ಡಿಜಿಟಲ್ ಕನ್ನಡ ಟೀಮ್:
ಬ್ಯಾಂಕ್ ಗ್ರಾಹಕರಿಗೆ ಆರ್ ಬಿಐ ಸಿಹಿ ಸುದ್ದಿ ಕೊಟ್ಟಿದೆ. ಅದೇನಪ್ಪಾ ಅಂದ್ರೆ, ಇನ್ಮುಂದೆ ಗ್ರಾಹಕರು ಮಾಡುವ ಹಣಕಾಸು ಇ-ವರ್ಗಾವಣೆಗೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ರದ್ದುಗೊಳಿಸಿದೆ.
ಆರ್ ಬಿಐನ ಈ ನೂತನ ನಿರ್ಧಾರ ಜುಲೈ 1ರಿಂದ ಜಾರಿಯಾಗಲಿದ್ದು, ಈ ನಿಯಮವನ್ನು ಜಾರಿಗೊಳಿಸುವಂತೆ ಎಲ್ಲ ಬ್ಯಾಂಕುಗಳಿಗೆ ಆರ್ ಬಿಐ ಸೂಚನೆ ನೀಡಿದೆ. ಇದರೊಂದಿಗೆ ಗ್ರಾಹಕರು ಮುಂದಿನ ತಿಂಗಳು 1ರಿಂದ ಮಾಡಲಾಗುವ ರಿಯಲ್ ಟೈಮ್ ಗ್ರಾಸ್ ಸೆಟ್ಲಮೆಂಟ್ ಸಿಸ್ಟಮ್ (ಆರ್ ಟಿಜಿಎಸ್) ಮತ್ತು ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್ (ಎನ್ಇಎಫ್ ಟಿ)ಗೆ ಯಾವುದೇ ಶುಲ್ಕ ಬೀಳುವುದಿಲ್ಲ.
ಇದುವರೆಗೂ ಗ್ರಾಹಕರು ಎನ್ಇಎಫ್ ಟಿ ವರ್ಗಾವಣೆಗೆ ರೂ.5ವರೆಗೆ ಹಾಗೂ ಆರ್ ಟಿಜಿಎಸ್ ವರ್ಗಾವಣೆಗೆ 50 ರೂ.ವರೆಗೂ ಶುಲ್ಕ ವಿಧಿಸಲಾಗುತ್ತಿತ್ತು. ಇದರ ಜತೆಗೆ ವಾರ್ಷಿಕವಾಗಿ 10 ಲಕ್ಷ ರೂ.ಗಿಂತ ಹೆಚ್ಚಿನ ನಗದನ್ನು ಪಡೆದರೆ ತೆರಿಗೆ ವಿಧಿಸಲು ಸರ್ಕಾರ ಚರ್ಚೆ ನಡೆಸುತ್ತಿದೆ. ಗ್ರಾಹಕರು ಇ- ವರ್ಗಾವಣೆಯನ್ನು ಹೆಚ್ಚು ಬಳಸುವಂತೆ ಪ್ರೋತ್ಸಾಹಿಸಲು ಈ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದರಿಂದ ಸಹಜವಾಗಿಯೇ ಹಣ ವಹಿವಾಟಿನ ಮೇಲೆ ನಿಗಾ ಇಡಬಹುದು.