ಸ್ಯಾಂಡಲ್ ವುಡ್ ನಲ್ಲಿ ನಟಿಯರ ವಾರ್! ರಚಿತಾ ವಿರುದ್ಧ ಪ್ರಿಯಾಂಕಾ ಗರಂ!

ಡಿಜಿಟಲ್ ಕನ್ನಡ ಟೀಮ್:

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕುಳಿಗೆನ್ನೆ ಚೆಲುವೆ ರಚಿತಾ ರಾಮ್ ಅಭಿನಯದ ‘ಐ ಲವ್ ಯೂ’ ಚಿತ್ರ ತೆರೆಗೆ ಬರುವ ಹೊತ್ತಲ್ಲಿ ರಚಿತಾ ಹಾಗೂ ಉಪೇಂದ್ರ ಪತ್ನಿ ಪ್ರಿಯಾಂಕಾ ಮಾತಿನ ಚಕಮಕಿ ನಡೆಸಿದ್ದಾರೆ.

ಕಾರಣ, ‘ಚಿತ್ರದಲ್ಲಿ ಹಾಡೊಂದರಲ್ಲಿ ನಾನು ಹಾಟ್ ಆಗಿ ಕಾಣಿಸಿಕೊಳ್ಳಲು ಉಪೇಂದ್ರ ಶೂಟಿಂಗ್ ಕಾರಣ’ ಎಂದು ನಟಿ ರಚಿತಾ ರಾಮ್ ಹೇಳಿದ್ದಾರೆ.

ರಚಿತಾ ಹೇಳಿಕೆಗೆ ಗರಂ ಆಗಿರುವ ಪ್ರಿಯಾಂಕಾ ಉಪೇಂದ್ರ ಹೇಳಿರುವುದಿಷ್ಟು… ‘ಹಾಡಿನಲ್ಲಿ ಹಸಿಬಿಸಿ ದೃಶ್ಯಗಳಿಂದ ಕೆಟ್ಟ ಭಾವನೆ ಬರುತ್ತಿದೆ. ಇದರ ಜತೆಗೆ ರಚಿತಾ ಪ್ರತಿ ಸಂದರ್ಶನದಲ್ಲೂ ಪದೇ ಪದೇ ಉಪೇಂದ್ರ ಅವರ ಹೆಸರು ತರುತ್ತಿದ್ದಾರೆ. ರಚಿತಾ ಚಿತ್ರದಲ್ಲಿನ ತಮ್ಮ ಪಾತ್ರ ಹಾಗೂ ಅಭಿನಯದ ಬಗ್ಗೆ ಮಾತನಾಡಬೇಕೆ ಹೊರತು ಅನಗತ್ಯವಾಗಿ ಉಪೇಂದ್ರ ಅವರ ಹೆಸರು ತರುವುದು ಸರಿಯಲ್ಲ. ರಚಿತಾ ನಿನ್ನೆ ಮೊನ್ನೆ ಚಿತ್ರರಂಗಕ್ಕೆ ಬಂದವರಲ್ಲ.

ಈ ಚಿತ್ರ ಕೌಟುಂಬಿಕ ಕಥೆ ಎಂದು ಕೇಳಿದ್ದೆ, ಈ ಹಾಡಿನ ಬಗ್ಗೆ ಟ್ರೈಲರ್ ನೋಡುವವರೆಗೂ ಗೊತ್ತಿರಲಿಲ್ಲ. ಈ ಬಗ್ಗೆ ಉಪೇಂದ್ರ ಅವರನ್ನು ವಿಚಾರಿಸಿದಾಗ ಇದು ಸಿನಿಮಾದ ಹಾಡು ಎಂದರು. ರಚಿತಾ ಈ ಹಾಡಿನ ಬಗ್ಗೆ ಪ್ರಶ್ನೆ ಕೇಳಿದಾಗೆಲ್ಲಾ ನಿರ್ದೇಶಕ ಚಂದ್ರು ಹಾಗೂ ಕೋರಿಯೋಗ್ರಾಫರ್ ಚಿನ್ನಿ ಪ್ರಕಾಶ್ ಬಗ್ಗೆ ಮಾತನಾಡದೇ. ಈ ಹಾಡನ್ನು ಉಪೇಂದ್ರ ನಿರ್ದೇಶಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ಸರಿಯಲ್ಲ. ಚಿತ್ರದ ಇತರೆ ವಿಚಾರವನ್ನು ಬಿಟ್ಟು ಈ ಹಾಡಿನ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಅವರಿಗೆ ಈ ಹಾಡು ಇಷ್ಟವಾಗದಿದ್ದರೆ, ಒಪ್ಪಿಕೊಳ್ಳಬಾರದಿತ್ತು. ಆ ಹಾಡಿನ ಶೂಟಿಂಗ್ ಮಾಡಿ ಈಗ ಉಪೇಂದ್ರ ಅವರ ಹೆಸರು ತರುತ್ತಿದ್ದಾರೆ.’

ಈ ವಿವಾದಕ್ಕೆ ಸಂಬಂಧಿಸಿದಂತೆ ಕೊನೆಗೆ ರಚಿತಾ ಸ್ಪಷ್ಟನೆ ನೀಡಿದ್ದು ಹೀಗೆ…
‘ಉಪೇಂದ್ರ ಅವರು ಹಾಡಿನ ನಿರ್ದೇಶನ ಮಾಡಿದ್ದಾರೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ನಿರ್ದೇಶನದಲ್ಲಿ ಉಪ್ಪಿ ಸರ್ ಕಿಂಗ್ ಆಗಿದ್ದಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಚಿತ್ರದ ಹಾಡೊಂದರಲ್ಲಿ ನಾನು ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ನನ್ನ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಹೀಗಾಗಿ ಇನ್ನು ಮುಂದೆ ಈ ರೀತಿಯ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೇನೆಯೇ ಹೊರತು ಸದ್ಯ ಆಗಿ ಹೋಗಿರುವುದಕ್ಕೆ ನಾನು ಏನು ಹೇಳುವುದಿಲ್ಲ.’

Leave a Reply