ಬೆಳಗ್ಗೆ 9.30ಗೆ ಕಚೇರಿಗೆ ಹಾಜರಾಗಬೇಕು: ಸಚಿವರಿಗೆ ಮೋದಿ ಕೊಟ್ರು ಪ್ರಮುಖ ಸಲಹೆ- ಸೂಚನೆಗಳು!

ಡಿಜಿಟಲ್ ಕನ್ನಡ ಟೀಮ್:

ಎರಡನೇ ಅವಧಿಗೆ ಪ್ರಧಾನಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ತನ್ನ ನೂತನ ಸಚಿವ ಸಂಪುಟ ಸಹೊದ್ಯೋಗಿಗಳಿಗೆ ಕೆಲವು ಪ್ರಮುಖ ಸೂಚನೆ ಹಾಗೂ ಸಲಹೆಗಳನ್ನು ನೀಡಿದ್ದು, ‘ಎಲ್ಲ ಸಚಿವರುಗಳು ಬೆಳಗ್ಗೆ 9.30ಕ್ಕೆ ತಮ್ಮ ಕಚೇರಿಗೆ ಹಾಜರಾಗಿ ಸಚಿವಾಲಯದ ಕಾರ್ಯಗಳನ್ನು ಮಾಡಬೇಕು. ಮನೆಯಲ್ಲಿ ಕೂತು ಕೆಲಸ ಮಾಡುವುದನ್ನು ಬಿಟ್ಟು, ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸಬೇಕು. ಅದರೊಂದಿಗೆ ಅಧಿಕಾರಿಗಳು ಸೇರಿದಂತೆ ಇತರರಿಗೆ ಮಾದರಿಯಾಗಬೇಕು’ ಎಂದು ತಿಳಿಸಿದ್ದಾರೆ.

ಸಚಿವ ಸಂಪುಟ ರಚನೆಯಾದ ಬಳಿಕ ಮೊದಲ ಬಾರಿಗೆ ತಮ್ಮ ನೇತೃತ್ವದಲ್ಲಿ ಸಚಿವರುಗಳ ಸಭೆ ನಡೆಸಿರುವ ಮೋದಿ, ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಚಿವರುಗಳಿಗೆ ಕೆಲವು ಸಲಹೆ ಹಾಗೂ ಸೂಚನೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಸಚಿವರುಗಳು ಪ್ರತಿದಿನ ಬೆಳಗ್ಗೆ 9.30ಕ್ಕೆ ಕಚೇರಿಗೆ ಹಾಜರಾಗಿ ಇತರರಿಗೂ ಮಾದರಿಯಾಗಿ ಕಾರ್ಯ ನಿರ್ವಹಿಸಬೇಕು ಎಂಬುದು ಸೇರಿದೆ.

ಈ ವಿಚಾರವಾಗಿ ಸಚಿವರೊಬ್ಬರು ಮಾಹಿತಿ ನೀಡಿದ್ದು, ‘ಮೋದಿ ಅವರು ಗುಜರಾತ್ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ತಮ್ಮ ಕಚೇರಿಗೆ ತೆರಳುತ್ತಿದ್ದರು. ಆ ಮೂಲಕ ಇತರೆ ಅಧಿಕಾರಿಗಳೂ ಮಾದರಿಯಾಗಿ ಅವರಿಗೆ ಪರಿಣಾಮಕಾರಿ ಕೆಲಸ ತೆಗೆಯುತ್ತಿದ್ದರು. ಹೀಗೆ ತಾವೇ ಮಾದರಿಯಾಗಿರುವ ಮೋದಿ ತಮ್ಮ ಸಚಿವರಿಗೂ ಇದನ್ನೇ ಪಾಲಿಸುವಂತೆ ಸೂಚಿಸಿದ್ದಾರೆ’ ಎಂದಿದ್ದಾರೆ.

ಮೋದಿ ಅವರು ನೀಡಿರುವ ಸಲಹೆ ಹಾಗೂ ಸೂಚನೆಗಳು ಹೀಗಿವೆ…

  • ಇದೇ ವೇಳೆ ಸಂಸತ್ ಅಧಿವೇಶನ ನಡೆಯುವ 40 ದಿನಗಳ ಅವಧಿಯಲ್ಲಿ ಹೊರಗಿನ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಿ.
  • ಹೊಸದಾಗಿ ಆಯ್ಕೆಯಾಗಿರುವ ಸಚಿವರುಗಳಿಗೆ ಹಿರಿಯ ಸಚಿವರುಗಳ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಬೇಕು.
  • ಇನ್ನು ಸಚಿವರುಗಳು ಸಂಸದರಿಗೆ ಹೆಚ್ಚಿನ ಕಾಲಾವಕಾಶವನ್ನು ಕೊಟ್ಟು ಅವರೊಂದಿಗೆ ಚರ್ಚೆ ಮಾಡಬೇಕು.
  • ಆಗಾಗ್ಗೆ ಸಚಿವಾಲಯದಲ್ಲಿ ಆಗುತ್ತಿರುವ ಕೆಲಸಗಳು ಹಾಗೂ ಬದಲಾವಣೆಗಳ ಕುರಿತಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ.
  • ಐದು ವರ್ಷಗಳ ಕಾಲಾವಧಿಯ ಅಜೆಂಡಾ ರೂಪಿಸಿ ಅದಕ್ಕೆ 100 ದಿನಗಳ ಒಳಗಾಗಿ ತೆಗೆದುಕೊಳ್ಳಬೇಕಿರುವ ಅಗತ್ಯ ಕ್ರಮಗಳನ್ನು ಪಟ್ಟಿ ಮಾಡಿಕೊಂಡು ಬನ್ನಿ.

Leave a Reply