ಚೀನಾ ಮೇಲೆ ಸರ್ಜಿಕಲ್ ದಾಳಿ ಮಾಡಿ ಎಂದ ಹಾರ್ದಿಕ್ ಪಟೇಲ್! ತಿರುಗೇಟು ಕೊಟ್ಟ ಬಿಜೆಪಿ!

ಡಿಜಿಟಲ್ ಕನ್ನಡ ಟೀಮ್:

‘ಚೀನಾ ಮುಂದೆ ನಾವು ತಲೆಬಾಗುತ್ತಿದ್ದೇವೆ. ನಮ್ಮ ಯೋಧರು ಹಾಗೂ ಎಎನ್ 32 ವಿಮಾನವನ್ನು ನಮಗೆ ಹಿಂದಿರುಗಿಸುವಂತೆ ಚೀನಾಗೆ ಆಗ್ರಹಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರದಲ್ಲಿ ಹಿಂದೇಟು ಹಾಕಬಾರದು. ನಾವೆಲ್ಲರು ಅವರ ಬೆನ್ನಿಗೆ ನಿಲ್ಲುತ್ತೇವೆ. ಸರ್ಜಿಕಲ್ ದಾಳಿ ಮಾಡಿ ನಮ್ಮ ವಿಮಾನ ಹಾಗೂ ಯೋಧರನ್ನು ವಾಪಸ್ ಕರೆತರೋಣ’ ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಯುವ ನಾಯಕ ಹಾರ್ದಿಕ್ ಪಟೇಲ್ ಟ್ವೀಟ್ ಮಾಡಿ ವಿವಾದ ಸೃಷ್ಟಿಸಿ ನಂತರ ಮುಖಭಂಗ ಅನುಭವಿಸಿದ್ದಾರೆ.

ಹಾರ್ದಿಕ್ ಪಟೇಲ್ ಅವರ ಟ್ವೀಟ್ ಗೆ ಯುವಜನ ಖಾತೆ ಸಚಿವ ಕಿರಣ್ ರಿಜಿಜು ಅವರು ಪ್ರತಿಕ್ರಿಯೆ ನೀಡಿದ್ದು, ‘ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ನಿಮಗೆ ಅರುಣಾಚಲ ಪ್ರದೇಶ ಎಲ್ಲಿದೆ ಎಂಬ ಕನಿಷ್ಠ ಜ್ಞಾನವೂ ಇಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

ಜೂನ್ 3ರಂದು ವಾಯು ಪಡೆಯ ಎಎನ್ 32 ವಿಮಾನ ನಾಪತ್ತೆಯಾಗಿದ್ದು, ಒಂದು ವಾರದ ಬಳಿಕ ಮಂಗಳವಾರ ನಾಪತ್ತೆಯಾದ ವಿಮಾನದ ಅವಶೇಷಗಳು ಅರುಣಾಚಲ ಪ್ರದೇಶದ ಲಿಪ್ಪೊ ಪ್ರದೇಶದ ಉತ್ತರ ಭಾಗದ ಕಣಿವೆಯಲ್ಲಿ ಸಿಕ್ಕಿದೆ. ವಾಯುಪಡೆಯ ಎಂಐ 17 ಹೆಲಿಕಾಪ್ಟರ್ ವಿಮಾನದ ಅವಶೇಷಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಐಎಎಫ್ ಮಾಹಿತಿ ನೀಡಿದೆ.

ಎಎನ್ 32 ವಿಮಾನ ನಾಪತ್ತೆ ಪ್ರಕರಣದಲ್ಲಿ ಸರಿಯಾದ ಮಾಹಿತಿ ಪಡೆಯದೇ ರಾಜಕೀಯ ಮಾಡಲು ಹೋದ ಹಾರ್ದಿಕ್ ಪಟೇಲ್ ಮುಜುಗರ ಅನುಭವಿಸುವಂತಾಗಿದೆ.

Leave a Reply