಾಗುತ್ತಿರುವ ಶಾಂಘೈ ಸಹಕಾರ ಸಂಸ್ಥೆ (ಎಸ್ ಸಿಒ) ಸಭೆಯಲ್ಲಿ ಭಾಗವಹಿಸುತ್ತಿದ್ದು, ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದು ಮೊದಲ ಬಹುಪಕ್ಷೀಯ ರಾಷ್ಟ್ರಗಳ ಸಭೆಯಾಗಿದೆ. ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಲೆಗುಂಪು ಮಾಡುವ ಮೂಲಕ ಭಯೋತ್ಪಾದನೆ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವ ಪ್ರಯತ್ನದಲ್ಲಿರುವ ಮೋದಿಗೆ ಈ ಸಭೆ ಕೂಡ ಒಂದು ಅತ್ಯುತ್ತಮ ವೇದಿಕೆಯಾಗಿತ್ತು. ಆದರೆ, ಈ ಸಭೆಯನ್ನು ಪಾಕಿಸ್ತಾನದ ವಿರುದ್ಧ ಮಾತಿನ ದಾಳಿ ಮಾಡಲು ವೇದಿಕೆಯಾಗಿ ಬಳಸಿಕೊಳ್ಳಬೇಡಿ ಎಂದು ಚೀನಾ ಭಾರತಕ್ಕೆ ಸಲಹೆ ನೀಡಿದ್ದು, ಮೋದಿ ಈ ಸಭೆಯಲ್ಲಿ ಯಾವ ಹೆಜ್ಜೆ ಇಡಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಬಿಷ್ಕೆಕ್ ನಲ್ಲಿ ನಡೆಯಲಿರುವ 19ನೇ ಶಾಂಘೈ ಸಹಕಾರ ಸಂಸ್ಥೆ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್, ಭಾರತ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಕಜಕಸ್ತಾನ, ಕಿರ್ಗಿಸ್ತಾನ ಮತ್ತು ಉಜ್ಬೇಕಿಸ್ತಾನದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಈ ಸಭೆಯಲ್ಲಿ ಭಯೋತ್ಪಾದನೆ, ಅಂತಾರಾಷ್ಟ್ರೀಯ ಹಾಗೂ ಪ್ರಾದೇಶಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಉದ್ದೇಶವನ್ನು ಹೊಂದಿದ್ದು, ಯಾವುದೋ ಒಂದು ರಾಷ್ಟ್ರವನ್ನು ಗುರಿಯಾಗಿಸಿ ದಾಳಿ ಮಾಡುವ ಉದ್ದೇಶವಿಲ್ಲ. ಹೀಗಾಗಿ ಭಾರತ ಈ ಸಭೆಯಲ್ಲಿ ಪಾಕಿಸ್ತಾನವನ್ನು ಗುರಿಯಾಗಿಸುವ ಅಗತ್ಯವಿಲ್ಲ ಎಂದು ಚೀನಾ ಹೇಳಿದೆ.

ಇದೇ ಮೊದಲ ಬಾರಿಗೆ ಬಹುಪಕ್ಷೀಯ ರಾಷ್ಟ್ರಗಳ ಸಭೆಯಲ್ಲಿ ಮೋದಿ ಹಾಗೂ ಇಮ್ರಾನ್ ಖಾನ್ ಪರಸ್ಪರ ಮುಖಾಮುಖಿಯಾಗುತ್ತಿದ್ದು, ಕುತೂಹಲ ಮೂಡಿಸಿದೆ. ಇನ್ನು ಮೋದಿ ಸಭೆಯ ಬೆನ್ನಲ್ಲೇ ಪುಟಿನ್ ಹಾಗೂ ಜಿನ್ ಪಿಂಗ್ ಜತೆ ಪ್ರತ್ಯೇಕ ಸಭೆ ನಡೆಸಲಿದ್ದು, ಇಮ್ರಾನ್ ಖಾನ್ ಜತೆ ಮಾತುಕತೆ ನಡೆಸಲು ಒಪ್ಪಿಲ್ಲ. ಅತ್ತ ಅಮೆರಿಕ ರಫ್ತು ವಿನಾಯಿತಿ ಪಟ್ಟಿಯಿಂದ ಭಾರತವನ್ನು ಹೊರಗಿಟ್ಟಿದ್ದು, ರಷ್ಯಾ ಜತೆಗಿನ ಮಿಲಿಟರಿ ಒಪ್ಪಂದಗಳಿಗೆ ಪ್ರತೀಕಾರದ ಹೆಜ್ಜೆ ಇಟ್ಟಿದೆ. ಇನ್ನು ಅಮೆರಿಕ ಹಾಗೂ ಚೀನಾ ನಡುವೆ ಸುಂಕ ಯುದ್ಧ ನಡೆಯುತ್ತಿದ್ದು, ಈ ಮಧ್ಯೆ ಮೋದಿ ಈ ಎರಡು ದೇಶಗಳ ನಾಯಕರ ಜತೆಗಿನ ಭೇಟಿ ಸಾಕಷ್ಟು ಗಮನ ಸೆಳೆದಿದೆ.

Leave a Reply