ಅಮಿತ್ ಶಾಗೆ ಪರ್ಯಾಯ ನಾಯಕ ಬಿಜೆಪಿಯಲ್ಲಿ ಇನ್ನೊಬ್ಬರಿಲ್ಲ! ಅಧ್ಯಕ್ಷರಾಗಿ ಶಾ ಮುಂದುವರಿಕೆ?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ನಲ್ಲಿ ಹೇಗೆ ರಾಹುಲ್ ಗಾಂಧಿಯನ್ನು ಹೊರತಾಗಿ ಬೇರೊಬ್ಬರನ್ನು ಅಧ್ಯಕ್ಷ ಎಂದು ಒಪ್ಪಿಕೊಳ್ಳದ ಮನಸ್ಥಿತಿ ಇದೆಯೋ ಅದೇ ಮನಸ್ಥಿತಿ ಬಿಜೆಪಿಯಲ್ಲೂ ಇದೆ. ಪರಿಣಾಮ ಸದ್ಯದ ಮಟ್ಟಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಅಮಿತ್ ಶಾ ಅವರೇ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ.

ಹೌದು, ನವದೆಹಲಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಇದರಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿ ಅಮಿತ್ ಶಾ ಅವರನ್ನೇ ಮುಂದುವರಿಸುವ ಸಾಧ್ಯತೆ ಹೆಚ್ಚಾಗಿದೆ.

ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ದಾಖಲಿಸಿ ಕೇಂದ್ರ ಗೃಹ ಸಚಿವ ಸ್ಥಾನ ಅಲಂಕರಿಸಿದ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ತ್ಯಜಿಸುವ ನಿರೀಕ್ಷೆ ಇತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಮಿತ್ ಶಾ ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದು, ಇದಕ್ಕೆ ಮುಂಬರುವ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆ ಕಾರಣ ಎಂದು ಹೇಳಲಾಗುತ್ತಿದೆ.

2014ರ ಲೋಕಸಭೆ ಚುನಾವಣೆಯಿಂದ ಹಿಡಿದು ಇತ್ತೀಚೆಗೆ ನಡೆದ 2019ರ ಚುನಾವಣೆವರೆಗೂ ಉತ್ತರ ಪ್ರದೇಶ ಸೇರಿದಂತೆ ಇತರೆ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸುವಂತೆ ಕಾರ್ಯತಂತ್ರ ಎಣೆದಿದ್ದ ಅಮಿತ್ ಶಾ, ಮುಂಬರುವ ಹರಿಯಾಣ, ಜಾರ್ಖಂಡ್ ಹಾಗೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲೂ ಪಕ್ಷವನ್ನು ಮುನ್ನಡೆಸಲಿದ್ದಾರೆ.

ಹೀಗಾಗಿ ಸದ್ಯಕ್ಕೆ ಅಮಿತ್ ಶಾ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಿ, ಆರು ತಿಂಗಳ ನಂತರ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಸಾಧ್ಯತೆ ದಟ್ಟವಾಗಿವೆ.

2014ರ ಜುಲೈನಲ್ಲಿ ಬಿಜೆಪಿ ಪಕ್ಷದ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. 2017ರ ವೇಳೆಗೆ ಅವರ ಅಧಿಕಾರದ ಅವಧಿ ಮುಗಿದಿತ್ತು. ಆದರೆ, 2019ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸಲು ಪಕ್ಷ ತೀರ್ಮಾನ ಮಾಡಿತ್ತು. ಈಗಲೂ ಸಹ ಅದೇ ರೀತಿ ಶಾ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆ ಇದೆ.

ಇನ್ನು ಮೋದಿ ಸರ್ಕಾರದ ಬಹುತೇಕ ಸಂಸದೀಯ ಸಮಿತಿಗಳಲ್ಲಿ ಅಮಿತ್ ಶಾ ಭಾಗವಾಗಿದ್ದು, ಬಿಜೆಪಿಯಲ್ಲಿ ಶಾಗೆ ಪರ್ಯಾಯವಾಗಿ ಮತ್ತೊಬ್ಬ ನಾಯಕನಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

Leave a Reply