ನನ್ನ ವಿರುದ್ಧ ಸುಳ್ಳುಸುದ್ದಿ ಪ್ರಕಟಿಸಿದವರನ್ನು ಬಂಧಿಸಿದ್ರೆ ಮಾಧ್ಯಮಗಳಲ್ಲಿ ಹೆಚ್ಚು ಸಿಬ್ಬಂದಿ ಇರೋಲ್ಲ: ರಾಹುಲ್ ವ್ಯಂಗ್ಯ!

ಡಿಜಿಟಲ್ ಕನ್ನಡ ಟೀಮ್:

‘ಆರ್ ಎಸ್ಎಸ್ ಹಾಗೂ ಬಿಜೆಪಿ ನನ್ನ ವಿರುದ್ಧ ನೀಡಿರುವ ಪ್ರಾಯೋಜಿತ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ ಮಾಧ್ಯಮದವರನ್ನು ಬಂಧಿಸಿದರೆ ದೇಶದ ಬಹುತೇಕ ಮಾಧ್ಯಮಗಳಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿ ಕಾಡಲಿದೆ…’ ಇದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದಲ್ಲಿ ಪತ್ರಕರ್ತರ ಬಂಧನ ವಿರೋಧಿಸಿ ಬಿಜೆಪಿ ಹಾಗೂ ಮಾಧ್ಯಮಗಳ ವಿರುದ್ಧ ಆಡಿರುವ ವ್ಯಂಗ್ಯದ ಮಾತು.

ಉತ್ತರ ಪ್ರದೇಶದಲ್ಲಿ ಹಿಂದಿ ಪತ್ರಕರ್ತ ಪ್ರಶಾಂತ್ ಕನೊಜಿಯಾ ಅವರು ಸಿಎಂ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಆಕ್ಷೇಪಾರ್ಹ ಸುದ್ದಿಯನ್ನು ಪ್ರಕಟಿಸಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ. ಈ ಬೆಳವಣಿಗೆಯನ್ನು ಟ್ವಿಟರ್ ಮೂಲಕ ಟೀಕಿಸಿರುವ ರಾಹುಲ್ ಗಾಂಧಿ, ‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿದ ಪತ್ರಕರ್ತನನ್ನು ಬಂಧಿಸುವ ಮೂಲಕ ಮೂರ್ಖರಂತೆ ವರ್ತಿಸುತ್ತಿದ್ದಾರೆ’ ಎಂದರು.

‘ಒಂದು ವೇಳೆ ನನ್ನ ವಿರುದ್ಧ ಬಿಜೆಪಿಯವರು ಹರಿಬಿಡುವ ಪ್ರಾಯೋಜಿತ ಸುಳ್ಳು ಸುದ್ದಿಗಳನ್ನು ಪ್ರಕಟಿಸುವ ಪತ್ರಕರ್ತರನ್ನು ಬಂಧಿಸುತ್ತಾ ಹೋದರೆ ಸುದ್ದಿಮನೆಗಳಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿ ಕಾಡಲಿದೆ’ ಎಂದು ರಾಹುಲ್ ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಟ್ವಿಟರ್ ಖಾತೆಯ ಪ್ರತಿಕ್ರಿಯೆಯಲ್ಲಿ, ‘ಬೇರೆಯವರಿಗಿಂತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೊಡ್ಡ ಪ್ರಮಾಣದಲ್ಲಿ ಸುಳ್ಳು ಸುದ್ದಿಯಿಂದ ತೊಂದರೆ ಅನುಭವಿಸಿದ್ದಾರೆ’ ಎಂದು ತಿಳಿಸಿದೆ.

Leave a Reply