ಸಿಧು ವರ್ಸಸ್ ಕ್ಯಾಪ್ಟನ್ ಅಮರಿಂದರ್ ಸಿಂಗ್! ಕೈ ಹೈಕಮಾಂಡ್ ಬೆಂಬಲ ಯಾರ ಪರ?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಆಡಳಿತವಿರುವ ಪಂಜಾಬ್ ನಲ್ಲಿ ಈಗ ಪಕ್ಷದ ಒಳಗೆ ಬಿಕ್ಕಟ್ಟು ಉದ್ಭವಿಸಿದ್ದು, ಇದನ್ನು ಬಗೆಹರಿಸುವುದು ಕಾಂಗ್ರೆಸ್ ಹೈ ಕಮಾಂಡ್ ಗೆ ಸವಾಲಾಗಿದೆ. ಹೀಗಾಗಿ ಪಕ್ಷದ ಹಿತದೃಷ್ಟಿಯಿಂದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಹಾಗೂ ಮಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ನಡುವಣ ತಿಕ್ಕಾಟವನ್ನು ಶಮನ ಮಾಡುವ ಜವಾಬ್ದಾರಿಯನ್ನು ಅಹ್ಮದ್ ಪಟೇಲ್ ಅವರಿಗೆ ವಹಿಸಲಾಗಿದೆ.

ಲೋಕಸಭೆ ಚುನಾವಣೆ ಪ್ರಚಾರದ ವೇಳೆಗೆ ಈ ಇಬ್ಬರು ಪಂಜಾಬ್ ಕಾಂಗ್ರೆಸ್ ನಾಯಕರ ನಡುವೆ ತಿಕ್ಕಾಟ ಸೃಷ್ಟಿಯಾಗಿತ್ತು. ಸದಾ ಒಂದಿಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದ ಸಿಧು ಅವರನ್ನು ಸಿಎಂ ಅಮರಿಂದರ್ ಸಿಂಗ್ ಚುನಾವಣೆ ನಂತರ ಖಾತೆ ಬದಲಾವಣೆ ಮಾಡಿ ಬಿಸಿ ಮುಟ್ಟಿಸಿದ್ದರು. ಇದರ ವಿರುದ್ಧ ತಿರುಗಿಬಿದ್ದ ಸಿಧು ಮುಖ್ಯಮಂತ್ರಿಗಳ ವಿರುದ್ಧ ಬಹಿರಂಗ ಟೀಕೆಗೆ ಮುಂದಾದರು.

ಸೋಮವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರನ್ನು ಭೇಟಿ ಮಾಡಿರುವ ಸಿಧು ಪತ್ರವನ್ನು ನೀಡಿದ್ದು, ಇದರಲ್ಲಿ ಪರಿಸ್ಥಿತಿಯನ್ನು ವಿವರಿಸಿರುವುದಾಗಿ ತಿಳಿಸಿದ್ದಾರೆ. ಹಲವು ತಿಂಗಳಿನಿಂದ ಪಂಜಾಬ್ ಕಾಂಗ್ರೆಸ್ ನಾಯಕರ ತಿಕ್ಕಾಟದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಕಾಂಗ್ರೆಸ್ ಹೈ ಕಮಾಂಡ್ ಈಗ ಸಿಧು ಭೇಟಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಕುತೂಹಲ ಮೂಡಿಸಿದೆ. ಇನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಅಷ್ಟು ಸುಲಭವಾಗಿ ಕಡೆಗಣಿಸುವ ಪರಿಸ್ಥಿತಿಯಲ್ಲೂ ಇಲ್ಲ.

ಕಾರಣ ಇಡೀ ದೇಶದಲ್ಲಿ ಬಿಜೆಪಿ ಕೇಸರಿ ಅಲೆ ಎಬ್ಬಿಸುತ್ತಿದ್ದ ಸಂದರ್ಭದಲ್ಲಿ ಅಮರಿಂದರ್ ಸಿಂಗ್ ತಮ್ಮ ಸ್ವಂತ ವರ್ಚಸ್ಸಿನಿಂದ ಪಂಜಾಬ್ ನಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದು ಕೂರಿಸಿದ್ದಾರೆ. ಹೀಗಾಗಿ ಪಂಜಾಬ್ ಕಾಂಗ್ರೆಸ್ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿ ಹೆಜ್ಜೆ ಇಡಲಿದೆ ಯಾರ ಮನವೊಲಿಸಿ ಸಮಸ್ಯೆ ಬಗೆಹರಿಸುತ್ತದೆ ಎಂಬ ಕುತೂಹಲ ಮೂಡಿದೆ.

Leave a Reply