ಕೇಂದ್ರ ಸಚಿವ ಸಂಪುಟದಲ್ಲಿ ತ್ರಿವಳಿ ತಲಾಕ್ ನಿಷೇಧ ಮಸೂದೆ ಚರ್ಚೆ! ಮುಂದಿನ ಅಧಿವೇಶನದಲ್ಲಿ ಮತ್ತೊಮ್ಮೆ ಮಂಡನೆ

ಡಿಜಿಟಲ್ ಕನ್ನಡ ಟೀಮ್:

ತ್ರಿವಳಿ ತಲಾಕ್ ನಿಷೇಧ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯದ ಕಾರಣ, 16ನೇ ಲೋಕಸಭೆ ವಿಸರ್ಜನೆಯಿಂದ ಈ ಕುರಿತ ಸುರ್ಗೀವಾಜ್ಞೆ ಅಸಿಂಧುವಾಗಿದ್ದು ಇಂದು ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನೂತನವಾಗಿ ಮಸೂದೆ ಸಿದ್ಧಪಡಿಸುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಅಲ್ಲದೆ ಈ ಮಸೂದೆಯನ್ನು ಜೂನ್ 17ರಂದು ಆರಂಭವಾಗಲಿರುವ 17ನೇ ಲೋಕಸಭೆಯ ಮೊದಲ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುವುದು.

ಕಳೆದ ಫೆಬ್ರವರಿಯಲ್ಲಿ ಎನ್ಡಿಎ ಸರ್ಕಾರ ತ್ರಿವಳಿ ತಲಾಕ್ ಪದ್ಧತಿ ನಿಷೇಧಿಸಿ ಸುರ್ಗೀವಾಜ್ಞೆ ಹೊರಡಿಸಿತ್ತು. ನಂತರ ಇದಕ್ಕೆ ಸಂಬಂಧಿಸಿದ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸದ ಹಿನ್ನೆಲೆಯಲ್ಲಿ ಈ ಸುಗ್ರೀವಾಜ್ಞೆ 6 ತಿಂಗಳ ನಂತರ ಅನೂರ್ಜಿತವಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತೆ ನೂತನ ಮಸೂದೆ ರಚಿಸಿ ಲೋಕಸಭೆ ಹಾಗೂ ರಾಜ್ಯಸಭೆಗಳ ಮುಂದಿಡಲಿದೆ. ಲೋಕಸಭಾ ಕ್ಷೇತ್ರಗಳಲ್ಲಿ ಭರ್ಜರಿ ಯಶಸ್ಸು ಸಾಧಿಸಿದ ನಂತರ ಮುಂದಿನ ವರ್ಷದ ವೇಳೆಗೆ ರಾಜ್ಯ ಸಭೆಯಲ್ಲೂ ಬಿಜೆಪಿ ಬಹುಮತ ಪಡೆಯುವ ನಿರೀಕ್ಷೆ ಇದೆ. ಅಲ್ಲಿಯವರೆಗೂ ಈ ಮಸೂದೆಯನ್ನು ಮತ್ತೆ ಮತ್ತೆ ಮಂಡನೆ ಮಾಡುವ ಸಾಧ್ಯತೆಗಳಿವೆ.

ಈ ತ್ರಿವಳಿ ತಲಾಕ್ ನಿಷೇಧ ಮಸೂದೆ ವಿನಾ ಕಾರಣ ಮುಸಲ್ಮಾನ ಮಹಿಳೆಯರು ಶೋಷಣೆಗೆ ಒಳಗಾಗುವುದನ್ನು ತಪ್ಪಿಸುವ ಉದ್ದೇಶದಿಂದ ಈ ಮಸೂದೆ ಜಾರಿ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ವಾದಿಸುತ್ತಿದೆಯಾದರೂ ಇದರಲ್ಲಿ ತ್ರಿವಳಿ ತಲಾಕ್ ನೀಡಿದ ಪತಿಗೆ ಜೈಲುವಾಸ ನೀಡುವುದು ಸರಿಯಲ್ಲ ಎಂದು ಹೇಳಿ ವಿರೋಧ ಪಕ್ಷಗಳು ಮಸೂದೆ ಅಂಗೀಕಾರಕ್ಕೆ ವಿರೋಧಿಸುತ್ತಿವೆ.

Leave a Reply