ಖರ್ಗೆ ಕರ್ನಾಟಕಕ್ಕೆ, ಸಿದ್ದರಾಮಯ್ಯ ದೆಹಲಿಗೆ! ಸರ್ಕಾರ ಉಳಿಸಲು ಗೌಡ್ರ ಸೂತ್ರ?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ – ಜೆಡಿಎಸ್ ನಡುವಿನ ಹಗ್ಗಾಜಗ್ಗಾಟ ತೆರೆಮರೆಯಲ್ಲಿ ಮುಂದುವರಿದಿದ್ದು, ಇದರ ಜತೆಗೆ ಜತೆಗೆ ಕಾಂಗ್ರೆಸ್ ನಲ್ಲಿ ಆಂತರಿಕ ಬಿಕ್ಕಟ್ಟು ಇದೆ. ಇವೆಲ್ಲದರ ಪರಿಣಾಮ ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬುಲಾವ್ ನೀಡಿದೆ. ಸೋಲಿಲ್ಲದ ಸರದಾರ ಅನ್ನೋ ಖ್ಯಾತಿಯನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಳೆದುಕೊಂಡ ಖರ್ಗೆ ಅವರಿಗೆ ಕಾಂಗ್ರೆಸ್ ಯಾವ ಸ್ಥಾನಮಾನ ಕೊಡುತ್ತೆ ಅನ್ನೋ ಕುತೂಹಲ ಹೆಚ್ಚಾಗಿದೆ. ಕಳೆದ ಲೋಕಸಭಾ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತಿನಿಂದ ಚಾಟಿ ಬೀಸುವ ಮೂಲಕ ಮನೆಮಾತಾಗಿದ್ದ ಮಲ್ಲಿಕಾರ್ಜುನ ಖರ್ಗೆ, ದೆಹಲಿ ರಾಜಕಾರಣದಲ್ಲೇ ಆಸಕ್ತಿ ಹೊಂದಿದ್ದಾರೆ. ಜೊತೆಗೆ ಹೈಕಮಾಂಡ್ ಸೂಚಿಸಿದ್ರೆ ರಾಜ್ಯ ರಾಜಕಾರಣಕ್ಕೆ ಬರಲೂ ಸಿದ್ಧರಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೈಕಮಾಂಡ್ ಬುಲಾವ್ ಕೊಟ್ಟು, ದಿಢೀರನೆ ದೆಹಲಿಗೆ ಕರೆಸಿಕೊಂಡಿರುವುದಕ್ಕೂ ಮಾಜಿ ಪ್ರಧಾನಿ ದೇವೇಗೌಡರ ದೆಹಲಿ ಭೇಟಿಗೂ ಸಂಬಂಧ ಇದ್ಯಾ ಅನ್ನೋ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮೊನ್ನೆಯಷ್ಟೇ ದೇವೇಗೌಡ-ರಾಹುಲ್ ಗಾಂಧಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ವೇಳೆ ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ಮಾಡಲಾಗಿದ್ದು, ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದಾರೆ ಎಂಬ ವರದಿಗಳು ಬಂದಿವೆ. ಹೀಗಾಗಿ ರಾಜ್ಯದ ಪರಿಸ್ಥಿತಿ ಕುರಿತಾಗಿ ರಾಹುಲ್ ಅವರು ಖರ್ಗೆ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಖರ್ಗೆ ಅವರನ್ನು ರಾಜ್ಯ ರಾಜಕಾರಣಕ್ಕೆ ಕಳುಹಿಸುವ ಬಗ್ಗೆ ರಾಹುಲ್ ಗಾಂಧಿ ಅಭಿಪ್ರಾಯ ಕೇಳುವ ಸಾಧ್ಯತೆಯೂ ಇದೆ.

ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಹಾವಳಿ ಜಾಸ್ತಿಯಾಗಿದ್ದು, ಸಿದ್ದು ಪ್ರಭಾವ ಕುಗ್ಗಿಸಲು ದೇವೇಗೌಡರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಇದೇ ಕಾರಣಕ್ಕೆ ಗೌಡರು ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿದ್ದು, ಅದರ ಪರಿಣಾಮವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ ಎನ್ನಲಾಗಿದೆ. ದೇವೇಗೌಡರ ಸಲಹೆಯಂತೆ ಸಿದ್ದರಾಮಯ್ಯ ಅವರಿಗೆ ದೆಹಲಿಯಲ್ಲಿ ಸ್ಥಾನಮಾನ ಕಲ್ಪಿಸಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯ ರಾಜಕಾರಣಕ್ಕೆ ಕಳುಹಿಸಿದ್ರೆ ಸರ್ಕಾರ ಸೇಫ್ ಅನ್ನೋ ಲೆಕ್ಕಾಚಾರ ನಡೆಯುತ್ತಿದೆ. ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣಕ್ಕೆ ಸಮನ್ವಯ ಸಮಿತಿ ಅಧ್ಯಕ್ಷರಾಗುವ ಮೂಲಕ ಎಂಟ್ರಿ ಕೊಟ್ಟರೆ ರಾಜ್ಯ ಸರ್ಕಾರಕ್ಕೂ ಅಡ್ಡಿ ಆತಂಕ ಇರೋದಿಲ್ಲ, ಜೊತೆಗೆ ದೇವೇಗೌಡರ ಮಾತನ್ನು ಖರ್ಗೆ ಅಲ್ಲಗಳೆಯುವುದಿಲ್ಲ, ದಲಿತ ನಾಯಕನಿಗೆ ಸಂಪುಟ ಸ್ಥಾನಮಾನ ಕೊಟ್ಟ ಶ್ರೇಯಸ್ಸು ಗೌಡರ ಪಾಲಾಗಲಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಖರ್ಗೆ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್ ಕೊಟ್ಟಿದ್ದು, ಇಂದು ಅಥವಾ ನಾಳೆಯೊಳಗೆ ಸಿದ್ದರಾಮಯ್ಯ ಅವರಿಗೂ ಬುಲಾವ್ ಬರುವ ನಿರೀಕ್ಷೆ ಮಾಡಲಾಗಿದೆ. ಇನ್ನೊಂದೆರಡು ದಿನದಲ್ಲಿ ರಾಜ್ಯದಲ್ಲಿ ಹೊಸ ರಾಜಕೀಯ ಲೆಕ್ಕಾಚಾರದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.

Leave a Reply